ಮೈಸೂರು: ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರವನ್ನು ನೀಡುವಂತೆ ಕೇಂದ್ರ ಸರ್ಕಾರ ಕೂಡಲೇ ಆದೇಶ ಹೊರಡಿಸಬೇಕು ಎಂದು ಮಾಜಿ ಸಚಿವರೂ ಆದ ಶಾಸಕ ಎಸ್.ಎ.ರಾಮದಾಸ್ ಆಗ್ರಹಿಸಿದರು.
ಗುರುವಾರ ಮೈಸೂರಿನ ಜಿಲ್ಲಾ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಮೇಲ್ವರ್ಗದವರಿಗೆ ಶೇ ೧೦ರಷ್ಟು ಮೀಸಲಾತಿ ನೀಡಿರುವ ಹಿನ್ನಲೆಯಲ್ಲಿ ಸರ್ಕಾರದ ಮೀಸಲಾತಿ ಸೌಲಭ್ಯವನ್ನು ಪಡೆಯುವುದಕ್ಕೆ ಬ್ರಾಹ್ಮಣ ಸಮುದಾಯಕ್ಕೆ ಜಾತಿ ಪ್ರಮಾಣ ಪತ್ರದ ಅವಶ್ಯಕತೆಯಿದೆ. ಆದರೆ ಜಾತಿ ಪ್ರಮಾಣ ಪತ್ರ ನೀಡುವಲ್ಲಿ ತಹಸಿಲ್ದಾರ್ ಕಚೇರಿಯಲ್ಲಿ ಸಾಕಷ್ಟು ತೊಂದರೆಯಾಗುತ್ತಿದೆ. ಬ್ರಾಹ್ಮಣ ಜಾತಿಯ ಪ್ರಮಾಣ ಪತ್ರವನ್ನು ನೀಡದಿರುವುದು ನನ್ನ ಗಮನಕ್ಕೆ ಬರುತ್ತಿದೆ. ಹಾಗಾಗಿ ಕೂಡಲೇ ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರವನ್ನು ನೀಡಲು ಕ್ರಮ ಕೈಗೊಳ್ಳುವಂತೆ ರಾಜ್ಯದ ಎಲ್ಲಾ ತಹಸೀಲ್ದಾರ್ಗಳಿಗೆ ರಾಜ್ಯ ಸರ್ಕಾರ ಆದೇಶಿಸಬೇಕು ಎಂದು ಒತ್ತಾಯಿಸಿದರು.
ರಾಜ್ಯದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬ್ರಾಹ್ಮಣ ಸಮುದಾಯದ ಜನರಿದ್ದಾರೆ. ಈ ಸಮುದಾಯದ ಅಭಿವೃದ್ಧಿಗೆಂದು ರಾಜ್ಯ ಸರ್ಕಾರ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯನ್ನು ರಚನೆ ಮಾಡಿದೆಯಾದರೂ, ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗ ಕಲ್ಪಿಸಲು ಅಗತ್ಯವಾದ ಜಾತಿ ಪ್ರಮಾಣ ಪತ್ರ ನೀಡಲು ಅನೇಕ ತೊಂದರೆಯಾಗುತ್ತಿದೆ ಎಂದು ದೂರಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಕಂದಾಯ ಸಚಿವ ಆರ್.ಅಶೋಕ್ ಅವರು ಬ್ರಾಹ್ಮಣರಿಗೆ ಜಾತಿ ಪ್ರಮಾಣ ಪತ್ರ ನೀಡಲು ಆದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಕಾರ್ಯ ತ್ವರಿತವಾಗಬೇಕಾಗಿದೆ ಎಂದರು.
ಇಬ್ಬರು ಕಾರ್ಯಕರ್ತರಿಗೆ ರಾಜ್ಯಸಭೆ ಚುನಾವಣೆಗೆ ಟಿಕೆಟ್ ನೀಡಿರುವುದಕ್ಕೆ ಪ್ರತಿಕ್ರಿಯಿಸಿ,ಪಕ್ಷ ಕಟ್ಟಿದ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಿದ್ದು ಖುಷಿಯ ವಿಚಾರವಾಗಿದೆ. ಪಕ್ಷಕ್ಕಾಗಿ ದುಡಿದವರಿಗೆ ಹೈಕಮಾಂಡ್ ಸೂಕ್ತ ಸ್ಥಾನ ಮಾನ ನೀಡುತ್ತದೆ ಎಂಬುದು ಇದರಿಂದ ಎಲ್ಲರಿಗೂ ಗೊತ್ತಾಗಿದೆ. ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿಯೇ ಹೈಕಮಾಂಡ್ ಈ ತೀರ್ಮಾನವನ್ನು ತೆಗೆದುಕೊಂಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಸರ್ಕಾರ ಬರಲಿಕ್ಕೆ ಕಾರಣರಾದವರಿಗೆ ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್ ಕೊಟ್ಟ ಮಾತಿನಂತೆ ನಡೆದುಕೊಳ್ಳುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.