ಹೊಸದಿಗಂತ ವರದಿ, ಮಡಿಕೇರಿ:
ಪುಣ್ಯಕ್ಷೇತ್ರ ತಲಕಾವೇರಿಯಲ್ಲಿ ಅಸಂಖ್ಯಾತ ಭಕ್ತರು ಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿ ತೀರ್ಥ ಪಡೆದು ಪುನೀತರಾಗುತ್ತಿದ್ದಾರೆ. ಭಾಗಮಂಡಲದ ತ್ರಿವೇಣಿ ಸಂಗಮ ಹಾಗೂ ಶ್ರೀ ಭಗಂಡೇಶ್ವರ ದೇವಾಲಯಕ್ಕೂ ಭೇಟಿ ನೀಡುತ್ತಿದ್ದಾರೆ.
ಸಾಲು ಸಾಲು ರಜೆಯ ಕಾರಣದಿಂದ ಸಾವಿರಾರು ಪ್ರವಾಸಿಗರ ಆಗಮನವಾಗಿ ವಾಹನ ದಟ್ಟಣೆ ಉಂಟಾಯಿತಲ್ಲದೆ, ವಾಹನಗಳ ನಿಲುಗಡೆಗೂ ಅನಾನುಕೂಲ ಎದುರಾಯಿತು. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸದೆ ನಿರ್ಲಕ್ಷ್ಯ ವಹಿಸಿದ ದೃಶ್ಯವೂ ಕಂಡು ಬಂದಿತು.
ಪ್ರವಾಸಿಗರು ಹಾಗೂ ವಾಹನಗಳನ್ನು ನಿಯಂತ್ರಿಸಲು ಪೊಲೀಸರು ಪರದಾಡುವ ಪರಿಸ್ಥಿತಿ ನಿರ್ಮಾಣವಾಯಿತು. ಪ್ರಸ್ತುತ ವರ್ಷ ಮಹಾಮಳೆಗೆ ಗಜಗಿರಿ ಬೆಟ್ಟ ಕುಸಿದ ಪ್ರದೇಶವನ್ನು ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದರು. ಹಿಂದೆಂದೂ ಕಾಣದಷ್ಟು ಸಂಖ್ಯೆಯ ಪ್ರವಾಸಿಗರು ಈ ಬಾರಿ ಆಗಮಿಸಿದ್ದಾರೆ ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.
ಈಗ ಯಾಕೆ ನಿರ್ಬಂಧವಿಲ್ಲ: ದಕ್ಷಿಣ ಗಂಗೆ ಕಾವೇರಿಯನ್ನು ಕೊಡಗಿನ ಜನ ಕುಲದೇವಿ ಎಂದು ಶ್ರದ್ಧಾಭಕ್ತಿಯಿಂದ ಪೂಜಿಸುತ್ತಾರೆ. ವರ್ಷಕ್ಕೆ ಒಂದು ಬಾರಿ ಅಕ್ಟೋಬರ್ ತಿಂಗಳಿನಲ್ಲಿ ತಾಯಿ ಕಾವೇರಿ ತೀರ್ಥರೂಪಿಣಿಯಾಗಿ ದರ್ಶನ ನೀಡುತ್ತಾಳೆ. ಅಂದು ಈ ಅಪರೂಪದ ಕ್ಷಣವನ್ನು ಕಣ್ತುಂಬಿಕೊಳ್ಳಲು ತಲಕಾವೇರಿ ಕ್ಷೇತ್ರಕ್ಕೆ ಆಗಮಿಸಿದ ಮೂಲ ನಿವಾಸಿ ಭಕ್ತರನ್ನು ಜಿಲ್ಲಾಡಳಿತ ಕೋವಿಡ್ ಕಾರಣ ನೀಡಿ ತಡೆಯುವ ಯತ್ನ ಮಾಡಿತು. ಆದರೆ ಇಂದು ದೇಶದ ವಿವಿಧ ಭಾಗಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದಾರೆ. ಅಂದು ಭಕ್ತರನ್ನು ತಡೆದ ಜಿಲ್ಲಾಡಳಿತ ಇಂದು ಇವರನ್ನು ಯಾಕೆ ತಡೆಯುತ್ತಿಲ್ಲ, ಇವರಿಂದ ಕೋವಿಡ್ ಆತಂಕ ಎದುರಾಗುವುದಿಲ್ಲವೇ ? ಎಂದು ಕೊಡವ ಮಕ್ಕಡ ಕೂಟದ ಅಧ್ಯಕ್ಷ ಬೊಳ್ಳಜಿರ ಬಿ.ಅಯ್ಯಪ್ಪ ಪ್ರಶ್ನಿಸಿದ್ದಾರೆ.
ಜಿಲ್ಲಾಡಳಿತ ತನ್ನ ಅನೂಕೂಲಕ್ಕೆ ತಕ್ಕಂತೆ ನಿರ್ಬಂಧಗಳನ್ನು ಸಡಿಲಿಸುತ್ತಿದ್ದು, ಮೂಲ ನಿವಾಸಿಗಳ ಧಾರ್ಮಿಕ ಭಾವನೆಗಳನ್ನು ಅರ್ಥ ಮಾಡಿಕೊಳ್ಳುತ್ತಿಲ್ಲವೆಂದು ಅವರು ಆರೋಪಿಸಿದ್ದಾರೆ.
ಪ್ರವಾಸಿಗರಿಂದ ಪುಣ್ಯಕ್ಷೇತ್ರ ತಲಕಾವೇರಿಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಎಚ್ಚರ ವಹಿಸಬೇಕೆಂದು ವಿವಿಧ ಸಂಘ, ಸಂಸ್ಥೆಗಳು ಕೂಡ ಜಿಲ್ಲಾಡಳಿತವನ್ನು ಒತ್ತಾಯಿಸಿವೆ.