ಉಡುಪಿ: ವಾರಾಂತ್ಯದಲ್ಲಿ ಜನರ ಓಡಾಟವನ್ನು ನಿಯಂತ್ರಿಸಲು ಮತ್ತು ನೋವೆಲ್ ಕೊರೋನಾ ವೈರಸ್ ಸೋಂಕು ನಿರ್ಲಕ್ಷಿಸುವುದನ್ನು ತಡೆಯುವ ಸಲವಾಗಿ ಘೋಷಿಸಿದ್ದ ಭಾನುವಾರದ ಕರ್ಫ್ಯೂಗೆ ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮೊದಲು ಕರ್ಫ್ಯೂ ವೇಳೆ ಹಾಲು, ಪತ್ರಿಕೆ, ಔಷಧಿ ಸೇವೆಗಳು ಮಾತ್ರ ಅಭಾದಿತವಾಗಿ ನಡೆಯುತ್ತವೆ ಎಂದು ಜಿಲ್ಲಾಧಿಕಾರಿ ಅವರು ಹೇಳಿದ್ದರು. ನಂತರ ಉಡುಪಿ ಜಿಲ್ಲೆಯಲ್ಲಿ ಭಾನುವಾರವೇ ರಮದಾನ್ ಹಬ್ಬವಾದ್ದರಿಂದ ನಿರ್ಬಂಧವನ್ನು ಇನ್ನಷ್ಟು ಸಡಿಲಿಲಿ ದಿನಸಿ, ಮೀನು-ಮಾಂಸ ಮಾರಾಟ, ಹೊಟೇಲ್ ಪಾರ್ಸೆಲ್ಗಳಿಗೂ ಅನುಮತಿ ನೀಡಿದ್ದರು.
ಆದರೂ ಜನರು ಮಾತ್ರ ಈ ಸಡಿಲಿಕೆ ತಮಗೆ ಬೇಡವೆನ್ನುವಂತೆ ಎಲ್ಲರೂ ಮನೆಯಲ್ಲಿಯೇ ಉಳಿದುಕೊಂಡರು. ಜನರ ಓಡಾಟ ನಿರೀಕ್ಷೆಗಿಂತಲೂ ಕಡಿಮೆ ಇತ್ತು, ನಗರ – ಪೇಟೆ ಪ್ರದೇಶಗಳಂತೂ ಸಂಪೂರ್ಣವಾಗಿ ರಜೆ ಘೋಷಿಸಿದಂತಿತ್ತು. ಅನುಮತಿ ಇದ್ದರೂ ಅಂಗಡಿ- ಹೊಟೇಲ್ಗಳು ವ್ಯವಹಾರ ನಡೆಸಲಿಲ್ಲ.
ಉಡುಪಿಯಲ್ಲಿ ದಿನವಹಿ ಮಾರುಕಟ್ಟೆ ಸಂಪೂರ್ಣ ಬಂದ್ ಆಗಿತ್ತು. ಬೆರಳೆಣಿಕೆಯ ಅಂಗಡಿ ಮತ್ತು ಹೊಟೇಲ್ಗಳು ಮಾತ್ರ ತೆರೆದುಕೊಂಡಿದ್ದವು. ಐದಾರು ಮೆಡಿಕಲ್ ಶಾಪ್ಗಳು ಮಾತ್ರ ಮಧ್ಯಾಹ್ನದ ವರೆಗೆ ತೆರೆದಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ಮೂರನೇ ಹಂತದ ಲಾಕ್ಡೌನ್ಗಿಂತಲೂ ಕಡಿಮೆ ಇತ್ತು. ಇದರಿಂದ ಪೊಲೀಸರಿಗೂ ಹೆಚ್ಚಿನ ಒತ್ತಡ ಇರಲಿಲ್ಲ.
ಭಾನುವಾರ ರಮದಾನ್ ಹಬ್ಬವಾಗಿದ್ದರೂ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆಯ ಅವಕಾಶ ಇಲ್ಲದಿದರಿಂದ ಮನೆಯಲ್ಲಿ ನಮಾಜ್ ಮಾಡಿ ಹಬ್ಬವನ್ನು ಸರಳವಾಗಿ ಆಚರಿಸಿದರು.