ಮಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ ಸುರಿದ ಪ್ರಳಯಾಂತಕ ಮಳೆಯಿಂದಾಗಿ ತೀವ್ರ ಹಾನಿಗೊಳಗಾದ ಕುಟುಂಬಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಸೂಚನೆಯಂತೆ ತಲಾ 25 ಸಾವಿರದ ಪರಿಹಾರ ಮೊತ್ತವನ್ನು ಬೆಂಗಳೂರಿನಲ್ಲಿ ಕಂದಾಯ ಸಚಿವ ಆರ್ ಅಶೋಕ್ ವಿತರಿಸಿದರು.
ಬಿಬಿಎಂಪಿ ಪಾಲಿಕೆ ಆಡಳಿತಾಧಿಕಾರಿ ಗೌರವ ಗುಪ್ತ ಅವರು ಈ ವೇಳೆ ಉಪಸ್ಥಿತರಿದ್ದರು.
ಸತತವಾಗಿ ಸುರಿದ ಮಳೆಯಿಂದ ಹೊಸಕೆರೆಹಳ್ಳಿ ನಿವಾಸಿಗಳ ಮನೆಯಲ್ಲಿ ನೀರು ನಿಂತು ವೃದ್ಧರು, ಮಕ್ಕಳು ಸೇರಿದಂತೆ ಹಲವರು ಸಂಕಷ್ಟಕ್ಕೆ ಸಿಲುಕಿ ತೊಂದರೆ ಅನುಭವಿಸುತ್ತಿದ್ದಾರೆ. ಹೀಗೆ ಸಂಕಷ್ಟಕ್ಕೆ ಸಿಲುಕಿದ 344 ಪರಿವಾರಗಳಿಗೆ ತಲಾ ₹25000 ಚೆಕ್ ವಿತರಿಸಲಾಯಿತು.
ಪರಿಸ್ಥಿತಿ ಮೊದಲಿನಂತಾಗುವವರೆಗೂ ಸರ್ಕಾರ ಇವರ ಸಹಾಯಕ್ಕೆ ಸದಾ ಸಿದ್ಧವಾಗಿರುತ್ತದೆ pic.twitter.com/VLzmDFQORb— R. Ashoka (ಆರ್. ಅಶೋಕ) (@RAshokaBJP) October 25, 2020
ರಾಜಧಾನಿಯಲ್ಲಿ ಸುರಿದ ಮಳೆಯಿಂದಾಗಿ ಭಾರೀ ಅನಾಹುತ ಸೃಷ್ಟಿಯಾಗಿತ್ತು. ದತ್ತಾತ್ರೇಯ ಬಡಾವಣೆಯ 304 ಮನೆಗಳು ಸಂಪೂರ್ಣವಾಗಿ ಹಾನಿಗೆ ಒಳಗಾಗಿದ್ದವು.
ರಾಜಕಾಲುವೆ ಒಡೆದ ಪರಿಣಾಮ ಹೊಸಕೆರೆಹಳ್ಳಿಯ ದತ್ತಾತ್ರೇಯ ನಗರ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಅಲ್ಲದೇ ಬೆಂಗಳೂರು ದಕ್ಷಿಣ ಸೇರಿದಂತೆ ಅನೇಕ ಕಡೆ ಸಂಕಷ್ಟದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಚಿವ ಆರ್ ಅಶೋಕ್ ಖುದ್ದಾಗಿ ಕೆಲವು ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲಿಸಿದ್ದರು. ಬಳಿಕ ಸಂತ್ರಸ್ತರಿಗೆ ನೆರವು ಒದಗಿಸುವ ಕುರಿತು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚೆ ನಡೆಸಲಾಗಿತ್ತು. ಅಲ್ಲದೇ ಸಂತ್ರಸ್ತರಿಗೆ ಸೂಕ್ತ ಪರಿಹಾರ ಹಾಗೂ ಅವರಿಗೆ ಆಹಾರ, ಸಾಮಾಗ್ರಿ ವ್ಯವಸ್ಥೆ ಮಾಡುವ ಕುರಿತು ಕೂಡ ನಿರ್ಧರಿಸಲಾಗಿತ್ತು.