ಬೆಳಗಿನ ವಾತಾವರಣ ಆಶಾದಾಯಕವಾಗಿರಲಿ. ಸಕಾರಾತ್ಮಕ ಆಲೋಚನೆಗಳೇ ತುಂಬಿರಲಿ. ಬೆಳಗ್ಗೆ ನಿಮ್ಮ ಮನಸ್ಥಿತಿ ಸಂತಸವಾಗಿದ್ದರೆ ಇಡೀ ದಿನವೂ ಉಲ್ಲಾಸದಾಯಕವಾಗಿರುತ್ತೆ. ನೀವೇ ಆಲೋಚಿಸಿ, ಬೆಳಗ್ಗೆ ಯಾವುದಾದರೂ ವಿಷಯಕ್ಕೆ ನಿಮಗೆ ಬೇಸರವಾದರೆ ಅಥವಾ ಕೋಪ ಬಂದರೆ ಅದು ನಿಮ್ಮ ಇಡೀ ದಿನವನ್ನೇ ಹಾಳುಮಾಡುತ್ತದೆ. ಹಾಗಾದರೆ ನೀವು ಬೆಳಗ್ಗೆ ಖುಷಿಯಿಂದ ಇರುವುದು ಹೇಗೆ? ಇಲ್ಲಿದೆ ಕೆಲವು ಟಿಪ್ಸ್
- ರಾತ್ರಿ ನಿಮ್ಮ ನಿದ್ದೆ ಚೆನ್ನಾಗಿರಲಿ: ಮೊಬೈಲ್ ನೋಡುತ್ತಾ ರಾತ್ರಿ ಬಹಳ ಹೊತ್ತು ಎದ್ದಿರುತ್ತೀರಿ. ಇದರಿಂದ ಯಾವ ಲಾಭವೂ ಇಲ್ಲ. ಇದರ ಬದಲು ನಾಲ್ಕು ಪುಟ ಪುಸ್ತಕ ಓದಿ. ಇದರಿಂದ ನಿಮ್ಮ ಜ್ಞಾನವೂ ವೃದ್ಧಿಯಾಗುತ್ತದೆ. ಕಣ್ಣಿಗೆ ದಣಿವಾಗಿ ಒಳ್ಳೆ ನಿದ್ದೆಯೂ ಬರುತ್ತದೆ. ರಾತ್ರಿ ಒಳ್ಳೆಯ ನಿದ್ದೆಯಾದರೆ ಬೆಳಗ್ಗೆ ನಿಮ್ಮ ದಿನ ಸಂತೋಷದಿಂದ ಕೂಡಿರುತ್ತದೆ.
- ಪ್ರತಿದಿನ ಹೊಸ ಅವಕಾಶ: ರಾತ್ರಿ ಮಲಗಿದರೆ ಬೆಳಗ್ಗೆ ಏಳುತ್ತೇವೋ, ಇಲ್ಲವೋ ಎಂಬುದೇ ಗೊತ್ತಿಲ್ಲ. ಆದರೆ ನಾವು ಏಳುತ್ತೇವೆ. ನಮಗೆ ಪ್ರತಿದಿನವೂ ನೂತನ ಅವಕಾಶವಾಗಿದೆ. ಇಂದು ನಿಮ್ಮ ಭವಿಷ್ಯ ಕಾಲವನ್ನು ಬಿಟ್ಟು ಮುಂದೆ ಬರಲು ಒಳ್ಳೆ ಅವಕಾಶವಾಗಿದೆ. ಈ ದಿನ ನಿಮಗೆ ಯಶಸ್ಸು ಖಂಡಿತಾ ಪ್ರಾಪ್ತಿಯಾಗುತ್ತದೆ ಎಂಬ ಸಕಾರಾತ್ಮಕ ಯೋಚನೆಯಿಂದ ದಿನ ಆರಂಭಿಸಿ.
- ಆತ್ಮವಿಶ್ವಾಸವೇ ಕೀಲಿಕೈ: ಬೆಳಗ್ಗೆ ಎದ್ದ ತಕ್ಷಣವೇ ಅಂದುಕೊಳ್ಳಿ, ನೀವು ಬುದ್ಧಿವಂತರು. ನಿಮಗೆ ಆತ್ಮವಿಶ್ವಾಸವಿದೆ. ನನ್ನನ್ನು ನಾನು ಹೇಗಿದ್ದೇನೋ ಹಾಗೆ ಒಪ್ಪಿಕೊಳ್ಳುತ್ತೇನೆ. ಇತರರೊಂದಿಗೆ ನಾನು ನನ್ನನ್ನು ಹೋಲಿಸಿಕೊಳ್ಳುವುದಿಲ್ಲ. ನಕಾರಾತ್ಮಕ ಭಾವನೆಯನ್ನು, ದ್ವೇಷವನ್ನು ಬಿಟ್ಟುಬಿಡುತ್ತೇನೆ. ಎಲ್ಲರಲ್ಲಿಯೂ ಒಳ್ಳೆಯದನ್ನೇ ನೋಡುತ್ತೇನೆ ಎಂದುಕೊಳ್ಳಿ.
