Monday, August 8, 2022

Latest Posts

ನಿರ್ಮಲಾನಂದನಾಥ ಶ್ರೀ ದಿವ್ಯ ಹಸ್ತದಲ್ಲಿ ಅಯೋಧ್ಯೆ ಸೇರುತ್ತಿದೆ ಕೊಪ್ಪಳದ ಆಂಜನಾದ್ರಿ ಪವಿತ್ರ ಶಿಲೆ

ಉಡುಪಿ: ಶ್ರೀರಾಮನ ಅವಿಚ್ಛಿನ್ನ ಭಕ್ತ ಹನುಮಂತನ ಅವತಾರ ಕ್ಷೇತ್ರವಾದ ಕೊಪ್ಪಳ ಜಿಲ್ಲೆಯ ಅಂಜನಾದ್ರಿ ಪರ್ವತ ಶಿಲೆಯು ಉಡುಪಿಗೆ ಆಗಮಿಸಿ, ಇದೀಗ ಬೆಂಗಳೂರು ಮಾರ್ಗವಾಗಿ ಅಯೋಧ್ಯೆಗೆ ತಲುಪುತ್ತಿದೆ. ಅಯೋಧ್ಯೆಯಲ್ಲಿ ರಾಮಮಂದಿರ ಭೂಮಿ ಪೂಜನಾ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿರುವ ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರು ಇದನ್ನು ಅಯೋಧ್ಯೆಗೆ ಕೊಂಡೊಯ್ಯುತ್ತಾರೆ.
ಹನುಮಂತ ಅವತರಿಸಿದ ಅಂಜನಾದ್ರಿ ಪರ್ವತದ ಶಿಲೆಯು ಶ್ರೀರಾಮ ಅವತರಿಸಿದ ಅಯೋಧ್ಯೆಯಲ್ಲಿ ರಾಮಮಂದಿರದ ಅಡಿಪಾಯ ಸೇರಬೇಕೆನ್ನುವ ನಿಟ್ಟಿನಲ್ಲಿ ಶ್ರೀರಾಮ ಸೇನೆ ಯೋಜನೆಯನ್ನು ರೂಪಿಸಿತ್ತು. ಅದರಂತೆ ಬೆಟ್ಟದ ಶಿಲೆಯನ್ನು ರಜತ ಕವಚದಲ್ಲಿರಿಸಿ ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾದ ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅವರಿಗೆ ಒಪ್ಪಿಸಲಾಗಿತ್ತು.
ಪೇಜಾವರ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಚಾತುರ್ಮಾಸ್ಯ ವ್ರತಸ್ಥರಾಗಿರುವುದರಿಂದ ಆ. 5ರಂದು ಅಯೋಧ್ಯೆಯಲ್ಲಿ ನಡೆಯುವ ಭೂಮಿ ಪೂಜನ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿಲ್ಲ. ಆದ್ದರಿಂದ ಅವರ ಸಲಹೆಯ ಮೇರೆಗೆ ಶ್ರೀರಾಮ ಸೇನೆ ವತಿಯಿಂದ ಅಂಜನಾದ್ರಿಯಿಂದ ಅಯೋಧ್ಯೆಗೆ ರವಾನಿಸುವ ಶಿಲೆಯನ್ನು ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲನಂದನಾಥ ಸ್ವಾಮೀಜಿ ಅವರಿಗೆ ಹಸ್ತಾಂತರಿಸಲಾಗಿದೆ.
ಭಾನುವಾರ ಬೆಂಗಳೂರು ವಿಜಯನಗರದಲ್ಲಿರುವ ಶಾಖಾ ಮಠದ ಶ್ರೀಸೌಮೇಂದ್ರ ಸ್ವಾಮೀಜಿ ಮುಖಾಂತರ ಆದಿಚುಂಚನಗಿರಿ ಮಠಾಧೀಶ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಅವರಿಗೆ ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಹಸ್ತಾಂತರಿಸಿದೆ. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷ ಡಿ. ರಾಧಾಕೃಷ್ಣ ಶೆಟ್ಟಿ, ಮುಖಂಡರಾದ ಶರತ್ ಪೂಜಾರಿ, ಹರೀಶ್ ಪೂಜಾರಿ, ಶಿವಸೇನಾ ಪಕ್ಷದ ರಾಜ್ಯ ಪ್ರಮುಖ್ ಮಧುಕರ ಮುದ್ರಾಡಿ ಇದ್ದರು.
ಸೋಮವಾರ ಆದಿಚುಂಚನಗಿರಿ ಶ್ರೀಗಳು ಶಿಲೆಗೆ ಪೂಜೆ ನೆರವೇರಿಸಿ, ಪ್ರಣಾಮಗಳನ್ನು ಸಲ್ಲಿಸಿದ್ದಾರೆ. ಶ್ರೀಗಳು ಅಯೋಧ್ಯೆಗೆ ತೆರಳುವ ವೇಳೆ ಈ ಶಿಲೆಯನ್ನು ಒಯ್ದು ರಾಮಮಂದಿರ ಬುನಾದಿಗೆ ಸೇರಿಸಲಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss