Saturday, July 2, 2022

Latest Posts

ಬೆಂಗಳೂರು- ಕುಂದಾಪುರ ನಡುವೆ ಸಂಚರಿಸುವ ಬಸ್ಸಿನ ಇಬ್ಬರು ಚಾಲಕರಲ್ಲಿ ಕೋವಿಡ್-19 ಸೋಂಕು!

ಉಡುಪಿ: ಬೆಂಗಳೂರು – ಕುಂದಾಪುರ ನಡುವೆ ಸಂಚರಿಸುವ ಬಸ್ಸಿನ ಇಬ್ಬರು ಚಾಲಕರಲ್ಲಿ ಕೋವಿಡ್-19 ಸೋಂಕು ಪತ್ತೆಯಾಗಿದ್ದು, ಸರಕಾರದ ಸೂಚನೆಯಂತೆ ಜಿಲ್ಲೆಯ ಕೆಎಸ್‌ಆರ್‌ಟಿಸಿ ಬಸ್ಸು ಚಾಲಕರೂ ಸೇರಿ ಸುಮಾರು 600 ಮಂದಿ ಚಾಲಕರನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ ಹೇಳಿದ್ದಾರೆ.
ಉಡುಪಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಹಾರದ ಪಾರ್ಸೆಲ್‌ಗಳನ್ನು ನೀಡುತಿದ್ದ ಹೊಟೇಲ್‌ನ ಸಿಬ್ಬಂದಿಯೊಬ್ಬರಿಗೆ ಸೋಂಕು ಪತ್ತೆಯಾಗಿದೆ. ಹೊಟೇಲ್‌ಗಳಿಂದ ಆಹಾರ ಡೆಲಿವರಿ ಮಾಡುವ, ಜನಸಂದಣಿಯಿರುವ ಮಾಲ್, ಶಾಪಿಂಗ್ ಕಾಂಪ್ಲೆಕ್ಸ್, ಹೊಟೇಲ್, ಬಸ್ಸು ಇತ್ಯಾದಿಗಳ ಸಿಬ್ಬಂದಿಯನ್ನೂ ಕಡ್ಡಾಯವಾಗಿ ಸಮೀಪದ ಫೀವರ್ ಕ್ಲಿನಿಕ್‌ಗಳಲ್ಲಿ ತಪಾಸಣೆಗೆ ಒಳಪಡಿಸಲಾಗುತ್ತದೆ ಎಂದರು.
ಉಡುಪಿ ಜಿಲ್ಲೆಯಲ್ಲಿ ಸಮುದಾಯಕ್ಕೆ ನೋವೆಲ್ ಕೊರೋನಾ ವೈರಸ್ ಹಬ್ಬಿಲ್ಲ. ಜಿಲ್ಲೆಯಲ್ಲಿ ಮೂವರು ಸೋಂಕಿತರು ಮೃತಪಟ್ಟಿದ್ದರೂ ಅವರು ಕೊರೋನಾದಿಂದ ಮೃತಪಟ್ಟಿಲ್ಲ. ಆಸ್ಪತ್ರೆಗೆ ದಾಖಲಾಗುವ ಮೊದಲೇ ಇಬ್ಬರೂ ಮೃತಪಟ್ಟಿದ್ದಾರೆ. ಆದ್ದರಿಂದ ಯಾವುದೇ ಅನಾರೋಗ್ಯ ಇದ್ದರೂ ನಿರ್ಲಕ್ಷಿಸದೇ ಸೂಕ್ತ ತಪಾಸಣೆ ಮಾಡಿಸಿಕೊಳ್ಳಬೇಕು. ಪ್ರಸ್ತುತ ಬಿಎಲ್‌ಒಗಳ ಮೂಲಕ ಸಮುದಾಯ ಸರ್ವೆ ನಡೆಸಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡಿ ಸರ್ವೆ ನಡೆಯುತ್ತಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆಗಿಲ್ಲ ಆತಂಕ
ಉಡುಪಿ ಜಿಲ್ಲೆಯಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಯಾವುದೇ ಆತಂಕವಿಲ್ಲ. ಮೂವರು ವಿದ್ಯಾರ್ಥಿನಿಯರಿಗೆ ಕೋವಿಡ್ ಸೋಂಕು ಹರಡಿದ್ದರೂ ಅವರಿಗೆ ಪರೀಕ್ಷಾ ಕೇಂದ್ರಗಳಲ್ಲಿ ಸೋಂಕು ಹರಡಿದ್ದಲ್ಲ. ಹಾಗಾಗದಂತೆ ಅತ್ಯಂತ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಎಲ್ಲ ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ ಹೇಳಿದರು.
ಜಿಲ್ಲೆಯಲ್ಲಿ ಬೀಚ್ ಇತ್ಯಾದಿ ಪ್ರವಾಸಿ ತಾಣಗಳನ್ನು ಮುಚ್ಚಿಲ್ಲ. ಆದರೆ ಹೊರ ಜಿಲ್ಲೆಯ ಪ್ರವಾಸಿಗರು ಸದ್ಯ ಜಿಲ್ಲೆಗೆ ಬರುವುದು ಬೇಡ. ಅಗತ್ಯ ಇದ್ದವರು ಮಾತ್ರ ಪ್ರಯಾಣ ಮಾಡಿ, ಅನಗತ್ಯ ಪ್ರಯಾಣ ಬೇಡ ಎಂದವರು ಸಲಹೆ ಮಾಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss