Saturday, July 2, 2022

Latest Posts

ಬೇಸಿಗೆಯಲ್ಲಿ ಕಾಡ್ಗಿಚ್ಚು ಅನಾಹುತ ಎದುರಿಸಲು ಇಲಾಖೆ ಸರ್ವಸನ್ನದ್ಧ : ಸಚಿವ ಅರವಿಂದ್ ಲಿಂಬಾವಳಿ

ಹೊಸ ದಿಗಂತ ವರದಿ , ಮೈಸೂರು:

ಈ ಬಾರಿಯ ಬೇಸಿಗೆಯಲ್ಲಿ ಅರಣ್ಯದಲ್ಲಿ ಕಾಡ್ಗಿಚ್ಚು ಅನಾಹುತ ತಡೆಯಲು ಅರಣ್ಯ ಇಲಾಖೆ ಸರ್ವ ಸನ್ನದ್ಧವಾಗಿದ್ದು, ಬೆಂಕಿ ಅನಾಹುತ ತಡೆಯಲು ಅಗತ್ಯಬಿದ್ದರೆ ಸೇನಾ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲು ಚಿಂತಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಅರಣ್ಯ ಇಲಾಖೆ ಸಚಿವ ಅರವಿಂದ ಲಿಂಬಾವಳಿ ತಿಳಿಸಿದರು.

ಬೆಂಕಿ ಅನಾಹುತವುಂಟಾಗದoತೆ ತಡೆಯಲು ಕ್ರಮಕೈಗೊಳ್ಳಲಾಗಿದೆ
ಭಾನುವಾರ ರಾತ್ರಿ ಮೈಸೂರಿನ ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ಖ್ಯಾತ ಹಿರಿಯ ಕಾದಂಬರಿಕಾರ ಡಾ.ಎಸ್.ಎಲ್.ಭೈರಪ್ಪರ ನಿವಾಸಕ್ಕೆ ಭೇಟಿ ನೀಡಿ, ಅವರೊಂದಿಗೆ ಒಂದು ಗಂಟೆಗೂ ಹೆಚ್ಚುಕಾಲ ಮಾತುಕತೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಸಿಗೆ ಮುಗಿಯುವ ತನಕ ಅರಣ್ಯ ಇಲಾಖೆಯಲ್ಲಿರುವ ಯಾವುದೇ ಸಿಬ್ಬಂದಿಗಳನ್ನು ವರ್ಗಾವಣೆ ಮಾಡದಂತೆ ಸೂಚಿಸಲಾಗಿದೆ. ಅರಣ್ಯದಲ್ಲಿ ಫೈರ್ ಲೈನ್ ಮಾಡಲು ಸೂಚಿಸಿ, ಕಾಡ್ಗಿಚ್ಚು ಕಾಣಿಸಿಕೊಂಡರೂ, ಅದು ಹರಡದಂತೆ ಅಗತ್ಯವಿರುವ ಎಲ್ಲಾ ಮುನ್ನೇಚ್ಚರಿಕೆ ಕ್ರಮಗಳನ್ನು ವಹಿಸಲಾಗಿದ್ದು, ಫೈರ್ ಪೈಟರ್‌ಗಳು ಹಾಗೂ ವಾಟರ್ ಜೆಟ್‌ಗಳನ್ನು ಬಳಸಿಕೊಂಡು ಬೆಂಕಿ ಅನಾಹುತವುಂಟಾಗದoತೆ ತಡೆಯಲು ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು.

ಕಾಡ್ಗಿಚ್ಚು ನಂದಿಸಲು ಸೇನಾ ಹೆಲಿಕಾಪ್ಟರ್ ಬಳಕೆಗೂ ಚಿಂತನೆ
ಈಗಾಗಲೇ ಮೈಸೂರು ವಿಭಾಗದ ಇಲಾಖೆಯ ಅಧಿಕಾರಿಗಳ ಸಭೆಯನ್ನು ನಡೆಸಿ, ಬೆಂಕಿ ಅನಾಹುತವಾಗದಂತೆ ಮುನ್ನೇಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಿದ್ದೇನೆ, ಅಗತ್ಯ ಬಿದ್ದರೆ ಸೇನಾ ಹೆಲಿಕಾಪ್ಟರ್‌ಗಳನ್ನು ಬೆಂಕಿ ನಂದಿಸಲು ಬಳಸಿಕೊಳ್ಳಲು ಚಿಂತಿಸಲಾಗಿದೆ ಎಂದರು.
ಅರಣ್ಯದಲ್ಲಿ ಲಂಟನಾ ಕಳೆ ವ್ಯಾಪಕವಾಗಿ ಬೆಳೆದಿರುವ ಕಾರಣ, ಅರಣ್ಯ ಹಸರೀಕರಣಗೊಳ್ಳದೆ, ನೀರು ಸರಿಯಾಗಿ ಸಿಗದೆ ಕಾಡು ಪ್ರಾಣಿಗಳು ಅಂಚಿನಲ್ಲಿರುವ ನಾಡಿಗೆ ಬರುತ್ತಿವೆ. ಇದನ್ನು ತಪ್ಪಿಸಲು ಲಂಟನಾ ಕಳೆಯನ್ನು ಬೇರೆ ಸಮೇತ ಕಿತ್ತು ಹಾಕಬೇಕಾಗಿದೆ. ಇದಕ್ಕಾಗಿ ಖಾಸಗಿ ಸಂಸ್ಥೆಗಳು ಸಿಎಸ್ ಆರ್ ಫಂಡ್‌ನ್ನು ನೀಡುವಂತೆ ಮನವಿ ಮಾಡಲಾಗುತ್ತದೆ. ಅಲ್ಲದೇ ಸ್ವಯಂ ಸೇವಕರು, ವನ್ಯಜೀವಿಗಳ ಪ್ರಿಯರನ್ನು ಬಳಸಿಕೊಂಡು ಕಳೆಯನ್ನು ತೆಗೆದು, ಹಸಿರು ಬೆಳೆಸುವ ಪ್ರಯತ್ನವನ್ನು ನಡೆಸಲಾಗುವುದು ಎಂದು ಹೇಳಿದರು.

