ಕೆಲವೊಮ್ಮೆ ನಮ್ಮ ವರ್ತನೆ ನಮಗೆ ವಿಚಿತ್ರ ಅನಿಸುತ್ತದೆ. ಅದು ಈ ಬೆಕ್ಕಿನ ವಿಷಯದಲ್ಲಿ ನೂರಕ್ಕೆ ನೂರು ನಿಜ.. ಮನೆಯೊಳಗೆ ಮುದ್ದು, ಚಿನ್ನು ಅನ್ನುತ್ತ ಬೆಕ್ಕನ್ನು ಬಹಳ ಪ್ರೀತಿಯಿಂದ ಸಾಕುತ್ತೇವೆ. ಅದೇ ಮನೆಯಿಂದ ಎಲ್ಲಿಗಾದರೂ ಹೊರಗಡೆ ಹೊರಟಾಗ ಬೆಕ್ಕು ಎದುರು ಬಂದರೆ ಅಪಶಕುನ ಎಂದು ಶಪಿಸುತ್ತೇವೆ.
ಅಷ್ಟೇ ಏಕೆ… ವಾಹನಗಳಲ್ಲಿ ಹೋಗುತ್ತಿರುವಾಗ ಬೆಕ್ಕು ಅಡ್ಡ ಬಂದರೆ ಸ್ವಲ್ಪ ಹೊತ್ತು ವಾಹನ ನಿಲ್ಲಿಸಿ ನಂತರ ಹೊರಡುತ್ತೇವೆ. ನಡೆದು ಹೋಗುತ್ತಿರುವಾಗ ಬೆಕ್ಕು ಅಡ್ಡ ಬಂದರೆ ಪ್ರಯಾಣ ಸ್ವಲ್ಪ ಹೊತ್ತು ನಿಲ್ಲಿಸಿ, ಅಲ್ಲಿಯೇ ಎಲ್ಲಾದರೂ ಕುಳಿತು ನಂತರ ಹೊಡುತ್ತೇವೆ. ಇದೆಲ್ಲ ಇಂದಿನ ಕಾಲದಲ್ಲಿ ಮೂಢನಂಬಿಕೆ ಅನಿಸುತ್ತದೆ. ಆದರೆ ಹಳೆ ಕಾಲದವರಿಗೆ ಬೆಕ್ಕು ಈ ರೀತಿ ಅಡ್ಡ ಹೋದರೆ ಅಪಶಕುನ ಏಕಾಗುತ್ತಿತ್ತು ಎನ್ನುವುದಕ್ಕೆ ಕಾರಣ ಇದೆ…
ಬೆಕ್ಕು ಸಾಮಾನ್ಯವಾಗಿ ಹಾವು, ನಾಯಿ, ಹಂದಿ, ಹಸು ಸೇರಿದಂತೆ ಪ್ರಾಣಿಗಳಿಗೆ ಹೆದರುತ್ತದೆ. ನಾವು ದಾರಿಯಲ್ಲಿ ಹೊರಟಿರುವಾಗ ಬೆಕ್ಕು ನಮ್ಮ ಅಡ್ಡವಾಗಿ ಓಡಿ ಹೋಯಿತೆಂದರೆ ಹಾವೋ, ನಾಯಿಯೋ ಅಥವಾ ಇನ್ಯಾವುದೋ ಪ್ರಾಣಿ ನೋಡಿ ಓಡಿ ಬಂದಿರಬಹುದು. ಆಗ ನಾವು ಮೈ ಮರೆತು ಹೋದರೆ ನಮಗೂ ಆ ಪ್ರಾಣಿಗಳಿಂದ ಅಪಾಯ ತಪ್ಪಿದ್ದಲ್ಲ. ಹಾಗಾಗಿಯೇ ಬೆಕ್ಕು ಅಡ್ಡ ಹೋದರೆ ಸ್ವಲ್ಪ ಹೊತ್ತು ನಿಂತು ಹೊರಡಬೇಕು ಎನ್ನುವುದು.