ಶಿವಮೊಗ್ಗ : ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖಪಾತ್ರ ವಹಿಸಿದ್ದ ಶಿಕಾರಿಪುರ ತಾಲೂಕು ಈಸೂರಿನ ಸ್ವಾತಂತ್ರ್ಯ ಹೋರಾಟಗಾರ ಹುಚ್ಚರಾಯಪ್ಪ ಅವರು ಇಂದು ಈಸೂರಿನ ತಮ್ಮ ಸ್ವಗೃಹದಲ್ಲಿ ವಿಧಿವಶರಾದವರು. ಅವರಿಗೆ 104 ವರ್ಷ ವಯಸ್ಸಾಗಿತ್ತು. 4ಜನ ಗಂಡು ಮಕ್ಕಳು, ಓರ್ವ ಮಗಳು, ಮೊಮ್ಮಕ್ಕಳನ್ನು ಅಗಲಿದ್ದಾರೆ.
ಕ್ವಿಟ್ ಇಂಡಿಯಾ ಚಳುವಳಿಯಲ್ಲಿ ಭಾಗವಹಿಸಿದ್ದ ಎನ್.ಎಸ್.ಹುಚ್ಚರಾಯಪ್ಪ ಅವರಿಗೆ ಅಂದಿನ ಬ್ರಿಟೀಷ್ ಸರ್ಕಾರ ಮರಣದಂಡಣೆ ಘೋಷಿಸಿತ್ತು. ಹುಚ್ಚರಾಯಪ್ಪ ಅವರು ಅಪ್ರಾಪ್ತ ವಯಸ್ಕರಾಗಿದ್ದರಿಂದಾಗಿ ಸರ್ಕಾರವು ಘೋಷಿಸಿದ್ದ ಮರಣದಂಡನೆಯನ್ನು ಬದಲಿಸಿ ಜೀವಾವಧಿ ಶಿಕ್ಷೆಯನ್ನು ವಿಧಿಸಿತು.
ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಈಸೂರಿನಲ್ಲಿ ಅನೇಕ ವಿಶೇಷ ಮತ್ತು ಗಂಭೀರ ಎನಿಸುವಂತಹ ಘಟನೆಗಳು ನಡೆದು ಚರಿತ್ರಾರ್ಹ ಎನಿಸಿದವು. ಚಳುವಳಿಗಳು ನಿರಂತರವಾಗಿದ್ದವು. ವಿದ್ಯಾರ್ಥಿಗಳು, ಯುವ ಸಮುದಾಯ, ಸತ್ಯಾಗ್ರಹಿಗಳು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಬೀದಿಗಿಳಿದು ಹೋರಾಟ ನಡೆಸಿದರು. ಇನ್ನೂ ಕೆಲವರು ಭೂಗತರಾಗಿ ಚಳುವಳಿಗೆ ಜೀವತುಂಬಲು ಕಲ್ಲಚ್ಚಿನಿಂದ ಪತ್ರಿಕೆಗಳನ್ನು ಮುದ್ರಿಸಿ ವಿತರಿಸಿದರು.
ಕಂದಾಯ ವಸೂಲಿ ವಿರುದ್ಧ ಪ್ರತಿಭಟನೆ ನಡೆಸಿ, ಸ್ವತಂತ್ರ ಗ್ರಾಮ ಎಂದು ಘೋಷಿಸಿಕೊಂಡ ದೇಶದ ಏಕೈಕ ಗ್ರಾಮ ಈಸೂರು. ಈಸೂರಿನ ಗ್ರಾಮಸ್ಥರು ತಮ್ಮದೇ ಆದ ಸರ್ಕಾರವನ್ನು ರಚಿಸಿಕೊಂಡು ಆಡಳಿತ ನಡೆಸಲು ಹೋರಾಟ ನಡೆಸಿದವರಲ್ಲಿ ಪ್ರಮುಖಪಾತ್ರ ವಹಿಸಿದ್ದ ಅನೇಕರಲ್ಲಿ ಹುಚ್ಚರಾಯಪ್ಪ ಅವರೂ ಒಬ್ಬರು.
ಇವರಿಗೆ ಪ್ರಧಾನಿಯಾಗಿದ್ದ ಇಂದಿರಾ ಗಾಂಧಿ ತಾಮ್ರಪತ್ರ ನೀಡಿ ಸನ್ಮಾನಿಸಿದ್ದರು.