ಕಾಡಿನಿಂದ ನಾಡಿಗೆ ಪ್ರಾಣಿಗಳು ಬಾರದಂತೆ ತಡೆಯಲು ರೈಲು ಕಂಬಿಗಳ ಅಳವಡಿಕೆ
ಕಾಡು ಪ್ರಾಣಿಗಳು ಕಾಡಿನಿಂದ ನಾಡಿಗೆ ಬಾರದಂತೆ ತಡೆಯಲು ರೈಲು ಕಂಬಿ ಅಳವಡಿಕೆ ಬಹಳ ಪರಿಣಾಮಕಾರಿಯಾಗಿದೆ
ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೈಲೆಟ್ ಪ್ರಾಜೆಕ್ಟ್ ನಡಿ ಈಗಾಗಲೇ ರೈಲು ಕಂಬಿಗಳ ಅಳವಡಿಕೆ ನಡೆದಿದೆ. ಮತ್ತಷ್ಟು ಅರಣ್ಯದಂಚಿನಲ್ಲಿ ಅಳವಡಿಸಬೇಕಾದರೆ, ಅದಕ್ಕೆ ಕೇಂದ್ರ ಸರ್ಕಾರದಿಂದ ಅನುಮತಿ, ಅನುದಾನ ಬೇಕಾಗುತ್ತದೆ. ಹಾಗಾಗಿ ಸದ್ಯದಲ್ಲಿಯೇ ಕೇಂದ್ರ ಸಚಿವರಾದ ಪ್ರಕಾಶ್ ಜಾವಡೆಕರ್, ಪಿಯೂಸ್ ಗೋಯಲ್ ಅವರನ್ನು ಭೇಟಿ ಮಾಡಿ, ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಅನುದಾನ ಬಿಡುಗಡೆಗೆ ಕ್ರಮ
ಡಾ.ಎಸ್.ಎಲ್.ಭೈರಪ್ಪನವರು ನನ್ನ ಮಾರ್ಗದರ್ಶಕರು ಕೂಡ ಆಗಿದ್ದಾರೆ. ಹಾಗಾಗಿ ಅವರ ಸಲಹೆಗಳನ್ನು ಕೇಳಲು ಭೇಟಿ ಮಾಡಿದ್ದೆ, ಅವರ ಪರ್ವ ಕಾದಂಬರಿ ನಾಟಕ ಪ್ರದರ್ಶನ ಮೈಸೂರಿನಿಂದ ಆರಂಭಿಸಲಾಗುತ್ತಿದ್ದು, ರಾಜ್ಯಾದ್ಯಾಂತ ನಾಟಕ ಪ್ರದರ್ಶನ ನಡೆಸಲು ರಂಗಾಯಣ ಉದ್ದೇಶಿಸಿದ್ದು, 40 ಲಕ್ಷ ರೂ ಪ್ರಾರಂಭಿಕ ಅನುದಾನವನ್ನು ನೀಡುವಂತೆ ರಂಗಾಯಣದ ನಿರ್ದೇಶಕರು ಕೋರಿದ್ದಾರೆ. ಹಾಗಾಗಿ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

5 ಕೋಟಿ ರೂ ಹಣ ಬಿಡುಗಡೆ
ಡಾ.ಎಸ್.ಎಲ್.ಭೈರಪ್ಪನವರ ಸ್ವಗ್ರಾಮವಾದ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಸಂಕೇಶ್ವರದಲ್ಲಿ ಸಾಹಿತ್ಯ ಆಸಕ್ತ ಯುವಕರಿಗೆ ತರಬೇತಿ ನೀಡುವ ಕೇಂದ್ರವೊoದನ್ನು ನಿರ್ಮಿಸಲು 5 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ. ಈ ಕೇಂದ್ರ ಯಾವ ರೀತಿ ನಿರ್ಮಾಣವಾಗಬೇಕು ಎಂಬುದರ ಕುರಿತು ಭೈರಪ್ಪನವರ ಸಲಹೆ, ಮಾರ್ಗದರ್ಶನವನ್ನು ಪಡೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಕಾಂಪೋಸ್ಟ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಮಹದೇವಯ್ಯ, ಮೈಸೂರು ಬಣ್ಣ ಮತ್ತು ಅರಗು ನಿಗಮದ ಅಧ್ಯಕ್ಷ ಎನ್.ವಿ.ಫಣೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚೆನ್ನಪ್ಪ, ಅರಣ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss