Wednesday, August 10, 2022

Latest Posts

ಬ್ಯಾಲಹಳ್ಳಿ ಗೋವಿಂದಗೌಡರು ಬಿಟ್ಟು ಬೇರೆ ಯಾರೇ ಅಧ್ಯಕ್ಷರಾಗಿದ್ದರೂ ಡಿಸಿಸಿ ಬ್ಯಾಂಕ್ ಸುಧಾರಣೆಯಾಗುತ್ತಿರಲಿಲ್ಲ: ಶಾಸಕ ಕೆ.ಶ್ರೀನಿವಾಸಗೌಡ ವಿಶ್ವಾಸ

ಕೋಲಾರ: ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಇಂದು ಹೆಮ್ಮರವಾಗಿ ಬೆಳೆದಿದೆ, ಇದಕ್ಕೆ ಕಾರಣವಾದ ಗೋವಿಂದಗೌಡರು ಅಧ್ಯಕ್ಷರಾಗುವುದಕ್ಕೆ ಮೊದಲ ಬಾರಿ ನಾನೇ ವಿರೋಧ ವ್ಯಕ್ತಪಡಿಸಿದ್ದೆ ಎಂಬುದರ ಕುರಿತು ನನಗೆ ಪಶ್ಚಾತ್ತಾಪವಿದೆ ಎಂದು ಶಾಸಕ ಕೆ.ಶ್ರೀನಿವಾಸಗೌಡ ತಿಳಿಸಿದರು.
ಗುರುವಾರ ತಾಲ್ಲೂಕಿನ ವೇಮಗಲ್ ಎಸ್‌ಎಫ್‌ಸಿಎಸ್ ಆಶ್ರಯದಲ್ಲಿ ಡಿಸಿಸಿ ಬ್ಯಾಂಕಿನಿಂದ ಮಹಿಳಾ ಸಂಘಗಳಿಗೆ ೩.೫೬ ಕೋಟಿ ರೂ ಸಾಲದ ಚೆಕ್ ವಿತರಿಸಿ ಸೊಸೈಟಿ ಗಣಕೀಕರಣಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಗೋವಿಂದಗೌಡರು ಬಿಟ್ಟು ಬೇರೆ ಯಾರೇ ಅಧ್ಯಕ್ಷರಾಗಿದ್ದರೂ ಬ್ಯಾಂಕ್ ಸುಧಾರಣೆಯಾಗುತ್ತಿರಲಿಲ್ಲ, ನಾನು ವಿರೋಧಿಸಿದರೂ ಅದೃಷ್ಟವಶಾತ್ ಬ್ಯಾಲಹಳ್ಳಿ ಗೋವಿಂದಗೌಡರ ಅಧ್ಯಕ್ಷರಾಗಿದ್ದು, ಒಳ್ಳೆಯದಾಯಿತು, ಬ್ಯಾಂಕ್ ಚೇತರಿಕೆ ಕಂಡು ಜನರ ಪರ ಕೆಲಸ ಮಾಡುವಂತಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಡಿಸಿಸಿ ಬ್ಯಾಂಕ್ ಕಥೆ ಇಷ್ಟೆ ಮುಗಿಯಿತು ಎಂದೇ ಎಲ್ಲರೂ ಭಾವಿಸಿದ್ದೆ ಆದರೆ ಯಾರ ಆಲೋಚನೆಗೂ ನಿಲುಕದ ರೀತಿಯಲ್ಲಿ ಬ್ಯಾಂಕ್ ಮತ್ತೆ ಹೆಮ್ಮರವಾಗಿ ಬೆಳೆದು ನೂರಾರು ಕೋಟಿ ಸಾಲ ನೀಡುವ ಶಕ್ತಿ ಪಡೆದುಕೊಂಡಿದೆ ಎಂದರು.
ರೈತರು, ಮಹಿಳೆಯರ ಸ್ವಾವಲಂಬನೆಗೆ ನೆರವಾಗುವ ಶಕ್ತಿ ಪಡೆದುಕೊಂಡಿದೆ, ಇದಕ್ಕೆ ಕಾರಣರಾದ ಗೋವಿಂದಗೌಡರು ಮತ್ತವರ ಆಡಳಿತ ಮಂಡಳಿ ಅಭಿನಂದನಾರ್ಹರು ಎಂದರು.
ಬ್ಯಾಂಕ್ ಕೋಲಾರ,ಚಿಕ್ಕಬಳ್ಳಾಫುರ ಜಿಲ್ಲೆಗಳ ಪ್ರತಿ ಕುಟುಂಬಕ್ಕೂ ಸಾಲ ನೀಡುವ ಶಕ್ತಿ ಪಡೆದುಕೊಂಡು ರೈತರು,ಮಹಿಳೆಯರ ಜೀವನಾಡಿಯಾಗಲಿ ಎಂದು ಹಾರೈಸಿದ ಅವರು, ಸಮರ್ಪಕ ಸಾಲ ವಸೂಲಿ ಮೂಲಕ ದೇಶಕ್ಕೆ ಮೊದಲಾಗಲಿ ಎಂದು ತಿಳಿಸಿದರು.
ವೇಮಗಲ್‌ನಲ್ಲಿ ಬ್ಯಾಂಕ್ ಶಾಖೆ-ಚಿಂತನೆ
ಡಿಸಿಸಿ ಬ್ಯಾಂಕಿನ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ವೇಮಗಲ್‌ನಲ್ಲಿ ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸುವ ಚಿಂತನೆ ಇದೆ, ಪ್ರತಿಯೊಬ್ಬರೂ ಡಿಸಿಸಿ ಬ್ಯಾಂಕಿನಲ್ಲೇ ಠೇವಣಿ ಇಡಿ ಹೆಚ್ಚು ಬಡ್ಡಿ ಕೊಡುತ್ತೇವೆ, ಇದರಿಂದ ಮತ್ತಷ್ಟು ರೈತರು, ತಾಯಂದಿರಿಗೆ ಸಾಲ ನೀಡಲು ಸಹಕಾರಿಯಾಗುತ್ತದೆ ಎಂದರು.
ಬ್ಯಾಂಕ್ ಇದೀಗ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ, ಆದರೆ ಸರ್ಕಾರದ ನೀತಿಗಳಲ್ಲಿ ಬದಲಾವಣೆಯಾಗಿ ಬಡ್ಡಿಗೆ ಸಾಲ ನೀಡಬೇಕು ಎಂಬ ತೀರ್ಮಾನಗಳು ಚಾಲ್ತಿಗೆ ಬಂದರೂ ಹೇಳಲಿಕ್ಕಾಗದು ಎಂದು ತಿಳಿಸಿದರು.
ಬ್ಯಾಂಕ್ ದಿವಾಳಿಯಾಗಿದ್ದಾಗ ಯಾರೂ ಸರಿಪಡಿಲು ಮುಂದೆ ಬರಲಿಲ್ಲ, ಈಗ ಒಳ್ಳೆಯದಾಗಿರುವಾಗ ಎಲ್ಲರೂ ಆರೋಪ ಮಾಡುವವರೇ, ಇದಕ್ಕೆ ಕಿವಿ ಗೊಡಬಾರದು, ನಮ್ಮ ಆತ್ಮಸಾಕ್ಷಿಗೆ ಒಪ್ಪುವಂತೆ ಕೆಲಸ ಮಾಡಬೇಕು ಎಂದು ನಂಬಿದ್ದೇನೆ ಎಂದರು.
ಚುನಾವಣೆಗಳಲ್ಲಿ ೫೦೦-೧೦೦೦ಕ್ಕೆ  ಕೈಚಾಚಿ ಮತ ನೀಡುವ ಮೂಲಕ ಸ್ವಾಭಿಮಾನ ಕಳೆದುಕೊಳ್ಳಬಾರದು, ಬೈರೇಗೌಡರ ಗೌರವ ಉಳಿಸಬೇಕು, ಒಳ್ಳೆಯ ಕೆಲಸ ಮಾಡುವವರಿಗೆ ಮತ ನೀಡುವಂತಾಗಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ನಾಗನಾಳ ಸೋಮಣ್ಣ,  ಕೊರೊನಾ ವೈರಸ್ ಹಾವಳಿಯಿಂದ ಸಾಲ ವಿತರಣೆ ತಡವಾಗಿದೆ, ಈ ಭಾಗದಲ್ಲಿ ಹೆಚ್ಚು ಮಹಿಳಾ ಸಂಘಗಳು ಸಾಲ ಪಡೆದುಕೊಳ್ಳಲು ಮುಂದೆ ಬರಬೇಕು ಎಂದು ಸಲಹೆ ನೀಡಿದರು.
ಹಿಂದೆ ಸಕ್ರಿಯವಾಗಿ ಸಾಲ ಪಡೆದುಕೊಳ್ಳಲು ಬರುತ್ತಿರಲಿಲ್ಲ, ಕಡಗಟ್ಟೂರಿನಲ್ಲಿ ೨ ಕೋಟಿ ರೂಗಳ ಸಾಲವನ್ನು ಮಹಿಳೆಯರಿಗೆ ನೀಡಿದ್ದೆವೆ, ಒಳ್ಳೆಯ ಇತಿಹಾಸ ಇರುವ ವೇಮಗಲ್ ಸೊಸೈಟಿಯಿಂದ ಏಕೆ  ಸಾಲ ನೀಡಿಲ್ಲ ಎಂದು ನಾಯಕರು ಪ್ರಶ್ನಿಸಿದ್ದರು, ಗುರಿ ಸಾಧನೆಗೆ ನೀವು ಸಹಕಾರ ನೀಡಬೇಕು ಎಂದರು.
