ಹೊಸದಿಗಂತ ವರದಿ, ಮಂಡ್ಯ:
ರಸ್ತೆ ಬದಿ ನಡೆದುಕೊಂಡು ಮನೆಗೆ ತೆರಳುತ್ತಿದ್ದ ಮಹಿಳೆಯಿಂದ ಬೈಕ್ನಲ್ಲಿ ಬಂದ ಅಪರಿಚಿತ ದುಷ್ಕರ್ಮಿಗಳಿಬ್ಬರು ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಇಲ್ಲಿನ ಅಶೋಕನಗರ ಬಡಾವಣೆಯಲ್ಲಿ ನಡೆದಿದೆ.
ನಗರದ ಕೆ. ರಾಧಎಂಬುವರೇ ಮಾಂಗಲ್ಯ ಸರ ಕಳೆದುಕೊಂಡವರಾಗಿದ್ದಾರೆ. ನಂದಾ ಚಿತ್ರಮಂದಿರ ಕಡೆಯಿಂದ ಅಶೋಕನಗರದ 1ನೇ ಕ್ರಾಸ್ ರಸ್ತೆಯಲ್ಲಿ ರಾತ್ರಿ ಸುಮಾರು 7-30ರ ಸಮಯದಲ್ಲಿ ರಸ್ತೆ ಬದಿ ನಡೆದುಕೊಂಡು ಬರುತ್ತಿದ್ದ ವೇಳೆ ಹಿಂದಿನಿಂದ ಬಂದ ಅಪರಿಚಿತ ದುಷ್ಕರ್ಮಿಗಳು ಒಂಟಿ ಮಹಿಳೆಯನ್ನು ನೋಡಿಕೊಂಡು ಹೋಗಿದ್ದಾರೆ. ಮತ್ತೆ ಬೈಕ್ ತಿರುಗಿಸಿಕೊಂಡು ರಾಧ ಅವರ ಬಳಿ ಬಂದು ಕತ್ತಿನಲ್ಲಿದ್ದ ಮಾಂಗಲ್ಯ ಸರ ಕಿತ್ತುಕೊಂಡಿದ್ದಾರೆ. ಅವರು ಮಾಂಗಲ್ಯ ಸರ ಹಿಡಿದುಕೊಂಡರಾದರೂ, ಸ್ವಲ್ಪ ಅವರ ಕೈಯಲ್ಲಿ ಉಳಿದಿದ್ದು, ಉಳಿದರ್ಧ ತುಂಡಾಗಿ ಅಪರಿಚಿತ ದುಷ್ಕರ್ಮಿಗಳು ಕಸಿದುಕೊಂಡು ಪರಾರಿಯಾಗಿದ್ದಾರೆ.
ತಕ್ಷಣ ಪೊಲೀಸರಿಗೆ ಸುದ್ಧಿ ಮುಟ್ಟಿಸಿದ್ದು, ಸ್ಥಳಕ್ಕೆ ಆಗಮಿಸಿದ ಪೂರ್ವ ಠಾಣೆ ಪಿಎಸ್ಐ ಶರತ್ ಅವರು ಆರೋಪಿಗಳಾಗಿ ಹುಡುಕಾಟ ನಡೆಸಿದರಾದರೂ, ಯಾವುದೇ ಪ್ರಯೋಜನವಾಗಲಿಲ್ಲ.
ಸುದ್ಧಿ ತಿಳಿದು ಸ್ಥಳಕ್ಕೆ ಅಪರ ಪೊಲೀಸ್ ಅಧೀಕ್ಷಕ ಧನಂಜಯ, ವೃತ್ತ ನಿರೀಕ್ಷಕ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂಬಂಧ ಪೂರ್ವ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.