ಮಡಿಕೇರಿ: ಬೈಕ್ಗಳಲ್ಲಿ ಗಾಂಜಾ ಸಾಗಿಸುತ್ತಿದ್ದ ಪ್ರಕರಣ ಪತ್ತೆಹಚ್ಚಿರುವ ವೀರಾಜಪೇಟೆ ಪೊಲೀಸರು ಇಬ್ಬರನ್ನು ಬಂಧಿಸಿ 30ಸಾವಿರ ರೂ. ಮೌಲ್ಯದ 900 ಗ್ರಾಂ ಗಾಂಜಾ ಗಾಗೂ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ.
ಪೆರುಂಬಾಡಿಯಿಂದ ವೀರಾಜಪೇಟೆಗೆ ಬರುತ್ತಿದ್ದ ಎರಡು ಬೈಕ್ಗಳನ್ನು ನಗರ ಪೊಲೀಸರು ಅಲ್ಲಿನ ಮೀನುಪೇಟೆಯ ಕೀರ್ತಿ ಹೊಟೇಲ್ ಬಳಿ ಶೋಧಿಸಿದಾಗ ಅವುಗಳಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.
ಆಟೋ ಚಾಲಕ ಹಾಗೂ ಒಂದನೇ ಪೆರುಂಬಾಡಿಯ ನಿವಾಸಿ ಎಸ್.ಷಂಶುದ್ದೀನ್ (30) ಹಾಗೂ ಗುಂಡಿಗೆರೆ ಗ್ರಾಮದ ಕೆ.ಎಂ.ಶಫೀಕ್ (28) ಅವರುಗಳು ಬೆಳಗ್ಗೆ 9 ಗಂಟೆ ಸಮಯದಲ್ಲಿ ಎರಡು ಬೈಕ್ಗಳಲ್ಲಿ ವೀರಾಜಪೇಟೆಗೆ ಬರುತ್ತಿದ್ದಾಗ ಗ್ರಾಮಸ್ಥರು ನೀಡಿದ ಸುಳಿವಿನ ಮೇರೆಗೆ ಪೊಲೀಸರು ಬೈಕ್ಗಳನ್ನು ತಡೆದು ಅದರಲ್ಲಿದ್ದ ಬ್ಯಾಗ್ಗಳನ್ನು ಶೋಧಿಸಿದಾಗ ಅಕ್ರಮ ಗಾಂಜಾ ಪತ್ತೆಯಾಗಿದೆ.
ಈ ಇಬ್ಬರು ನಿರಂತರವಾಗಿ ಗಾಂಜಾ ದಂಧೆ ಮಾಡುತ್ತಿದ್ದು ನಗರ ಪೊಲೀಸ್ ಠಾಣೆಯಲ್ಲಿ ಈ ಹಿಂದೆಯೇ ಷಂಶುದ್ದೀನ್ ವಿರುದ್ಧ ಎರಡು ಹಾಗೂ ಶಫೀಕ್ ವಿರುದ್ಧ ಒಂದು ಗಾಂಜಾ ಪ್ರಕರಣ ದಾಖಲಾಗಿ ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿದೆ.
ಈ ಇಬ್ಬರು ಮೈಸೂರಿನಿಂದ ಗಾಂಜಾವನ್ನು ಖರೀದಿಸಿ ವೀರಾಜಪೇಟೆಯ ಗಾಂಜಾ ವ್ಯಾಪಾರಿಗಳಿಗೆ ವಿತರಿಸುತ್ತಿದ್ದರೆಂದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ. ಪೊಲೀಸರು ಗಾಂಜಾ ಅಕ್ರಮ ಸಾಗಾಟಕ್ಕೆ ಬಳಸಿದ (ಕೆ.ಎ.14 ಜಿ 9618) ಹಾಗೂ (ಕೆ.ಎಲ್.58 ಡಿ 7768) ಬೈಕ್ಗಳನ್ನು ವಶ ಪಡಿಸಿಕೊಂಡಿದ್ದಾರೆ.
ವೀರಾಜಪೇಟೆ ಸರ್ಕಲ್ ಇನ್ಸ್ಪೆಕ್ಟರ್ ಕ್ಯಾತೆಗೌಡ ಅವರ ಮಾರ್ಗದರ್ಶನದಲ್ಲಿ ನಗರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಬೋಜಪ್ಪ, ಲೋಕೇಶ್, ಗಿರೀಶ್, ಸಂತೋಷ್ ಹಾಗೂ ಯೋಗೀಶ್ ದಾಳಿ ನಡೆಸಿದ್ದರು