Monday, July 4, 2022

Latest Posts

ಬೆಳಕಿನ ಹಬ್ಬಕ್ಕಾಗಿ ಹಣತೆಗಳ ಖರೀದಿ-ವಿವಿಧ ನಮೂನೆಯ ಅಲಂಕಾರಿಕ ದೀಪಗಳ ವೀರಾಜಮಾನ

ಹೊಸದಿಗಂತ ವರದಿ, ಮಂಡ್ಯ

ಕೋವಿಡ್-19 ನಡುವೆಯೂ ಜನತೆ ಬೆಳಕಿನ ಹಬ್ಬ ದೀಪಾವಳಿಯನ್ನು ಸಂಭ್ರಮ-ಸಡಗರ ಮತ್ತು ಸರಳವಾಗಿ ಆಚರಿಸಲು ನಿರ್ಧರಿಸಿದ್ದು, ಹಬ್ಬದ ಮುನ್ನಾ ದಿನ ಭಾನುವಾರ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿ ಭರಾಟೆಯಲ್ಲಿ ತೊಡಗಿದ್ದರು.

ಬೆಳಕಿನ ಹಬ್ಬ ದೀಪಾವಳಿಗೆ ವೈವಿಧ್ಯಮಯ ಅಲಂಕಾರಿಕ ದೀಪಗಳು ಮಾರುಕಟ್ಟೆಯಲ್ಲಿ ವಿರಾಜಮಾನವಾಗಿದ್ದು, ಅಂದ-ಚೆಂದದ ದೀಪಗಳಿಗೆ ಮನಸೋತ ಮಹಿಳೆಯರು ಹಬ್ಬದ ಮುನ್ನಾ ದಿನ ಅವುಗಳನ್ನು ಖರೀದಿಸಿ ಮನೆಗೆ ಕೊಂಡೊಯ್ಯುತ್ತಿದ್ದುದು ಸಾಮಾನ್ಯವಾಗಿತ್ತು.

ನಗರದ ಪ್ರಮುಖ ರಸ್ತೆಗಳಾದ ನೂರಡಿ ರಸ್ತೆ, ವಿಶ್ವೇಶ್ವರಯ್ಯ ರಸ್ತೆ, ಕೆ.ಆರ್.ರಸ್ತೆ, ಪೇಟೆ ಬೀದಿ ಸೇರಿದಂತೆ ಹಲವು ರಸ್ತೆಗಳಲ್ಲಿ ದೀಪಗಳ ಮಾರಾಟ ಜೋರಾಗಿ ನಡೆದಿತ್ತು. ತಳ್ಳುವ ಗಾಡಿಗಳು ಹಾಗೂ ರಸ್ತೆ ಬದಿಯಲ್ಲಿ ದೀಪಗಳನ್ನಿಟ್ಟುಕೊಂಡು ವ್ಯಾಪಾರಸ್ಥರು ಮಾರಾಟದಲ್ಲಿ ನಿರತರಾಗಿದ್ದರು.

ಸ್ವಾಗತ ದೀಪ, ಗುಬ್ಬಿಗೂಡು ದೀಪ, ಕಾಸಗಲ ದೀಪ, ಬಟ್ಟಲು ದೀಪ, ಹಣಬೆ ಆಕಾರದ ದೀಪ ಸೇರಿದಂತೆ ವೈಶಿಷ್ಟಪೂರ್ಣ ಹಣತೆಗಳು ಮಾರುಕಟ್ಟೆಯಲ್ಲಿ ಎಲ್ಲರ ಗಮನಸೆಳೆಯುತ್ತಿದ್ದವು. ದೀಪಗಳು ಪ್ರತಿ ಜೊತೆಗೆ 10 ರೂ.ನಿಂದ 150 ರೂ.ವರೆಗೆ ಬೆಲೆಗೆ ಮಾರಾಟವಾಗುತ್ತಿದ್ದವು. ಮಣ್ಣಿನ ದೀಪಗಳೊಟ್ಟಿಗೆ ಪಿಂಗಾಣಿ ದೀಪಗಳಿದ್ದರೂ ಮಹಿಳೆಯರು ಮಣ್ಣಿನ ಹಣತೆಗಳ ಮೋಹಕ್ಕೆ ಹೆಚ್ಚು ಒಳಗಾಗಿದ್ದರು.

ದೊಡ್ಡ ಪ್ರಮಾಣದ ದೀಪಗಳಿಗಿಂತ ಪುಟಾಣಿ ಹಣತೆಗಳ ಖರೀದಿಗೆ ಹೆಚ್ಚು ಆಸಕ್ತರಾಗಿದ್ದರು. ಮನೆಗಳ ಮುಂಭಾಗ, ಕಾಂಪೌಂಡ್‍ಗಳು ಹಾಗೂ ಮನೆಗಳ ಮೇಲ್ಭಾಗ ಕತ್ತಲಿನಲ್ಲಿ ಬೆಳಗುವ ಪುಟ್ಟ ದೀಪಗಳ ನೋಟ ಆಕರ್ಷಕವಾಗಿರುವುದರಿಂದ ಸಹಜವಾಗಿಯೇ ಆ ದೀಪಗಳಿಗೆ ಬೇಡಿಕೆ ಹೆಚ್ಚಾಗಿತ್ತು. ಪುಟ್ಟ ದೀಪಗಳ ಬೆಲೆಯೂ ಕಡಿಮೆ ಇದ್ದ ಕಾರಣ ಒಬ್ಬೊಬ್ಬರು 30 ರಿಂದ 40 ದೀಪಗಳನ್ನು ಖರೀದಿಸುತ್ತಿದ್ದರು. ಇದರಿಂದ ಮಾರಾಟಗಾರರೂ ಹರ್ಷಚಿತ್ತರಾಗಿದ್ದು ಕಂಡುಬಂತು.

ಕಾರ್ತೀಕ ಮಾಸ ಮುಗಿಯುವವರೆಗೂ ದೀಪಗಳಿಗೆ ಬೇಡಿಕೆ ಹೆಚ್ಚಾಗಿರುತ್ತದೆ. ಜನರೂ ಸಹ ಹಳೆಯ ದೀಪಗಳನ್ನು ಬಿಟ್ಟು ಹೊಸ ದೀಪಗಳ ಖರೀದಿಗೆ ಹೆಚ್ಚಿನ ಉತ್ಸಾಹ ತೋರಿದ್ದರು. ಇದರಿಂದ ದೀಪಗಳ ಮಾರಾಟಕ್ಕೆ ಹೊಸ ಕಳೆ ಬಂದಿತ್ತು.

ಬೆಳಕಿನ ಹಬ್ಬ ದೀಪಾವಳಿಯನ್ನು ಝಗಮಗಿಸುವ ದೀಪಗಳ ಬೆಳಕಿನಲ್ಲಿ ಅತ್ಯುತ್ಸಾಹದಿಂದ ಆಚರಿಸಲು ಒಲವು ತೋರಿದ್ದ ಮಹಿಳೆಯರು ಹೆಚ್ಚು ದೀಪಗಳನ್ನು ಖರೀದಿಸಿ ತೆರಳುತ್ತಿದ್ದುದು ಮಾರುಕಟ್ಟೆಯಲ್ಲಿ ಕಂಡುಬಂದಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss