Sunday, August 14, 2022

Latest Posts

ಬೇಡಿಕೆಗೆ ಸ್ಪಂದನೆ ಸಿಗದೇ ಹೋದರೆ ಹೋರಾಟದ ಸ್ವರೂಪವೇ ಬದಲಾಗಲಿದೆ: ಕೊರೋನಾ ವಾರಿಯರ್ ಗಳ ಎಚ್ಚರಿಕೆ

ಉಡುಪಿ: ಕಳೆದ 6 ತಿಂಗಳುಗಳಿಂದ ಯಾವುದೇ ಭದ್ರತೆ ಇಲ್ಲದೇ ಕೊರೋನಾ ವಾರಿಯರ್‌ಗಳಾಗಿ ದುಡಿಯುವ ನಮಗೆ ಚಪ್ಪಾಳೆ, ಹೂವಿನ ಸ್ವಾಗತ ಬೇಡ. ನಮ್ಮ ಬೇಡಿಕೆಗೆ ಸ್ಪಂದನೆ ಸಿಗದೇ ಹೋದರೆ ಅಕ್ಟೋಬರ್ 1ರಿಂದ ಹೋರಾಟದ ಸ್ವರೂಪವೇ ಬದಲಾಗಲಿದೆ. ಹಿರಿಯ ಅಧಿಕಾರಿಗಳ ಶೋಕಾಸ್ ನೋಟಿಸ್‌ಗೆ ನಾವು ಬಗ್ಗುವುದಿಲ್ಲ ಎಂದು ಕರ್ನಾಟಕ ರಾಜ್ಯ ಆ. ಮತ್ತು ಕು.ಕ. ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರ ಉಡುಪಿ ಜಿಲ್ಲಾ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ, ನಮ್ಮನ್ನು ಕೊರೋನಾ ವಾರಿಯರ್‌ಗಳೆಂದು ಗುರುತಿಸುತ್ತೀರಿ. ಆದರೆ ನಮ್ಮ ಬದುಕಿಗೆ, ಉದ್ಯೋಗಕ್ಕೆ ಭದ್ರತೆ ಇಲ್ಲ. ಕಳೆದ 10-15 ವರ್ಷಗಳಿಂದ ದುಡಿಯುತ್ತಿದ್ದರೂ ಕನಿಷ್ಠ ವೇತನವೂ ಇಲ್ಲ. ಕೋವಿಡ್-19 ಸಂದರ್ಭ ರಜೆಯೂ ಇಲ್ಲದೇ ಕೆಲಸ ಮಾಡಿದ ನಮ್ಮಲ್ಲಿ ಅತೀ ಹೆಚ್ಚು ಮಂದಿಗೆ ಕೊರೋನಾ ಪಾಸಿಟಿವ್ ಬಂದಿದೆ. ಆದರೆ ಸರಕಾರ ಮಾತ್ರ ನಮಗೆ ನ್ಯಾಯ ಒದಗಿಸುತ್ತಿಲ್ಲ ಎಂದು ಆರೋಪಿಸಿದರು.
ಸಮಾನ ಹುದ್ದೆಗೆ ಸಮಾನ ವೇತನ, ವಿಮೆ, ವೈದ್ಯಕೀಯ, ಸೇವಾ ಭದ್ರತೆ ಸಹಿತ ನೌಕರರ ನ್ಯಾಯಯುತ ಬೇಡಿಕೆಗೆ ಸಂಬಂಧಿಸಿ ಸೆ. 4ರೊಳಗೆ ಸರಕಾರಕ್ಕೆ ವರದಿ ನೀಡುವುದಾಗಿ ಹೇಳಿದ್ದು, ಇದುವರೆಗೆ ಸಲ್ಲಿಕೆಯಾಗಿಲ್ಲ. ಸೆ. 24ರಿಂದ ಜಿಲ್ಲೆಯ 495 ಮಂದಿ ಸಹಿತ ರಾಜ್ಯದ 30ಸಾವಿರ ಸಿಬ್ಬಂದಿ ಅಧಿಕೃತವಾಗಿ ಸೇವೆ ಬಹಿಷ್ಕರಿಸಿ ಮನೆಯಲ್ಲಿದ್ದೇವೆ. ಆದರೂ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ. ನಮ್ಮ ಕಷ್ಟ ಆಲಿಸುವುದು ಬಿಟ್ಟು ಹಿರಿಯ ಅಧಿಕಾರಿಗಳ ಮೂಲಕ ಶೋಕಾಸ್ ನೋಟಿಸ್ ನೀಡುತ್ತಿದೆ ಎಂದು ದೂರಿದರು.
ಕೋವಿಡ್-19 ಸಂದರ್ಭ 6 ತಿಂಗಳು ಯಾವುದೇ ರಜೆ ಮಾಡದೇ ನಾವು ಕೆಲಸ ನಿರ್ವಹಿಸಿದ್ದೇವೆ. ನಮ್ಮ ನ್ಯಾಯಯುತ ಬೇಡಿಕೆಗೆ ಸ್ಪಂದಿಸುವಂತೆ ಮನವಿ ಕೊಟ್ಟಿದ್ದೇವೆ. ಕೊರೋನಾ ವಾರಿಯರ್‌ಗಳಿಗೆ ನಿಮ್ಮ ಚಪ್ಪಾಳೆ, ಹೂವಿನ ಸ್ವಾಗತ ಬೇಡ. ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸಲಿ, ಮತ್ತೆ ನಾವು ಎಂದಿನಂತೆ ಕೆಲಸ ಮಾಡುತ್ತೇವೆ. ಈ ತಿಂಗಳ ಅಂತ್ಯದೊಳಗೆ ತೀರ್ಮಾನಕ್ಕೆ ಬಾರದೇ ಹೋದರೆ ಹೋರಾಟ ಉಗ್ರ ಸ್ವರೂಪ ಪಡೆಯಲಿದೆ. ಹಾಗಂತ ನಾವು ಬೀದಿಗೆ ಬಂದು ಹೋರಾಟ ಮಾಡಲ್ಲ. ಕೋವಿಡ್‌ನ ಎಲ್ಲ ಮಾರ್ಗಸೂಚಿ ಪಾಲಿಸುತ್ತೇವೆ ಎಂದು ಖಜಾಂಜಿ ಗಿರೀಶ್ ಕಡ್ಡಿಪುಡಿ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಡಾ. ರೂಪಕ್ ನಾಗರಾಜ್, ಪ್ರಧಾನ ಕಾರ್ಯದರ್ಶಿ ಗುರುರಾಜ್ ಗಂಗಾಣಿ, ಮಹಿಳಾ ಘಟಕದ ಅಧ್ಯಕ್ಷೆ ರೇಷ್ಮಾ ಪೈ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss