ಹೊಸದಿಗಂತ ವರದಿ,ಮಂಡ್ಯ:
ಸರ್ಕಾರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಮೆ ಬಳಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ನೇತೃತ್ವದಲ್ಲಿ ಜಮಾಯಿಸಿದ ಉಪನ್ಯಾಸಕರು, ಎಸ್.ಪಿ. ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು.
ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸುಮಾರು 14,500ಕ್ಕೂ ಹೆಚ್ಚು ಅತಿಥಿ ಉಪನ್ಯಾಸಕರು ಕಳೆದ ಎರಡು ದಶಕಗಳಿಂದ ಅತ್ಯಲ್ಪ ಗೌರವಧನದ ಅಡಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರಲ್ಲಿ ಬಹುತೇಕರು ಯುಜಿಸಿ ನಿಯಮಾನುಸಾರ ಪಿಎಚ್ಡಿ, ನೆಟ್, ಸ್ಲೆಟ್ ಹಾಗೂ ಎಂ.ಫಿಲ್ ಅರ್ಹತೆಯುಳ್ಳವರಾಗಿದ್ದು, ಸೇವಾ ವಿಲೀನಗೊಳಿಸಿ ಸ್ವಾವಲಂಭಿ ಹಾಗೂ ಸ್ವಾಭಿಮಾನದಿಂದ ಬದುಕಲು ಹಾಗೂ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಮನವಿ ಸಲ್ಲಿಸಿದ್ದರೂ ಇದುವರೆವಿಗೂ ಈಡೇರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
2020-21ನೇ ಸಾಲಿಗೆ ಅತಿಥಿ ಉಪನ್ಯಾಸಕರು ಶೀಘ್ರ ಕರ್ತವ್ಯದಲ್ಲಿ ಮುಂದುವರಿಯಲು ಆದೇಶಿಸಬೇಕು. ಶಾಶ್ವತ ಸೇವಾ ನಿಯಮಾವಳಿಯನ್ನು ರೂಪಿಸಿ, ಮಾನವೀ ನೆಲೆಗಟ್ಟಿನಲ್ಲಿ ಸೇವಾ ಭದ್ರತೆ ನೀಡಬೇಕು. ದಿವ್ಯಾಂಗ ಅತಿಥಿ ಉಪನ್ಯಾಸಕರಿಗೆ ಮೊದಲ ಆಧ್ಯತೆ ನೀಡಬೇಕು. ಮಹಿಳಾ ಅತಿಥಿ ಉಪನ್ಯಾಸಕರಿಗೆ ಖಾಯಂ ಪ್ರಾಧ್ಯಾಪಕರಂತೆ ವೇತನ ಸಹಿತ ಹೆರಿಗೆ ರಜೆ ಮಂಜೂರು ಮಾಡಬೇಕು ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.