ಹೊಸ ದಿಗಂತ ಆನ್ ಲೈನ್ ಡೆಸ್ಕ್:
ವಿಯೆನ್ನಾದಲ್ಲಿ ತಿಂಗಳ ಆರಂಭದಲ್ಲಿ ಉಂಟಾದ ಇಸ್ಲಾಮಿಕ್ ಉಗ್ರಗಾಮಿಗಳ ಮಾರಣಾಂತಿಕ ಭಯೋತ್ಪಾದಕ ದಾಳಿಯಿಂದ ಎಚ್ಚೆತ್ತ ಚಾನ್ಸೆಲರ್ ಸೆಬಾಸ್ಟಿಯನ್ ಕುರ್ಜ್ ನೇತೃತ್ವದ ಆಸ್ಟ್ರಿಯನ್ ಕ್ಯಾಬಿನೆಟ್, ಉಗ್ರವಾದ ದಮನವನ್ನು ಮಾಡಲು ವಿಸ್ತಾರವಾದ ಭಯೋತ್ಪಾದನಾ ವಿರೋಧಿ ಕ್ರಮಗಳನ್ನು ಜಾರಿಗೆ ತರಲು ಸಿದ್ಧವಾಗಿದೆ.
ಆಸ್ಟ್ರಿಯನ್ ಕ್ಯಾಬಿನೆಟ್ , ಭಯೋತ್ಪಾದನೆ ಆರೋಪದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳಿಗೆ ಜೀವಾವಧಿ ಶಿಕ್ಷೆ, ಧರ್ಮದ ಹೆಸರಿನಲ್ಲಿ ನಡೆಯುವ ರಾಜಕೀಯ ಉಗ್ರವಾದ ಅಪರಾಧ ವ್ಯಾಪ್ತಿಗೆ, ಭಯೋತ್ಪಾದನೆ ಆಪಾದನೆಗೆ ಗುರಿಯಾಗಿ ಬಿಡುಗಡೆಯಾದ ಬಳಿಕ ಅವರ ಮೇಲೆ ಎಲೆಕ್ಟ್ರಾನಿಕ್ ಕಣ್ಗಾವಲು, ಭಯೋತ್ಪಾದನೆ ಆರೋಪದಲ್ಲಿ ತಪ್ಪಿತಸ್ಥರೆಂದು ಕಂಡುಬಂದ ಪ್ರಜೆಗಳ ಆಸ್ಟ್ರಿಯನ್ ಪೌರತ್ವ ರದ್ದುಪಡಿಸುವುದು ಇಂತಹ ಕಾನೂನು ಕ್ರಮಗಳನ್ನು ಚಿಂತನೆ ನಡೆಸುತ್ತಿದೆ.
ಭಯೋತ್ಪಾದಕ ಶಂಕಿತರನ್ನು ಮತ್ತು ಉಗ್ರವಾದದ ಸಿದ್ಧಾಂತ ಹೊಂದಿದ್ದವರನ್ನು ಗುರಿಯಾಗಿಸಿಕೊಂಡು, ಚಾನ್ಸೆಲರ್ ಕುರ್ಝ್ ಅವರು ಮುಂದಿನ ತಿಂಗಳು ಈ ಕುರಿತ ಮತದಾನದ ಪ್ರಸ್ತಾವನೆಯನ್ನು ಸಂಸತ್ತಿನ ಮುಂದೆ ತರಲಿದ್ದಾರೆ.
ಈ ತಿಂಗಳ ಆರಂಭದಲ್ಲಿ ಐಸಿಸ್ ನಡೆಸಿದ ಭಯೋತ್ಪಾದಕ ದಾಳಿಗೆ ನಾಲ್ಕು ಜನರು ಸಾವನ್ನಪ್ಪಿ, 20 ಮಂದಿ ಗಾಯಗೊಂಡರು.ದಾಳಿಕೋರನನ್ನು ಆಸ್ಟ್ರಿಯಾ ಮತ್ತು ಉತ್ತರ ಮ್ಯಾಸಿಡೋನಿಯಾದ 20 ವರ್ಷದ ಕುಜ್ತಿಮ್ ಫೆಜ್ಜುಲೈ ಎಂದು ಆಸ್ಟ್ರೇಲಿಯಾದ ಅಧಿಕಾರಿಗಳು ಪತ್ತೆಹಚ್ಚಿದ್ದಾರೆ.
ನಾವು ಭಯೋತ್ಪಾದಕರಲ್ಲದವರ ವಿರುದ್ಧ ಕ್ರಮಕೈಗೊಳ್ಳಲು ಸಾಧ್ಯವಾಗುವಂತೆ ‘ರಾಜಕೀಯ ಇಸ್ಲಾಂ’ ಎಂಬ ಕ್ರಿಮಿನಲ್ ಅಪರಾಧವನ್ನು ರಚಿಸುತ್ತೇವೆ ಎಂದು ಛಾನ್ಸಲರ್ ಕುರ್ಝ್ ಕ್ಯಾಬಿನೆಟ್ ಸಭೆ ಬಳಿಕ ಟ್ವೀಟ್ ಮಾಡಿದ್ದಾರೆ.