ಬೆಳಗಾವಿ: ಮಹಾಮಾರಿ ಕೊರೋನಾ ಸೋಂಕು ತಡೆಗಟ್ಟಲು ಲಾಕ್ಡೌನ್ ಘೋಷಣೆಯಿಂದ ಕ್ಷೇತ್ರದಲ್ಲಿ ಸಾಕಷ್ಟು ಜನರು ಸಂಕಷ್ಟ ಎದುರಿಸಿದ್ದಾರೆ. ಹೀಗಾಗಿ ಅವರಿಗೆಲ್ಲಾ ವಿಶೇಷ ಪರಿಹಾರ ಘೋಷಿಸುವಂತೆ ಶಾಸಕ ಅನಿಲ ಬೆನಕೆ ಅವರು ಸಿಎಂ ಯಡಿಯೂರಪ್ಪ ಅವರ ಬಳಿ ಮನವಿ ಮಾಡಿಕೊಂಡಿದ್ದಾರೆ.
ಗುರುವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿವಾಸಕ್ಕೆ ತೆರಳಿ ಭೇಟಿಯಾದ ಶಾಸಕ ಅನಿಲ ಬೆನಕೆ ಅವರು ಕೊರೋನಾ ಲಾಕ್ಡೌನ್ನಿಂದ ವಿವಿಧ ವರ್ಗದ ಜನರು ಸಮಸ್ಯೆ ಎದುರಿಸುತ್ತಿದ್ದಾರೆ.
ಅದರಲ್ಲೂ ಕೊರೋನಾ ವಾರಿಯರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಾಧ್ಯಮ ಪ್ರತಿನಿಧಿಗಳು, ಪುರೋಹಿತರು, ಟೇಲರ್ ಗಳು, ಚಮ್ಮಾರ ಸಮಾಜ, ತಂಪುಪಾನೀಯ ತಯಾರಕರು ಸೇರಿದಂತೆ ವಿವಿಧ ಕಾಯಕದ ಜನರು ಕೈಯಲ್ಲಿ ಕೆಲಸ ಇಲ್ಲದೇ ಜೀವನ ನಡೆಸುವುದು ದುಸ್ಥರವಾಗಿದೆ. ಹೀಗಾಗಿ ಸಂಕಷ್ಟದಲ್ಲಿರುವ ಈ ಜನರಿಗೆ ವಿಶೇಷ ಪರಿಹಾರ ಘೋಷಿಸುವಂತೆ ಮನವಿ ಮಾಡಿಕೊಂಡರು.
ಡಿಸಿಎಂ ಗೋವಿಂದ ಕಾರಜೋಳ ಸೇರಿದಂತೆ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.