ಹೊಸ ದಿಗಂತ ವರದಿ, ಮಂಗಳೂರು:
ಸತತ ಕಾರ್ಯಾಚರಣೆ ಬಳಿಕ ಬೋಟ್ ದುರಂತದಲ್ಲಿ ಮಡಿದ ಎಲ್ಲಾ ಆರು ಮಂದಿ ಮೀನುಗಾರರ ಮೃತದೇಹವನ್ನು ಮುಳುಗುತಜ್ಞರು ಪತ್ತೆ ಹಚ್ಚಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಲಾಗಿದೆ.
ಸೋಮವಾರ ತಡ ರಾತ್ರಿ ಶ್ರೀ ರಕ್ಷಾ ಹೆಸರಿನ ಪರ್ಸೀನ್ ಬೋಟ್ ಉಳ್ಳಾಲ ಅಳಿವೆಬಾಗಿಲು ಬಳಿ ಮುಳುಗಡೆಯಾಗಿತ್ತು. ಇದರಲ್ಲಿದ್ದ ಒಟ್ಟು 25 ಮೀನುಗಾರರ ಪೈಕಿ ಆರು ಮಂದಿ ಕಣ್ಮರೆಯಾಗಿದ್ದು, ಇಬ್ಬರ ಮೃತದೇಹ ಮಾತ್ರ ಮಂಗಳವಾರ ಪತ್ತೆಯಾಗಿತ್ತು. ಬುಧವಾರ ಇತರ ನಾಲ್ಕು ಮಂದಿಯ ಮೃತದೇಹವೂ ಪತ್ತೆಯಾಗಿದೆ.
ಕಸಬಾ ಬೆಂಗರೆ ನಿವಾಸಿ ಹಸೈನಾರ್, ಚಿಂತನ್, ಜಿಯಾವುಲ್ಲಾ ಮತ್ತು ಅನ್ಸಾರ್ ಬುಧವಾರ ಪತ್ತೆಯಾದವರು. ಪಾಂಡುರಂಗ ಮತ್ತು ಪ್ರೀತಂ ಶವ
ಮಂಗಳವಾರವೇ ಪತ್ತೆಯಾಗಿತ್ತು. ಈ ನಾಲ್ವರ ಶವ ಬೋಟು ಮುಳುಗಿದ ಸಮೀಪವೇ ಪತ್ತೆಯಾಗಿದೆ. ಇವರ ಶವ ಮೀನಿನ ಬಲೆಗೆ ಸಿಲುಕಿದ್ದು, ಇವರು ಬಲೆಯಿಂದ ಹೊರಬರಲಾಗದೆ ಮೃತಪಟ್ಟಿರುವ ಸಾಧ್ಯತೆ ಇದೆ. ಕೋಸ್ಟ್ಗಾರ್ಡ್ ಹಾಗೂ ತಣ್ಣೀರುಬಾವಿ ಮುಳುಗುತಜ್ಞರ ತಂಡ ಶೋಧ ಕಾರ್ಯಾಚರಣೆ ನಡೆಸಿ ಶವಗಳನ್ನು ಪತ್ತೆಮಾಡಿತ್ತು.