ಬೆಂಗಳೂರು: ನಗರದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿ, 2 ದ್ವಿಚಕ್ರ ವಾಹನ ಹಾಗೂ ಮದ್ಯಗಳನ್ನು ನಗರ ಪಶ್ಚಿಮ ವಲಯ ಅಬಕಾರಿ ಉಪ ಆಯುಕ್ತರ ವಶಪಡಿಸಿಕೊಂಡಿದ್ದಾರೆ.
ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ನಿಷೇಧವಿದ್ದಾಗಿಯೂ ಅಕ್ರಮ ಚೈನ್ ಲಿಂಕ್ ಮಾದರಿಯಲ್ಲಿ ಒಂದರಿಂದ ಒಬ್ಬರಿಗೆ ಮೊಬೈಲ್ ವಾಟ್ಸಪ್ ಬಳಸಿ ಹೈಟೆಕ್ ಮಾದರಿಯಲ್ಲಿ ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿದ್ದ ನಾಲ್ವರನ್ನು ಅಬಕಾರಿ ಪೊಲೀಸರು ಬಂಧಿಸಿ 8 ವಿವಿಧ ಬ್ರಾಂಡಿನ ಮದ್ಯ ಬಾಟಲುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಿಂದ ವಿವಿಧ ಬ್ರಾಂಡ್ ಗಳ 12 ಮದ್ಯದ ಬಾಟಲ್ ಹಾಗೂ ಕೃತ್ಯಕ್ಕೆ ಬಳಸಿದ ಎರಡು ದ್ವಿಚಕ್ರ ವಾಹನಗಳನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪದ್ಮನಾಭನಗರದ ದ್ವಿಚಕ್ರ ಮರು ಮಾರಾಟಗಾರ ನಿಖಿಲ್ (24), ಕಟ್ಟಡ ಗುತ್ತಿಗೆದಾರರ ಬಳಿ ಕೆಲಸ ಮಾಡುತ್ತಿದ್ದ ಚಿಕ್ಕಲ್ಲಸಂದ್ರದ ಕರಣ್ (25), ಪದ್ಮನಾಭನಗರದ ಎಂಜಿನಿರಿಂಗ್ ವಿದ್ಯಾರ್ಥಿ ಖಚಿತ್ (19), ಫೊಟೊ ಸ್ಟುಡಿಯೋದಲ್ಲಿ ಕೆಲಸ ಮಾಡುತ್ತಿದ್ದ ಭರತ್ ಚೌಹಾಣ್ (26) ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ನಾಲ್ವರು ನಗರದ ಬೇರೆ ಬೇರೆ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದು ಪರಿಚಿತರಿಗೆ ಮಾತ್ರ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದರು. ಒಂದಕ್ಕೆ ನಾಲ್ಕೈದು ಪಟ್ಟು ದುಬಾರಿ ಬೆಲೆಗೆ ಮದ್ಯ ಮಾರಾಟ ಮಾಡುತ್ತಿರುವುದು ತನಿಖೆ ವೇಳೆ ತಿಳಿದು ಬಂದಿದೆ. ಪೊಲೀಸರು ಆರೋಪಿಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.