Wednesday, July 6, 2022

Latest Posts

ಭಟ್ಕಳದಲ್ಲಿನ ಕೊರೋನಾ ಪ್ರಕರಣಗಳ ನಿರಂತರ ಸ್ಪೋಟ| ತಲೆಬೇನೆ ತಂದನೇ ರಿಕ್ಷಾವಾಲಾ?

ಕಾರವಾರ: ಭಟ್ಕಳದಲ್ಲಿನ ಕೊರೋನಾ ಪ್ರಕರಣಗಳ ಸ್ಪೋಟ ನಿರಂತರ ಮುಂದುವರೆದಿದ್ದರೂ ಕೊರೋನಾ ಪೀಡಿತ ರಿಕ್ಷಾವಾಲಾ ಈಗ ಇಡೀ ಭಟ್ಕಳದಲ್ಲಿ ಇನ್ನಿಲ್ಲದ ತಲ್ಲಣಕ್ಕೆ ಕಾರಣನಾಗಿದ್ದಾನೆ.
ಈತ ಎರಡನೇ ಹಂತದಲ್ಲಿ ಸೋಂಕು ದೃಡಪಟ್ಟಿರುವ ಮೊದಲ ಮಹಿಳೆಯಿಂದ ಈ ಸೋಂಕು ಹಚ್ಚಿಕೊಂಡವನಾಗಿದ್ದಾನೆ. ಈತನ ಮನೆ ಸೋಂಕಿತೆಯ ಮನೆಯ ಪಕ್ಕದಲ್ಲೇ ಇದೆ. ಸೋಂಕಿತೆಗೆ ಜ್ವರ ಕಾಣಿಸಿಕೊಂಡಾಗ ಈ ರಿಕ್ಷಾ ಚಾಲಕ ಈಕೆಯನ್ನು ಆಸ್ಪತ್ರೆಗೆ ಕರೆದೊಯ್ದು ಮರಳಿ ಮನೆಗೆ ತಂದು ಬಿಟ್ಟಿದ್ದ. ಹೀಗಾಗಿ ಸೋಂಕು ಪೀಡಿತೆಯಿಂದ ಮಾಹಿತಿ ಪಡೆದು ಈತನ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿತ್ತು. ಇದೀಗ ಪಾಸಿಟಿವ್ ಬಂದಿದೆ. ಈತನ ಪತ್ನಿ, ಮೂವರು ಮಕ್ಕಳನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆಯಾದರೂ, ಈ ಚಾಲಕನ ಸಂಚಾರ ಮತ್ತು ಸಂಪರ್ಕ ವಿವರ ಜಿಲ್ಲಾಡಳಿತದ ತಲೆ ಬೇನೆ ಹೆಚ್ಚಿಸಿದೆ.
ರಿಕ್ಷಾ ಚಾಲಕನಾಗಿರುವ ಹಿನ್ನೆಲೆಯಲ್ಲಿ ಲಾಕ್ ಡೌನ್ ಸಂಪೂರ್ಣ ಆಗುವ ಮುನ್ನ ಸಾಕಷ್ಟು ಕಡೆ ಬಾಡಿಗೆಗೆ ಹೋಗಿದ್ದಾನೆ. ಹಲವರು ಈತನ ಸಂಪರ್ಕಕ್ಕೆ ಬಂದಿರುವ ಸಾಧ್ಯತೆ ಇಲ್ಲದಿಲ್ಲ. ಮೊದಲ ಸೋಂಕಿತ ಮಹಿಳೆಯಲ್ಲಿ ಸೋಂಕು ದೃಢಪಟ್ಟ ನಂತರದ 4-5 ದಿನ ಈ ಚಾಲಕ ಎಲ್ಲೆಲ್ಲಿ ಓಡಾಡಿದ್ದ ಎನ್ನುವುದು ಪತ್ತೆಹಚ್ಚಬೇಕಾದ ಅನಿವಾರ್ಯತೆಯಲ್ಲಿ ಜಿಲ್ಲಾಡಳಿತ ಇದೆ.
ಹೀಗಾಗಿ ರಿಕ್ಷಾ ವಾಲಾನೇ ಭಟ್ಕಳಕ್ಕೆ ಇನ್ನಷ್ಟು ಪ್ರಕರಣಗಳನ್ನು ಹೊತ್ತು ತಂದರೆ ಅಚ್ಚರಿಯಿಲ್ಲ ಎನ್ನುವ ಮಾತು ಕೇಳಿ ಬಂದಿದೆ. ಈಗಾಗಲೇ ಕೆಲವಷ್ಟು ಜನರ ಗಂಟಲ ದ್ರವವನ್ನು ಪರೀಕ್ಷೆಗೆ ಕಳಿಸಲಾಗಿದ್ದು, ಇದರ ವರದಿ ಸೋಮವಾರಬರಲಿದೆ. ಈ ವರದಿಯತ್ತಲೇ ಈಗ ಎಲ್ಲರ ಲಕ್ಷ್ಯನೆಟ್ಟಿದೆ. ಈಗ ಸೀಲ್ ಡೌನ್ ಏರಿಯಾದಲ್ಲೇ ಸ್ಪೋಟಗೊಳ್ಳುತ್ತಿರುವ ಕೊರೋನಾವನ್ನು ಈ ರಿಕ್ಷಾವಾಲಾ ಇನ್ನಿತರ ಏರಿಯಾಗಳಿಗೆ ಹಬ್ಬಿಸಿದ್ದಾರೆಯೇ ಎನ್ನುವುದಕ್ಕೆ 2-3 ದಿನದಲ್ಲಿ ಉತ್ತರ ಸಿಗಲಿದೆ. ಜಿಲ್ಲಾಡಳಿತ ಈಗ ಮತ್ತೊಮ್ಮೆ ಭಟ್ಕಳ ನಗರವಾಸಿಗಳ ಆರೋಗ್ಯ ಸಮೀಕ್ಷೆಗೆ ಮುಂದಾಗಿದ್ದು, ಇದು ಸಹ ಈ ಸಾಧ್ಯತೆಯ ಮೇಲೆ ಬೆಳಕು ಚೆಲ್ಲಲಿದೆ.
ಸಂಪೂರ್ಣ ಸೀಲ್ ಆಗುತ್ತಾ ?
ಈಗಾಗಲೇ ಭಟ್ಕಳದಲ್ಲಿ ದಾಖಲಾಗಿರುವ ಸಕ್ರೀಯ ಪ್ರಕರಣಗಳು 28 ಕ್ಕೆ ಏರಿಕೆಯಾಗಿದ್ದು, ಮೊದಲ ಹಂತದ ಗುಣಮುಖರಾದ 11 ಪ್ರಕರಣಗಳು ಸೇರಿ ಭಟ್ಕಳದ ಕೊರೋನಾ ಪೀಡಿತರ ಸಂಖ್ಯೆ 39 ಕ್ಕೆ ಏರಿದೆ. ಈಗಾಗಲೇ ಭಟ್ಕಳದ ಮದಿನಾ ಕಾಲೊನಿ ಸೇರಿ ವಿವಿಧ ಏರಿಯಾಗಳು ಸೀಲ್ ಡೌನ್ ಆಗಿದ್ದು, ಈಗ ಸರಣಿಯಾಗಿ ಬರುತ್ತಿರುವ ಪ್ರಕರಣಗಳ ಕಾರಣದಿಂದ ಇಡೀ ಭಟ್ಕಳ ನಗರವನ್ನು ಸೀಲ್ ಡೌನ್ ಮಾಡಬೇಕೆಂಬ ಬಲವಾದ ಆಗ್ರಹ ವ್ಯಕ್ತವಾಗಿದೆ. ಶಾಸಕ ಸುನೀಲ ನಾಯ್ಕ ಸಹ ಇದಕ್ಕೆ ದನಿಗೂಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss