ಮಡಿಕೇರಿ: ಕೊರೋನಾ ಸಾಂಕ್ರಾಮಿಕ ರೋಗ ತಡೆಯ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಘೋಷಿಸಿದ್ದ ಭಾನುವಾರದ ಸಂಪೂರ್ಣ ಲಾಕ್ಡೌನ್ಗೆ ಅನುಗುಣವಾಗಿ ಕೊಡಗು ಜಿಲ್ಲೆ, ಬಹುತೇಕ ವ್ಯಾಪಾರ ವಹಿವಾಟು, ಜನ-ವಾಹನ ಸಂಚಾರಗಳಿಲ್ಲದೆ ಸ್ತಬ್ಧಗೊಂಡಿತ್ತು.
ಮಹಾಮಾರಿ ಸೋಂಕಿನ ತಡೆಯ ಹಿನ್ನೆಲೆ ಮೂರು ಲಾಕ್ ಡೌನ್ಗಳನ್ನು ಪೂರ್ಣಗೊಳಿಸಿ ನಾಲ್ಕನೇ ಹಂತದ ಲಾಕ್ ಡೌನ್ ಸಂದರ್ಭ ಆರ್ಥಿಕ ಚಟುವಟಿಕೆಗಳಿಗೆ ಒತ್ತು ನಿಡುವ ನಿಟ್ಟಿನಲ್ಲಿ ಸಾಕಷ್ಟು ನಿರ್ಬಂಧಗಳನ್ನು ಸಡಿಲಗೊಳಿಸಲಾಗಿತ್ತು. ಇದೀಗ ನಿರ್ಬಂಧಗಳ ಸಡಿಲಿಕೆಯ ನಡುವೆಯೇ ಭಾನುವಾರದ ಜನಜಂಗುಳಿ ತಡೆಗೆ ರಾಜ್ಯ ಸರ್ಕಾರ ಕೈಗೊಂಡಿರುವ ಸಂಪೂರ್ಣ ಲಾಕ್ ಡೌನ್ಗೆ ಕೊಡಗು ಪೂರ್ಣ ಪ್ರಮಾಣದಲ್ಲಿ ಸ್ಪಂದಿಸಿದೆ.
ಶನಿವಾರ ಸಂಜೆಯಿಂದಲೇ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬಂದಿದ್ದು, ಭಾನುವಾರ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಾಲಿನ ಅಂಗಡಿಗಳು ಬೆಳಗ್ಗೆ ೧೦ ಗಂಟೆಯವರೆಗೆ ತೆರೆದಿತ್ತು. ವಿಶೇಷವಾಗಿ ರಂಜಾನ್ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ಲಾಕ್ ಡೌನ್ ನಡುವೆಯೂ ಅವಕಾಶ ನೀಡಲಾಗಿತ್ತಾದರೂ ಮಾಂಸ ಖರೀದಿಯತ್ತ ಗ್ರಾಹಕರು ದೊಡ್ಡ ಆಸಕ್ತಿಯನ್ನು ತೋರದಿದ್ದುದು ಕಂಡು ಬಂದಿತು.
ದಿನಸಿ ಅಂಗಡಿಗಳನ್ನು ತೆರೆಯಲು ಅವಕಾಶ ಒದಗಿಸಲಾಗಿತ್ತಾದರೂ, ನಗರದ ಬಹುತೇಕ ದಿನಸಿ ಅಂಗಡಿಗಳು ಮುಚ್ಚಲ್ಪಟ್ಟಿದ್ದವು. ಈ ಹಿನ್ನೆಲೆಯಲ್ಲಿ ನಗರದಲ್ಲಿ ಬೆಳಗ್ಗಿನ ಅವಧಿಯಲ್ಲಿ ಅಲ್ಲೊಬ್ಬ ಇಲ್ಲೊಬ್ಬರಂತೆ ವಿರಳವಾಗಿ ಜನ ಸಂಚಾರ ಕಂಡು ಬಂದಿತು. ಮಧ್ಯಾಹ್ನದ ಬಳಿಕ ನಗರ ಅಕ್ಷರಶಃ ಸ್ತಬ್ಧವಾಗಿತ್ತು. ಔಷಧಿ ಅಂಗಡಿಗಳು ಮಾತ್ರ ದಿನ ಪೂರ್ತಿ ತೆರೆದಿದ್ದವು. ಜಿಲ್ಲೆಯ ಬಹುತೇಕ ಪಟ್ಟಣಗಳಲ್ಲೂ ಇದೇ ದೃಶ್ಯ ಕಂಡು ಬಂದಿತು.
ರಂಜಾನ್ ಪರಿಣಾಮ- ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯಾದ್ಯಂತ ಅಲ್ಪಸಂಖ್ಯಾತ ಬಾಂಧವರು ರಂಜಾನ್ ಹಬ್ಬಾಚರಣೆಯನ್ನು ತಮ್ಮ ಮನೆಗಳಿಗೆ ಸೀಮಿತಗೊಳಿಸಿಕೊಂಡ ಹಿನ್ನೆಲೆಯಲ್ಲಿ ಇವರು ನಡೆಸುತ್ತಿದ್ದ, ದಿನಸಿ, ತರಕಾರಿ ಮಾರಾಟ ಮಳಿಗೆಗಳೂ ಮುಚ್ಚಲ್ಪಟ್ಟಿದ್ದವು.