- ಬೇರೆಯವರಿಗೆ ಸಹಾಯ ಮಾಡಿ: ಪ್ರತಿದಿನ ನಿಮ್ಮ ಕೆಲಸ ನೀವು ಮಾಡಿಕೊಳ್ಳುತ್ತೀರಿ. ಆದರೆ ದಿನಕ್ಕೊಮ್ಮೆಯಾದರೂ ಇತರರಿಗೆ ಸಹಾಯ ಮಾಡಿ. ನೀವು ಎದ್ದು ನಿಮ್ಮ ಅಮ್ಮ,ಹೆಂಡತಿ, ತಂದೆ, ಅಣ್ಣ,ತಮ್ಮ ಯಾರಿಗಾದರೂ ಸಹಾಯ ಮಾಡಿ. ಇಲ್ಲವೇ ಪಕ್ಕದ ಮನೆ, ಅಥವಾ ಆಫೀಸಿಗೆ ಹೋಗುವಾಗ ದಾರಿ ಮಧ್ಯೆ ಇನ್ಯಾರಿಗಾದರೂ ಸಹಾಯ ಮಾಡಿ. ಅವರು ಹೇಳುವ ಧನ್ಯವಾದ ನಿಮಗೆ ತೃಪ್ತಿ ನೀಡಲಿದೆ.
- ಬೆಳಗಿನ ಆಹಾರ ಆರೋಗ್ಯಕರವಾಗಿರಲಿ: ಬೆಳಗ್ಗೆ ತಿನ್ನುವ ತಿಂಡಿ ನಿಮ್ಮ ಮನಸ್ಥಿತಿ ಹಾಗೂ ದೇಹದ ಮೇಲೆ ಪರಿಣಾಮ ಬೀರಲಿದೆ. ಬೆಳಗಿನ ತಿಂಡಿ ಆರೋಗ್ಯಕರವಾಗಿರಲಿ. ಉತ್ತಮವಾದುದನ್ನೇ ಆರಿಸಿ. ಆದಷ್ಟು ಹಣ್ಣು, ತರಕಾರಿ ತಿಂದರೆ ಒಳ್ಳೆಯದು.
- ಬೆಳಗಿಗೆ ನಿಮಗೊಂದು ದಿನಚರಿ ಇರಲಿ: ಪ್ರತಿದಿನ ಎದ್ದ ನಂತರ ಒಂದು ದಿನಚರಿ ಇಟ್ಟುಕೊಳ್ಳಿ. ಇಷ್ಟು ಹೊತ್ತಿಗೆ ಏಳುತ್ತೇನೆ, ಎದ್ದ ನಂತರ ಕೆಲಸ, ವ್ಯಾಯಾಮ, ತಿಂಡಿ,ಹೀಗೆ ಎಲ್ಲದ್ದಕ್ಕೂ ಒಂದು ದಿನಚರಿ ಮಾಡಿಟ್ಟುಕೊಳ್ಳಿ.
- ವ್ಯಾಯಾಮ, ಯೋಗ ಇದ್ದೇ ಇರಲಿ: ವ್ಯಾಯಾಮ ಅಥವಾ ಯೋಗ ಮಾಡುವುದನ್ನು ಮರೆಯಬೇಡಿ. ಇಂದು ಆಫೀಸಿಲ್ಲ, ಶಾಲಾ ಕಾಲೇಜಿಲ್ಲ ಎಂದರೂ ಪರವಾಗಿಲ್ಲ. ನಿಮ್ಮ ವ್ಯಾಯಾಮ, ಯೋಗದಲ್ಲಿ ಬದಲಾವಣೆ ಬೇಡ. ವ್ಯಾಯಾಮ ಮಾಡಿದ ದಿನಕ್ಕೂ ಮಾಡದ ದಿನಕ್ಕೂ ವ್ಯತ್ಯಾಸ ನಿಮಗೇ ತಿಳಿಯುತ್ತದೆ. ಇದು ನಿಮ್ಮ ದೇಹದ ಆಲಸಿತನವನ್ನು ದೂರ ಮಾಡಲಿದೆ.
- Advertisement -