ಗ್ರಾಹಕರಿಗೆ ಪಾರದರ್ಶಕ ಆಡಳಿತ ನೀಡುವ ಉದ್ದೇಶದಿಂದ ಪ್ರತಿ ಸೋಸೈಟಿಯನ್ನು ಗಣಕೀಕರಣಗೊಳಿಸಲು ಕ್ರಮಕೈಗೊಂಡಿದ್ದು, ಪ್ರತಿಯೊಬ್ಬರು ಡಿಸಿಸಿ ಬ್ಯಾಂಕಿನಲ್ಲಿ ಹಣಕಾಸು ವಹಿವಾಟು ನಡೆಸಬೇಕು ಎಂದರು.
ನಿರ್ದೇಶಕ ಎಂ.ಎಲ್.ಅನಿಲ್ ಕುಮಾರ್ ಮಾತನಾಡಿ, ಇಡೀ ಪ್ರಪಂಚಾದ್ಯಂತ ಕೊರೊನ ಶಾಪವಾಗಿ ಅವರಿಸಿದೆ, ವೇಮಗಲ್‌ಅನ್ನು ಸುತ್ತ ಮುತ್ತಲಿನ ಸೋಸೈಟಿಗಳಿಗೆ ಹೋಲಿಕೆ ಮಾಡಿದರೆ ನಿರೀಕ್ಷಿತ ಮಟ್ಟದಲ್ಲಿ ಸಾಲ ವಿತರಣೆಯಾಗಿಲ್ಲ, ಅದಕ್ಕೆ ಸೋಸೈಟಿಯ ಹಿಂದಿನ ಆಡಳಿತ ಮಂಡಳಿ ಕಾರಣವಾಗಿದೆ, ಈಗಿನ ಆಡಳಿತ ಮಂಡಳಿ ಪ್ರಯತ್ನದಿಂದ ಸಾಲ ನೀಡಲಾಗುತ್ತಿದೆ ಎಂದರು.
ಡಿಸಿಸಿ ಬ್ಯಾಂಕಿನಲ್ಲಿ ರೈತರು, ಮಹಿಳೆಯರು ಸೇರಿದಂತೆ ವಿವಿಧ ಕ್ಷೇತ್ರದವರು ೨೮೦ ಕೋಟಿ ಠೇವಣಿ ಇಟ್ಟಿದ್ದಾರೆ, ಆದರೂ ಕೆಲ ವ್ಯಕ್ತಿಗಳು ಬ್ಯಾಂಕ್ ವಿರುದ್ಧ ಆರೋಪ ಮಾಡುವುದು, ದೂರು ನೀಡುವ ಕೆಲಸ ಮಾಡುತ್ತಿದ್ದಾರೆ, ಇದನ್ನು ಎದುರಿಸುವ ಶಕ್ತಿ ಆಡಳಿತ ಮಂಡಳಿಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಕೆ.ವಿ.ದಯನಂದ್, ಎಪಿಎಂಸಿ ಅಧ್ಯಕ್ಷ ಮಂಜುನಾಥ್, ನಿರ್ದೇಶಕ ಚಂದ್ರೇಗೌಡ, ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಮಂಜುನಾಥ್, ನಿರ್ದೇಶಕ ಚೆಂಜಿಮಲೆ ರಮೇಶ್, ವೇಮಗಲ್ ಎಸ್‌ಎಫ್‌ಸಿಎಸ್ ಅಧ್ಯಕ್ಷ ನಾಗೇಶ್,ನಿರ್ದೇಶಕರಾದ ಬೈರಾರೆಡ್ಡಿ, ವೀರಭದ್ರಪ್ಪ,ಓಬಣ್ಣ, ವೆಂಕಟರಾಮ್, ಶೈಲಜ ವೆಂಕಟೇಶ್,ಮಂಜುನಾಥ್, ಸೊಸೈಟಿ ಉಪಾಧ್ಯಕ್ಷ ರಾಮಸ್ವಾಮಿ, ನರಸಾಪುರ ಸೊಸೈಟಿ ಅಧ್ಯಕ್ಷ ಮುನಿರಾಜು, ಸಿಇಒ ಶಂಕರಪ್ಪ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss