Wednesday, June 29, 2022

Latest Posts

ಬೋಟ್ ದುರಂತ ಪ್ರಕರಣ: 6 ಕುಟುಂಬಗಳಿಗೆ ತಲಾ 6 ಲಕ್ಷ ರೂ. ಪರಿಹಾರದ ಆದೇಶ ಪತ್ರ ವಿತರಣೆ

ಹೊಸದಿಗಂತ ವರದಿ, ಮಂಗಳೂರು:

ಮೀನುಗಾರಿಕಾ ಬೋಟು ಮುಳುಗಡೆಯಾಗಿ ಮೃತಪಟ್ಟ ಐವರು ಮೀನುಗಾರರ ಕುಟುಂಬಗಳಿಗೆ ಮತ್ತು ಕಾಣೆಯಾದ ಒಬ್ಬರ ಕುಟುಂಬಕ್ಕೆ ಗುರುವಾರ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಲಾ 6 ಲಕ್ಷ ರೂಗಳ ಪರಿಹಾರದ ಆದೇಶ ಪತ್ರಗಳನ್ನು ಹಸ್ತಾಂತರಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸಂಸತ್ ಸದಸ್ಯ ನಳಿನ್‌ಕುಮಾರ್ ಕಟೀಲ್, ಶಾಸಕ ಡಿ.ವೇದವ್ಯಾಸ ಕಾಮತ್ ಮತ್ತು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಉಪಸ್ಥಿತರಿದ್ದರು.

ಮೀನುಗಾರರ ಸಂಕಷ್ಟ ಪರಿಹಾರ ನಿಧಿಯಿಂದ ಪರಿಹಾರದ ಮೊತ್ತವನ್ನು ಬಿಡುಗಡೆ ಮಾಡಲಾಗಿದೆ. ಮೃತ ಮೀನುಗಾರರ ಕುಟುಂಬಗಳು ತೀರಾ ಬಡತನದ ಹಿನ್ನೆಲೆ ಹೊಂದಿರುವುದರಿಂದ ಪರಿಹಾರದ ಮೊತ್ತವನ್ನು ಹೆಚ್ಚಿಸಬೇಕು ಎಂಬ ಆಗ್ರಹ ಬಂದಿದೆ. ಸಂಸತ್ ಸದಸ್ಯರು, ತಾನು ಹಾಗೂ ಶಾಸಕರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಪರಿಹಾರದ ಮೊತ್ತವನ್ನು ತಲಾ ರೂ.10 ಲಕ್ಷಕ್ಕೆ ಹೆಚ್ಚಿಸುವಂತೆ ವಿನಂತಿಸುವುದಾಗಿ ಕೋಟ ಶ್ರೀನಿವಾಸ ಪೂಜಾರಿ ಈ ಸಂದರ್ಭದಲ್ಲಿ ತಿಳಿಸಿದರು.

ಬೊಕ್ಕಪಟ್ನ ಬೆಂಗ್ರೆಯ ಪ್ರೀತಮ್, ಚಿಂತನ್ ಮೆಂಡನ್, ಪಾಂಡುರಂಗ ಸುವರ್ಣ, ಕಸ್ಬಾ ಬೆಂಗ್ರೆಯ ಗಿಹಾದ್, ಹಸೈನಾರ್ ಮತ್ತು ಅನ್ಸಾರ್ ಕುಟುಂಬದ ಸದಸ್ಯರು ಪರಿಹಾರದ ಆದೇಶದ ಪತ್ರಗಳನ್ನು ಸಚಿವರಿಂದ ಸ್ವೀಕರಿಸಿದರು. ಅನ್ಸಾರ್ ದೇಹಕ್ಕಾಗಿ ಶೋಧ ಕಾರ್ಯ ಮುಂದುವರಿದಿದೆ.

ಮೀನುಗಾರಿಕೆಯಿಂದ ಮರಳುತ್ತಿದ್ದ ಸ್ಟೀಲ್ ಪರ್ಸಿನ್ ಬೋಟು ಬೊಕ್ಕಪಟ್ನದಿಂದ 10 ಕಿ.ಮೀ ದೂರದ ಸಮುದ್ರದಲ್ಲಿ ನ.30ರ ರಾತ್ರಿ ಅಪಘಾತಕ್ಕೆ ಈಡಾಗಿ ಮುಳಗಡೆಯಾಗಿತ್ತು. ಅದರಲ್ಲಿದ್ದ 25 ಮೀನುಗಾರರ ಪೈಕಿ 6 ಮಂದಿ ಕಾಣೆಯಾಗಿದ್ದರು. ಅವರ ಪೈಕಿ ಐವರ ಮೃತ ದೇಹಗಳ ಪತ್ತೆಯಾಗಿವೆ. ಒಬ್ಬರಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss