ಹೊಸದಿಗಂತ ವರದಿ,ಕಲಬುರಗಿ:
ಬೆಳಗಾವಿ ಸೇರಿದಂತೆ ಮಹಾರಾಷ್ಟ್ರ ಗಡಿಯಲ್ಲಿರುವ ಎಲ್ಲ ಪ್ರದೇಶಗಳು ಕರ್ನಾಟಕಕ್ಕೆ ಸೇರಿವೆ. ಈ ಸಂಬಂಧ ಮಹಾಜನ್ ವರದಿಯೇ ಅಂತಿಮ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು.
ಕಾಂಗ್ರೆಸ್ ವಿಭಾಗವಾರು ಸಂಕಲ್ಪ ಸಮಾವೇಶದಲ್ಲಿ ಭಾಗವಹಿಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಈ ಸಂಬಂಧ ಅನಗತ್ಯ ವಿವಾದ ಉಂಟು ಮಾಡುತ್ತಿದ್ದಾರೆ. ಬೆಳಗಾವಿ ನಮ್ಮದು ಎಂದು ಹೇಳುವ ಉದ್ದೇಶದಿಂದಲೇ ಬೆಳಗಾವಿಯಲ್ಲಿ ಸುವರ್ಣ ಸೌಧವನ್ನು ನಿರ್ಮಿಸಲಾಗಿದೆ ಎಂದರು.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಪಕ್ಷ ಶಿವಸೇನೆ ಬೆಂಬಲಿಸಿದೆ. ಆದರೆ, ಸಿಎಂ ಹೇಳಿಕೆಗೆ ಕಾಂಗ್ರೆಸ್ ಪ್ರತಿಕ್ರಿಯೆ ನೀಡುವ ಅವಶ್ಯಕತೆಯಿಲ್ಲ. ಗಡಿ ವಿಚಾರ ಮುಗಿದ ಅಧ್ಯಾಯ. ಗಡಿ ಭಾಗ ನಮ್ಮದು ಎನ್ನಲು ಈಗಾಗಲೇ ಬೆಳಗಾವಿಯಲ್ಲಿ ಸುವರ್ಣಸೌಧ ಕಟ್ಟಿದ್ದೇವೆ. ಠಾಕ್ರೆ ಹೇಳಿಕೆಗೆ ಅಷ್ಟೊಂದು ಮಹತ್ವ ಕೊಡುವ ಅವಶ್ಯಕತೆಯಿಲ್ಲ ಎಂದು ಡಿಕೆಶಿ ಠಾಕ್ರೆ ವಿರುದ್ಧ ಹರಿಹಾಯ್ದರು.
ಡಬಲ್ ಇಂಜಿನ್ ಇದ್ದರೆ, ಅಭಿವೃದ್ಧಿಗೆ ವೇಗ ಎಲ್ಲಿದೆ?: ಅಮಿತ್ ಶಾ ಅವರ ಡಬಲ್ ಎಂಜಿನ್ ಸರ್ಕಾರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಡಬಲ್ ಇಂಜಿನ್ ಇದ್ದರೆ ಅಭಿವೃದ್ಧಿಗೆ ವೇಗ ಎಲ್ಲಿದೆ. ಮಹಾದಾಯಿ ಯೋಜನೆ ಅರ್ಧಕ್ಕೆ ನಿಂತಿದೆ. ಕೇಂದ್ರ ಸರ್ಕಾರ ಈ ಕುರಿತ ಸೂಕ್ತ ನಿರ್ಧಾರ ಕೈಗೊಂಡು ಯೋಜನೆ ಆರಂಭಿಸುತ್ತಿಲ್ಲ ಏಕೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಎಂದು ಕೈಗೆತ್ತಿಕೊಳ್ಳುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು.