ಹೊಸ ದಿಗಂತ ವರದಿ, ಮಂಗಳೂರು:
ನಗರದಲ್ಲಿ ಉಗ್ರರನ್ನು ಬೆಂಬಲಿಸುವ ಗೋಡೆ ಬರಹ ಬರೆದ ಎರಡೂ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಿ ನೇರವಾಗಿ ಬೇರೆ ದೇಶಕ್ಕೆ ಬಿಟ್ಟು ಬರಬೇಕು ಎಂದು ಶಾಸಕ ಯು.ಟಿ. ಖಾದರ್ ಆಗ್ರಹಿಸಿದರು.
ಭಯೋತ್ಪಾದಕರನ್ನು ಬೆಂಬಲಿಸಿ ಸಮಾಜದ್ರೋಹಿ ಗೋಡೆ ಬರಹ ಬರೆದಿರುವುದನ್ನು ಸಹಿಸಲಾಗದು. ಇನ್ನೊಂದು ವಾರದೊಳಗೆ ಎರಡೂ ಪ್ರಕರಣಗಳ ಆರೋಪಿಗಳನ್ನು ಪತ್ತೆಹಚ್ಚಬೇಕು. 15 ದಿನಗಳ ಬಳಿಕವೂ ಆರೋಪಿಗಳನ್ನು ಬಂಧಿಸಲು ಸಾಧ್ಯವಾಗದಿದ್ದರೆ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.
ಪ್ರಕರಣದ ಹಿಂದೆ ಯಾರಿದ್ದಾರೆ, ಉದ್ದೇಶವೇನು ಎನ್ನುವುದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಬಿಜೆಪಿ ಸರಕಾರ ಮತ್ತು ಪೊಲೀಸ್ ಇಲಾಖೆ ಮೇಲಿದೆ. ನಗರದ ಕೇಂದ್ರ ಭಾಗದಲ್ಲೇ ಇಂತಹ ಬರಹ ಬರೆಯಬೇಕಾದರೆ ಎಷ್ಟು ಧೈರ್ಯ ಬೇಕು, ಇವರಿಗೆ ಬೆಂಬಲ ನೀಡುತ್ತಿರುವವರನ್ನು ಪತ್ತೆಹಚ್ಚಿ ಷಡ್ಯಂತ್ರ ಬಯಲು ಮಾಡಬೇಕಾಗಿದೆ. ಏರ್ಪೋರ್ಟ್ಗೆ ಬಾಂಬ್, ಗೋಲಿಬಾರ್ ಪ್ರಕರಣಗಳಿನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಈಗ ನಡೆದಿರುವ ಪ್ರಕರಣ ಈ ರೀತಿ ಆಗಬಾರದು ಎಂದರು.
ಇಂತಹ ಸಮಾಜದ್ರೋಹಿ ಗೋಡೆ ಬರಹ ಕಾಂಗ್ರೆಸ್ ಸರಕಾರ ಇದ್ದಾಗ ಇರಲಿಲ್ಲ. ಬಿಜೆಪಿ ಸರಕಾರವಿದ್ದಾಗ ಮಾತ್ರ ದೇಶದ್ರೋಹಿಗಳಿಗೆ ಹೇಗೆ ಧೈರ್ಯ ಬರುತ್ತದೆ ಎಂಬುದಕ್ಕೆ ಜಿಲ್ಲೆಯ ಸಂಸದ, ಶಾಸಕರು ಉತ್ತರ ಕೊಡಲಿ. ಗೋಡೆ ಬರಹಕ್ಕೆ ಮಂಗಳೂರನ್ನೇ ಏಕೆ ಆಯ್ಕೆ ಮಾಡಿದರು, ಇದಕ್ಕೆ ಯಾರು ಜವಾಬ್ದಾರಿ ಎಂದು ಖಾದರ್ ಪ್ರಶ್ನಿಸಿದರು.
ಈ ಎರಡೂ ಕೃತ್ಯಗಳನ್ನು ಎಸಗುವಾಗ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು? ಆರೋಪಿಗಳು ಮಾನಸಿಕ ಅಸ್ವಸ್ಥರಾಗಿರಲಿ, ಇಲ್ಲದಿರಲಿ. ಯಾರೇ ಆದರೂ ಮೊದಲು ಬಂಧಿಸಿ ಎಂದು ಆಗ್ರಹಿಸಿದರು.
ಬಿಜೆಪಿ ಸರಕಾರ ಬಂದಾಗಿನಿಂದ ರೌಡಿಗಳು ಹೆದರದ ಸ್ಥಿತಿ ನಿರ್ಮಾಣವಾಗಿದೆ. ಸರಣಿ ಕೊಲೆಗಳು, ತಲವಾರು ದಾಳಿಗಳು ನಡೆಯುತ್ತಿವೆ. ಭಯವೇ ಇಲ್ಲದಾಗಿದೆ. ಜಿಲ್ಲೆಯ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದ್ದು, ಜಂಗಲ್ರಾಜ್ ನಿರ್ಮಾಣವಾಗಿದೆ ಎಂದರು.
ಕಾಂಗ್ರೆಸ್ ಮುಖಂಡರಾದ ಮಹಮ್ಮದ್ ಮೋನು, ಪ್ರತಿಭಾ ಕುಳಾಯಿ, ಈಶ್ವರ್ ಉಳ್ಳಾಲ್ ಮತ್ತಿತರರು ಉಪಸ್ಥಿತರಿದ್ದರು.