ಬೆಳಗಾವಿ : ಮುಂದಿನ ಹತ್ತು ದಿನಗಳಲ್ಲಿ ದೇಶಾದ್ಯಂತ ೨೬೦೦ ರೈಲುಗಳು ಸಂಚರಿಸಲಿದ್ದು, ಈ ರೈಲುಗಳ ಮೂಲಕ ೩೬ ಲಕ್ಷ ಶ್ರಮೀಕರನ್ನು ಅವರವರ ಸ್ಥಳಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಬೇಕಿದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು. ಅವರು ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮುಂದಿನ ೧೦ ದಿನಗಳಲ್ಲಿ ೩೬ ಲಕ್ಷ ಶ್ರಮಿಕರನ್ನು ಅವರವರ ಸ್ಥಳಗಳಿಗೆ ಕಳುಹಿಸಲು ವ್ಯವಸ್ಥೆ ಮಾಡಬೇಕಿದೆ. ಈಗಾಗಲೇ ೩೧ ಲಕ್ಷ ಶ್ರಮಿಕರನ್ನು ಅವರವರ ಊರುಗಳಿಗೆ ಕಳುಹಿಸಿ ಕೊಡಲಾಗಿದೆ ಎಂದರು. ರಾಜ್ಯಗಳು ಸಹಕಾರ ಕೇಳಿದರೆ ಹಾಗೂ ಸಮ್ಮತಿಸಿದರೆ ಆಯಾ ರಾಜ್ಯದೊಳಗೆ ರೈಲುಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು. ಮುಂದಿನ ಹತ್ತು ದಿನಗಳಲ್ಲಿ ಇದರ ಲಾಭ ಪಡೆದು ಎಲ್ಲರೂ ತಮ್ಮ ತಮ್ಮ ಸ್ಥಳಗಳಿಗೆ ತೆರಳಬೇಕು. ಈಗಾಗಲೇ ಬೆಂಗಳೂರು-ಬೆಳಗಾವಿ, ಬೆಂಗಳೂರು-ಮೈಸೂರು ನಗರಗಳ ಮಧ್ಯೆ ರೈಲುಗಳ ಸಂಚಾರ ಆರಂಭಿಸಲಾಗಿದೆ, ಜೂನ್ ೧ ರಿಂದ ಮತ್ತಷ್ಟು ರೈಲುಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲಿದ್ದೇವೆ ಎಂದು ತಿಳಿಸಿದರು.
ಭಾನುವಾರ ಕರ್ಪ್ಯು ಜಾರಿಯಾಗಿರುವ ಹಿನ್ನೆಲೆಯಲ್ಲಿ ಲಾಕ್ಡೌನ್ ಸಂಪೂರ್ಣವಾಗಿ ಯಶಸ್ವಿಯಾಗಿದೆ. ಕೊರೊನಾ ವಿರುದ್ಧ ಹೋರಾಡಲು ನಾವೆಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಇದನ್ನು ಪಾಲನೆ ಮಾಡಿದರೆ ಕೊರೋನಾ ವಿರುದ್ಧ ಜಯ ಸಾಧ್ಯವಾಗುತ್ತೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮಾಧ್ಯಮಗಳ ಸಲಹೆ ಪಾಲಿಸಿ ಪ್ರತಿಯೊಬ್ಬರೂ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಚಿವ ಸುರೇಶ ಅಂಗಡಿ ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.