Thursday, July 7, 2022

Latest Posts

ಬೆಲೆ ಏರಿಕೆ ಮೂಲಕ ಹಗಲು ದರೋಡೆ : ಕೊಡಗು ಜೆಡಿಎಸ್ ಆರೋಪ

ಹೊಸದಿಗಂತ ವರದಿ ಮಡಿಕೇರಿ:

ಆಸ್ತಿ ತೆರಿಗೆ ಹೆಚ್ಚಳ ಮಾಡಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಮತ್ತು ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಜ.22 ರಂದು ಮಡಿಕೇರಿಯಲ್ಲಿ ಜಾತ್ಯತೀತ ಜನತಾ ದಳದ ನೇತೃತ್ವದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸುವುದಾಗಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ಸಂಕಷ್ಟದಿಂದ ಜನ ಸಾಮಾನ್ಯರು ಆರ್ಥಿಕ ಹಿನ್ನಡೆಯನ್ನು ಅನುಭವಿಸುತ್ತಿರುವ ಹೊತ್ತಿನಲ್ಲೇ ಆಸ್ತಿ ತೆರಿಗೆಯನ್ನು ಹೆಚ್ಚಳ ಮಾಡಿ ಸರ್ಕಾರ ಹಗಲು ದರೋಡೆ ಮಾಡುತ್ತಿದೆಯೆಂದು ಆರೋಪಿಸಿದರು.
ಆಸ್ತಿ ತೆರಿಗೆಯನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ. ಖಾಲಿ ನಿವೇಶನ ಸಾವಿರ ಅಡಿಗಳಿಗೆ ಮೇಲ್ಪಟ್ಟು ಶೇ.5 ಮತ್ತು ಮಾರುಕಟ್ಟೆ ಆಧಾರಿತ ಮೌಲ್ಯದ ಮೇಲೆ ಶೇ.20 ರಷ್ಟು ತೆರಿಗೆ ಹೆಚ್ಚಳ ಮಾಡಿದ್ದು, ಇದು ದೊಡ್ಡ ಹೊರೆಯಾಗಲಿದೆ. ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಕೂಡ ಒಂದು ವರ್ಷ ಪಾವತಿಸದಿದ್ದಲ್ಲಿ ಶೇ.2 ಮತ್ತು ಎರಡು ವರ್ಷ ಪಾವತಿಸದಿದ್ದಲ್ಲಿ ಶೇ.5 ಹೀಗೆ ಏರಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ದಿನದಿಂದ ದಿನಕ್ಕೆ ಒಂದೊಂದು ನೆಪವೊಡ್ಡಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಜನ ಸಾಮಾನ್ಯರ ಮೇಲೆ ದುಬಾರಿ ದರದ ಹೊರೆಯನ್ನು ಹೊರಿಸುತ್ತಲೇ ಇದೆಯೆಂದು ಟೀಕಿಸಿದರು.
ಖಜಾನೆ ಭರ್ತಿಗೆ ಬಡವರಿಗೆ ಬರೆ: ಕಖಾಲಿಯಾದ ಖಜಾನೆಯನ್ನು ಭರ್ತಿ ಮಾಡುವುದಕ್ಕಾಗಿ ಜನರ ಮೇಲೆ ಸರ್ಕಾರ ಒತ್ತಡ ಹೇರುತ್ತಿದ್ದು, ಬಡವರು ಅತಂತ್ರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಪಡಿತರ ವ್ಯವಸ್ಥೆಯಲ್ಲಿ 7 ಕೆ.ಜಿ.ಗೆ ಬದಲಾಗಿ 5 ಕೆ.ಜಿ. ಅಕ್ಕಿಯನ್ನು ನೀಡಲಾಗುತ್ತಿದೆ. ತೊಗರಿ ಬೇಳೆ ಮತ್ತು ಕಾಳು ವಿತರಣೆಯನ್ನು ಸ್ಥಗಿತಗೊಳಿಸಲಾಗಿದೆ. ಕಡು ಬಡವರಿಗೆ ಅಂಗಡಿಯಲ್ಲಿ ಖರೀದಿಸಲಾಗದಷ್ಟು ನಿತ್ಯ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿದೆ. ಪ್ರಾಕೃತಿಕ ವಿಕೋಪ, ಕೋವಿಡ್ ಸಂಕಷ್ಟ, ನಿರುದ್ಯೋಗ, ವ್ಯಾವಹಾರಿಕ ನಷ್ಟ ಇವುಗಳಿಂದ ಜನರು ಚೇತರಿಸಿಕೊಳ್ಳಲು ಸಾಧ್ಯವೇ ಆಗಿಲ್ಲ. ಆದರೆ, ಕರುಣೆ ಇಲ್ಲದೆ ಸರ್ಕಾರ ಬೆಲೆ ಏರಿಕೆ ಮಾಡಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ. ಬ್ಯಾಂಕ್‌ಗಳು ಕೂಡ ಸಾಲಗಾರರ ಮೇಲೆ ಒತ್ತಡ ಹೇರುತ್ತಿದ್ದು, ಅಸಲು ಮತ್ತು ಬಡ್ಡಿಯನ್ನು ತಕ್ಷಣ ಪಾವತಿಸುವಂತೆ ಸೂಚಿಸಲಾಗುತ್ತಿದೆ ಎಂದು ಗಣೇಶ್ ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರದ ದ್ವಂದ್ವ ಧೋರಣೆಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಗಗನಕ್ಕೇರಿದೆ. ಅಡುಗೆ ಅನಿಲದ ಬೆಲೆ 450 ರಿಂದ 850ಕ್ಕೆ ಏರಿಕೆಯಾಗಿದೆಯೆಂದು ಕಳವಳ ವ್ಯಕ್ತಪಡಿಸಿದರು.
ಸರ್ಕಾರದ ಜನವಿರೋಧಿ ನೀತಿಯನ್ನು ಖಂಡಿಸಿ ಜ.22 ರಂದು ನಗರದ ಎವಿ ಶಾಲೆಯಿಂದ ಜಿಲ್ಲಾಧಿಕಾರಿಗಳ ಕಛೇರಿಯವರೆಗೆ ಜೆಡಿಎಸ್ ವತಿಯಿಂದ ಪ್ರತಿಭಟನಾ ಮೆರವಣ ಗೆ ನಡೆಸಲಾಗುತ್ತದೆ. ಜನರು ಕೂಡ ಎಚ್ಚೆತ್ತುಕೊಂಡು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕೆಂದು ಗಣೇಶ್ ಮನವಿ ಮಾಡಿದರು.
ನಗರದ ಗಣಪತಿ ಬೀದಿ ಬಡಾವಣೆ ರಸ್ತೆ ಅವ್ಯವಸ್ಥೆಯನ್ನು ತಕ್ಷಣ ಸರಿಪಡಿಸಬೇಕೆಂದು ಒತ್ತಾಯಿಸಿದ ಅವರು, ದುರಸ್ತಿ ಕಾರ್ಯ ಕೈಗೊಳ್ಳಲು ಸಾಧ್ಯವಾಗದಿದ್ದಲ್ಲಿ ರಸ್ತೆ ಬಂದ್ ಮಾಡಿ ಎಂದು ಒತ್ತಾಯಿಸಿದರು.
ಪಕ್ಷದ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷ ಇಸಾಕ್ ಖಾನ್ ಮಾತನಾಡಿ, ಕೊಡಗಿನ ಜನರ ನಿರೀಕ್ಷೆಗೆ ವಿರುದ್ಧವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ನಡೆದುಕೊಳ್ಳುತ್ತಿವೆಯೆಂದು ಆರೋಪಿಸಿದರು. ಕೊಡಗಿಗೆ ಸಚಿವ ಸ್ಥಾನ ನೀಡದೆ ಕಡೆಗಣ ಸಲಾಗಿದೆ. ಅಕಾಲಿಕ ಮಳೆಯಿಂದ ನೊಂದವರಿಗೆ ಸ್ಪಂದನ ದೊರೆಯುತ್ತಿಲ್ಲವೆಂದು ಟೀಕಿಸಿದರು. ಜನರ ದಿಕ್ಕು ತಪ್ಪಿಸಲು ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ತರುತ್ತಿದ್ದು, ಇದು ಅಭಿವೃದ್ಧಿಪರ ಚಿಂತನೆಯಲ್ಲವೆAದು ಟೀಕಿಸಿದರು.
ವೀರಾಜಪೇಟೆ ಪ.ಪಂ ಸದಸ್ಯ ಹೆಚ್.ಎಸ್.ಮತೀನ್ ಮಾತನಾಡಿ, ಸ್ವಂತ ಜಾಗದಲ್ಲಿ ಮನೆಗಳನ್ನು ನಿರ್ಮಿಸಿಕೊಳ್ಳಲು ಲೇಔಟ್‌ನ ಹೊಸ ನಿಯಮಗಳಿಂದ ಅಡ್ಡಿಯಾಗಿದ್ದು, ಅನುಮತಿ ನೀಡುವ ಕ್ರಮವನ್ನು ಸರಳೀಕರಿಸಬೇಕೆಂದು ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಸಿ.ಸುನಿಲ್, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿ ಲೀಲಾ ಶೇಷಮ್ಮ ಹಾಗೂ ಜಿಲ್ಲಾ ಯುವ ಘಟಕದ ವಕ್ತಾರ ರವಿಕಿರಣ್ ರೈ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss