ಭಟ್ಕಳ: ಭಟ್ಕಳ ಪಟ್ಟಣದಲ್ಲಿ ತಾಲೂಕು ಆಡಳಿತದ ಗಮನಕ್ಕೆ ತರದೇ ಶವಸಂಸ್ಕಾರ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ತಕ್ಷಣ ಎಲ್ಲ ಎಲ್ಲಾ ಖಬರಸ್ತಾನ್ ಮತ್ತು ರುದ್ರಭೂಮಿಯ ಹೊರಗೆ ಪೊಲೀಸ್ ಬಂದೋಬಸ್ತ್ ಮಾಡುವಂತೆ ಸಾಂಸದ ಅನಂತಕುಮಾರ್ ಹೆಗಡೆ ಸೂಚನೆ ನೀಡಿದ್ದಾರೆ.
ಬುಧವಾರ ಅಧಿಕಾರಿಗಳ ಸಭೆ ನಡೆಸಿ ಇಲ್ಲಿನ ಪರಿಸ್ಥಿತಿಯ ಬಗ್ಗೆ ಮಾಹಿತಿ ಪಡೆದುಕೊಂಡು ಅಗತ್ಯ ಸೂಚನೆ ನೀಡಿದರು.
ನಗರದಲ್ಲಿ ಕೆಲವು ಸಾವು ಉಂಟಾಗಿದ್ದು ಶವವನ್ನು ತಾಲೂಕಾಡಳಿತದ ಗಮನಕ್ಕೆ ತರದೇ ಸಂಸ್ಕಾರ ಮಾಡಿದ್ದು ತಿಳಿದುಬಂದಿದೆ. ಇನ್ನು ಮುಂದೆ ಇದಕ್ಕೆ ಆಸ್ಪದ ನೀಡಲೇಬಾರದು ಎಂದರು.
ಕ್ವಾರಂಟೈನ್ ಮಾಡಿ
ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಬಂದವರು ತಾಲೂಕಾಡಳಿತದ ಗಮನಕ್ಕೆ ತಂದು ಹೋಮ್ ಕ್ವಾರಂಟೈನ್ನಲ್ಲಿ ಇರಬೇಕು. ಇದಕ್ಕೆ ಸಹಕರಿಸದಿದ್ದರೆ ಅವರನ್ನು ನಿರ್ದಾಕ್ಷಿಣ್ಯವಾಗಿ ಅವರದೇ ಖರ್ಚಿನಲ್ಲಿ ಕ್ವಾರಂಟೈನ್ ಮಾಡುವಂತೆ ಅವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು. ಕೊರೊನಾ ಸೋಂಕು ತಗುಲಿದ ೧೧ ಜನರು ಗುಣಮುಖರಾಗಿದ್ದರು. ಆದರೆ ಪುನ: ಓರ್ವ ಯುವತಿಗೆ ಸೋಂಕು ದೃಢಪಟ್ಟಿದ್ದು, ಸೋಂಕು ತಡೆಗಾಗಿ ಹೆಲ್ತ್ ಎಮರ್ಜೆನ್ಸಿ ಘೋಷಣೆ ಮಾಡಲಾಗಿದ್ದು ಎಲ್ಲರೂ ಮನೆಯಲ್ಲಿದ್ದು ಸಹಕರಿಸಬೇಕು. ಅಲ್ಲದೇ ಯಾರೂ ಮನೆಯಿಂದ ಹೊರಗೆ ಬರದಂತೆ ಕೆಎಸ್ಆರ್ಪಿ ಯಿಂದ ಬಿಗು ಬಂದೋಬಸ್ತ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ ಮೂಲಕ ಮಾಹಿತಿ ಪಡೆದುಕೊಂಡರು. ಶಾಸಕ ಸುನೀಲ್ ನಾಯ್ಕ, ಉಪವಿಭಾಗಾಧಿಕಾರಿ ಗೌತಮ್ ಕೆ. ಸಿ, ತಹಶೀಲ್ದಾರ್ ರವಿಚಂದ್ರ, ಕಾರ್ಯನಿರ್ವಾಹಕ ಅಧಿಕಾರಿ ಪ್ರಭಾಕರ ಚಿಕ್ಕನಮನೆ ಇದ್ದರು