Sunday, July 3, 2022

Latest Posts

ಬೆಳಗಾವಿ| ಹೊರ ರಾಜ್ಯಗಳಿಂದ ಬರುವವರಿಗೆ ಸಂಬಂಧ ಪಟ್ಟ ಜಿಲ್ಲೆಗಳಲ್ಲಿ ಕ್ವಾರಂಟೈನ್: ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್

ಬೆಳಗಾವಿ: ಪಕ್ಕದ ರಾಜ್ಯಗಳಿಂದ ಬೆಳಗಾವಿ ಜಿಲ್ಲೆಗೆ ಆಗಮಿಸುವ ಜನರನ್ನು ತಪಾಸಣೆ ನಡೆಸಿದ ಬಳಿಕ ಅವರನ್ನು ಸಂಬಂಧಿಸಿದ ಜಿಲ್ಲೆಗಳಲ್ಲಿ ಕ್ವಾರಂಟೈನ್ ಮಾಡುವ ಅಗತ್ಯವಿದೆ ಎಂದು ಈಗಾಗಲೇ ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತರಲಾಗಿದೆ. ಆದ್ದರಿಂದ ಗಡಿ ಜಿಲ್ಲೆ ಬೆಳಗಾವಿಗೆ ಆಗಮಿಸುವ ಇತರೆ ಜಿಲ್ಲೆಯ ಜನರನ್ನು ಆಯಾ ಜಿಲ್ಲೆಯ ನೋಡಲ್ ಅಧಿಕಾರಿಗಳ ಮೂಲಕ ಕಳಿಸಿಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಅವರು ಸೋಮವಾರ ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ನಡೆದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಬೇರೆ ರಾಜ್ಯಗಳಲ್ಲಿ ಮೃತಪಟ್ಟಿರುವವರನ್ನು ರಾಜ್ಯಕ್ಕೆ ಕರೆತರದೇ ಆಯಾ ರಾಜ್ಯಗಳಲ್ಲಿಯೇ ಅಂತ್ಯಕ್ರಿಯೆ ನಡೆಸಬೇಕು ಎಂದು ರಾಜ್ಯ ಸರ್ಕಾರ ಈಗಾಗಲೇ ಸ್ಪಷ್ಟಪಡಿಸಿದೆ ಎಂದು ತಿಳಿಸಿದರು.

ಹೆಚ್ಚು ಹೆಚ್ಚು ಪ್ರಕರಣಗಳು ವರದಿಯಾಗಿದ್ದರೂ ಕೂಡ ಸುದೈವದಿಂದ ಜೀವಹಾನಿ ಪ್ರಮಾಣ ಕಡಿಮೆಯಾಗಿದೆ. ಇದುವರೆಗೆ ವೆಂಟಿಲೇಟರ್ ಬಳಕೆ ಹಂತಕ್ಕೆ ಪರಿಸ್ಥಿತಿ ತಲುಪಿಲ್ಲ. ಸೋಂಕಿತರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ನೀಡಿ ನೆಗೆಟಿವ್ ಬಂದ ಬಳಿಕ ಅವರಲ್ಲಿ ಆತ್ಮಸ್ಥೈರ್ಯ ಮೂಡಿಸಿದ ಬಳಿಕ ಮನೆಗೆ ಕಳಿಸಬೇಕು ಎಂದರು.

ಎರಡು ತಿಂಗಳಿನ ವಿದ್ಯುಚ್ಛಕ್ತಿ ಬಿಲ್ ಒಮ್ಮೆಲೆ ನೀಡುತ್ತಿರುವುದರಿಂದ ಜನರಿಗೆ ತೊಂದರೆಯಾಗುತ್ತಿದೆ‌. ಈ ಬಗ್ಗೆಯೂ ಪರಿಶೀಲಿಸಿ ಜನರಿಗೆ ಅನುಕೂಲ ಕಲ್ಪಿಸುವಂತೆ ಸಚಿವ ಜಗದೀಶ ಶೆಟ್ಟರ್  ನಿರ್ದೇಶನ ನೀಡಿದರು.

ಈ ಬಗ್ಗೆ ಹೆಸ್ಕಾಂ ಹಿರಿಯ ಅಧಿಕಾರಿಗಳ ಜತೆ ಸಭೆಯಲ್ಲಿಯೇ ದೂರವಾಣಿಯ ಮೂಲಕ ಮಾತನಾಡಿದ ಸಚಿವರು, ಸಾರ್ವಜನಿಕರಿಗೆ ಹೊರೆಯಾಗದಂತೆ ಕ್ರಮ ಕೈಗೊಳ್ಳಬೇಕು ಮತ್ತು ಕಂತುಗಳಲ್ಲಿ ಬಿಲ್ ಪಾವತಿಸಲು ಅನುಕೂಲ ಕಲ್ಪಿಸಬೇಕು ಎಂದು ಸೂಚನೆ ನೀಡಿದರು.

