ರೈಲ್ವೆ ಯೋಜನೆಗಳಿಗೆ ಸಕಲ ನೆರವು: ಸಿಎಂ
ದಿಗಂತ ವರದಿ ಬೆಂಗಳೂರು
ರೈಲ್ವೇ ಯೋಜನೆಗಳಿಗೆ ರಾಜ್ಯ ಸರ್ಕಾರ ಸದಾ ಬೆಂಬಲ ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಹೇಳಿದರು.
ಯಶವಂತಪುರದಲ್ಲಿ ಬೆಂಗಳೂರು- ಕಾರವಾರ ವಾಸ್ಕೋ ಮಾರ್ಗದ ನೂತನ ರೈಲಿಗೆ ಚಾಲನೆ ನೀಡಿ ಅವರು ಮಾತನಾಡಿ, ಕೇಂದ್ರ ಸರ್ಕಾರದಿಂದ ಮಂಜೂರಾಗುವ ಎಲ್ಲಾ ಯೋಜನೆಗಳನ್ನು ರಾಜ್ಯ ಸರ್ಕಾರ ಅನುಷ್ಠಾನ ಮಾಡುತ್ತಿದೆ. ನಾನು ಮುಖ್ಯಮಂತ್ರಿಆದಾಗ ಆರಂಭದಲ್ಲೇ ರೈಲ್ವೆ ಯೋಜನೆಗಳಿಗೆ ಭೂಮಿ ಹಾಗೂ ಅರ್ಧ ಹಣಕಾಸಿನ ನೆರವು ನೀಡುವುದಾಗಿ ಭರವಸೆ ನೀಡಿದ್ದೆ. ಈ ರೈಲು ಕರಾವಳಿ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿತ್ತು. ರೈಲಿನಿಂದಾಗಿ ಶಿರಾಡಿ ಘಾಟ್ ನಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ರೈಲು ಸಿಗಲಿದೆ ಎಂದು ಭರವಸೆ ನೀಡಿದರು.
ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ ನಮ್ಮ ಭಾಗದಲ್ಲಿ ಹಬ್ಬ ಬಂದಾಗ ಜನರು ಟಿಟಿ, ಟ್ಯಾಕ್ಸಿ ಮಾಡಿಕೊಂಡು ಊರಿಗೆ ಹೋಗುತ್ತಿದ್ದರು. ನಾನು ಪ್ರತಿನಿಧಿಸುವ ಚಿಕ್ಕಮಗಳೂರಿಗೆ ರೈಲು ಬಂದಿದ್ದು ನಮ್ಮ ಸರ್ಕಾರ ಬಂದ ಮೇಲೆ. ಕರಾವಳಿ ಮಂದಿ ಬೆಂಗಳೂರಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ಇದ್ದಾರೆ ಆದರೆ ಅವರಿಗೆ ಸರಿಯಾದ ರೈಲು ಇರಲಿಲ್ಲ. ಈಗ ಈ ರೈಲು ಬಂದಿರುವುದು ಸಂತಸವಾಗಿದೆ. ಇದಕ್ಕಾಗಿ ಸುರೇಶ್ ಅಂಗಡಿಯವರನ್ನು ನಾನು ಅಭಿನಂದಿಸುತ್ತೇನೆ.ಆದರೆ ಈ ಮಾರ್ಗದಲ್ಲಿ ಇರುವ ಹಳೆಯ ರೈಲುಗಳನ್ನು ನಿಲ್ಲಿಸಬೇಡಿ ಎಂದು ಮನವಿ ಮಾಡಿದರು.
ಮುಖ್ಯಮಂತ್ರಿಗಳು ಆರಂಭದಲ್ಲೇ ರೈಲ್ವೇ ಯೋಜನೆಗಳಿಗೆ ಶೇ ೫೦ ಹಣಕಾಸಿನ ಸಹಕಾರ ನೀಡುವುದಾಗಿ ಘೋಷಿಸಿದ್ದರು. ಇನ್ನೂ ಕೆಲವು
ಜಿಲ್ಲೆಗಳಿಗೆ ರೈಲುಗಳಿಲ್ಲ. ಹಾಸನ ,ಬೇಲೂರು
ಚಿಕ್ಕಮಗಳೂರು, ಶೃಂಗೇರಿಗೆ ವಯಾ ಶಿವಮೊಗ್ಗ ಮಾರ್ಗದಲ್ಲಿ ರೈಲು ಸೇವೆ ಅಗತ್ಯ
ಇದೆ ಎಂದರು.
ದಿಟ್ಟ ಮಹಿಳೆ ಕರಂದ್ಲಾಜೆ
ಈ ಮಾರ್ಗದಲ್ಲಿ ರೈಲು ಪ್ರಯಾಣಿಸಲು ಸಂಸದೆ ಶೋಭಾ ಕರಂದ್ಲಾಜೆಯವರ ಹೋರಾಟ ಕಾರಣ. ಅವರು ರಾಣಿ ಚೆನ್ನಮ್ಮನ ರೀತಿಯಲ್ಲಿ ಹೋರಾಟ ಮಾಡಿ ಈ ರೈಲು ಬರಲು ಕಾರಣವಾಗಿದ್ದಾರೆ. ಮಹಿಳಾ ದಿನಾಚರಣೆ ಪ್ರಯುಕ್ತ ಇಬ್ಬರು ಮಹಿಳೆಯರು ರೈಲು ಓಡಿಸಲಿದ್ದಾರೆ. ಎಂದು ರೈಲ್ವೇ ಇಲಾಖೆಯ ರಾಜ್ಯ ಸಚಿವ ಸುರೇಶ್ ಅಂಗಡಿ ಹೇಳಿದರು.
ವೇಳಾಪಟ್ಟಿ
ಪ್ರತಿದಿನ ಸಂಜೆ ೬ ಗಂಟೆಗೆ ಯಶವಂತಪುರದಿಂದ ಹೊರಡಲಿದ್ದು ಕುಣಿಗಲ್, ಹಾಸನ, ಪಡೀಲ್, ಉಡುಪಿ,ಕುಂದಾಪುರ,ಕಾರವಾರ ಬಳಿಕ ಬೆಳಿಗ್ಗೆ ೧೦:೩೦ಕ್ಕೆ ವಾಸ್ಕೋ ತಲುಪಲಿದೆ. ವಾಪಾಸು ಸಂಜೆ ೫:೩೦ಕ್ಕೆ ವಾಸ್ಕೋ ದಿಂದ ಹೊರಟು ಬೆಳಿಗ್ಗೆ ೮ ಗಂಟೆಗೆ ಯಶವಂತಪುರ ಕ್ಕೆ ತಲುಪಲಿದೆ.
ಇಬ್ಬರು ಲೋಕೋ ಫೈಲಟ್
ಮಹಿಳಾ ದಿನಾಚರಣೆ ಪ್ರಯುಕ್ತ ಇಬ್ಬರು ಮಹಿಳಾ ಲೋಕೋ ಪೈಲಟ್ ಗಳು ರೈಲು ಚಲಾಯಿಸಿದ್ದು ವಿಶೇಷವಾಗಿತ್ತು. ನೂತನ ರೈಲಿಗೆ ಚಾಲನೆ ನೀಡುವ ವೇಳೆ ವರುಣ ತುಂತುರು ಹನಿ ಬೀಳುತ್ತಿತ್ತು. ಹಸಿರು ನಿಶಾನೆ ತೋರುತ್ತಿದ್ದಂತೆ ಮಹಿಳಾ ಲೋಕೋ ಪೈಟ್ಗಳಾದ ಅಭಿರಾಮಿ ಹಾಗೂ ಬಾಲ ಶಿವಪಾರ್ವತಿ ರೈಲು ಚಲಾಯಿಸಿದರು.