ನಿರಂತರವಾಗಿ 45 ದಿನಗಳಿಗಿಂತ ಅಧಿಕ ಕಾಲ ಕಂಟೈನ್ಮೆಂಟ್ ಝೋನ್ ಆಗಿರುವ ಪ್ರದೇಶಗಳಲ್ಲಿ ಸ್ವಲ್ಪಮಟ್ಟಿಗೆ ವಿನಾಯಿತಿ ನೀಡುವುದರ ಬಗ್ಗೆ ಸರ್ಕಾರಕ್ಕೆ ಒಂದು ಪ್ರಸ್ತಾವ ಕಳಿಸುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಿದರು. ಅದೇ ರೀತಿ ದಾನಿಗಳಿಂದ ಅಗತ್ಯ ಸಾಮಗ್ರಿಗಳನ್ನು ಸಂಗ್ರಹಿಸಿ ಕಂಟೈನ್ಮೆಂಟ್ ಝೋನ್ ನಲ್ಲಿ ವಿತರಿಸುವ ಬಗ್ಗೆಯೂ ಪರಿಶೀಲಿಸುವಂತೆ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಮಾತನಾಡಿ, ಗಡಿಭಾಗದಲ್ಲಿ ಸಿಲುಕಿರುವ ಪ್ರಯಾಣಿಕರು ಮತ್ತು ವಲಸೆ ಕಾರ್ಮಿಕರು ಎಸುರಿಸುತ್ತಿರುವ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು.

ರೈಲ್ವೆ ಇಲಾಖೆಯ ರಾಜ್ಯ ಸಚಿವ ಸುರೇಶ ಅಂಗಡಿ, ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಮಹಾಂತೇಶ ಕವಟಗಿಮಠ ಅವರು ಕೋವಿಡ್-19 ನಿಯಂತ್ರಣಕ್ಕೆ ಸಂಬಂಧಿಸಿದಂತೆ ತೆಗೆದುಕೊಳ್ಳಲಾದ ಕ್ರಮಗಳ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿದರು.

ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲೆಯಲ್ಲಿ 250 ವಲಸೆ ಕಾರ್ಮಿಕರಿದ್ದು, ಅವರ ಕ್ವಾರಂಟೈನ್ ಗೆ ಆದ್ಯತೆ ನೀಡಲಾಗುವುದು. ಶೀಘ್ರ ಯಳ್ಳೂರ, ಪೀರನವಾಡಿ ಕಂಟೈನ್ಮೆಂಟ್ ಝೋನ್ ಆದೇಶ ಡಿನೋಟಿಫೈ ಮಾಡಲಾಗುವುದು. ಮೇ 15 ರ ಬಳಿಕ ಬೆಳಗಾವಿ ನಗರದ ಕಂಟೈನ್ಮೇಂಟ್ ಝೋನ್ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಕುಡಚಿಯಲ್ಲಿ 1300 ಕ್ಕೂ ಅಧಿಕ ಜನರ ಗಂಟಲು ದ್ರವ ಪರೀಕ್ಷಿಸಲಾಗಿದೆ. ಯಾವುದೇ ಹೊಸ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗದಿದ್ದರೆ ಮೇ  22 ರ ಬಳಿಕ ಸಂಪೂರ್ಣ ನಿಯಂತ್ರಣಕ್ಕೆ ಬರಲಿದೆ. ಹೋಟೆಲ್ ನಲ್ಲಿ ಕ್ವಾರಂಟೈನ್ ಇದ್ದ 462 ಜನರನ್ನು ಬಿಡುಗಡೆ ಮಾಡಲಾಗಿದೆ. ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಈಗಾಗಲೇ ಶೇ.85 ರಷ್ಟು ಆಹಾರಧಾನ್ಯ ವಿತರಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಕೋವಿಡ್-19 ಉಸ್ತುವಾರಿ ಅಧಿಕಾರಿ ರಾಜೇಂದ್ರ ಚೋಳನ್ ಮಾತನಾಡಿ, ಕಳೆದ ಹತ್ತು ದಿನಗಳಲ್ಲಿ ಅತೀ ಹೆಚ್ಚು ಮಾದರಿ ಪರೀಕ್ಷೆ ಬೆಳಗಾವಿಯಲ್ಲಿ ನಡೆಸಲಾಗಿದ್ದು, ಇದುವರೆಗೆ ಸುಮಾರು 7 ಸಾವಿರ ಮಾದರಿಗಳನ್ನು ಪರೀಕ್ಷಿಸಲಾಗಿರುತ್ತದೆ. ಬೆಂಗಳೂರು ಹೊರತುಪಡಿಸಿದರೆ ಇದು ಅತೀ ಹೆಚ್ಚಿನ ಸಂಖ್ಯೆಯಾಗಿದೆ ಎಂದರು.

ಹಿರೇಬಾಗೇವಾಡಿ, ಕುಡಚಿ ಪ್ರದೇಶದಲ್ಲಿ ಬಹುತೇಕ ಮಾದರಿ ಸಂಗ್ರಹಿಸಲಾಗುತ್ತಿದೆ. ಸೋಂಕು ದೃಢಪಟ್ಟಿರುವ ಬಹುತೇಕ ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಂಪರ್ಕಕ್ಕೆ ಬಂದಿರುವ ಎಲ್ಲರ ಮಾದರಿ ಪರೀಕ್ಷೆ ನಡೆಸಲಾಗಿದೆ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ್ ಕೋರೆ, ಸಂಸದ ಅಣ್ಣಾಸಾಹೇಬ್ ಜೊಲ್ಲೆ, ಶಾಸಕರಾದ ಅನಿಲ ಬೆನಕೆ, ಅಭಯ ಪಾಟೀಲ, ಪೊಲೀಸ್ ಆಯುಕ್ತ ಬಿ‌.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss