ಹೊಸದಿಗಂತ ಆನ್ಲೈನ್ ಡೆಸ್ಕ್:
ಜಗತ್ತನ್ನು ಇನ್ನೊಂದು ಸುತ್ತಿನ ಭಯಕ್ಕೆ ತಳ್ಳಿರುವ ಸೂಪರ್ ಸ್ಪೀಡ್ ಕೊರೋನಾ ವೈರಸ್ ಭಾರತಕ್ಕೆ ಪ್ರವೇಶ ಮಾಡಿದೆಯೇ?
ಹೀಗೊಂದು ಆತಂಕ ದಟ್ಟವಾಗಿಯೇ ಕಾಡುತ್ತಿದೆ. ಇದಕ್ಕೆ ಕಾರಣವಾಗಿರುವುದು ಹೊಸ ತಳಿಯ ವೈರಸ್ ಸೃಷ್ಟಿಯಾದ ಬಳಿಕ ಬ್ರಿಟನ್ನಿಂದ ಭಾರತಕ್ಕೆ ಆಗಮಿಸಿರುವ ೨೫ ಮಂದಿಯಲ್ಲಿ ಪತ್ತೆಯಾಗಿರುವ ಪಾಸಿಟಿವ್ ಪ್ರಕರಣಗಳು.
ಇಂಗ್ಲೆಂಡ್ನಲ್ಲಿ ಹೊಸ ತಳಿಯ ಸೂಪರ್ ಸ್ಪೀಡ್ ಕೊರೋನಾ ವ್ಯಾಪಿಸಲು ಆರಂಭವಾದ ಬಳಿಕ ಚ್ಚೆತ್ತುಕೊಂಡ ಕೇಂದ್ರ ಸರ್ಕಾರ ಅಲ್ಲಿಂದ ಭಾರತಕ್ಕೆ ಬರುವವರನ್ನು ಪರೀಕ್ಷೆಗೆ ಒಳಪಡಿಸುತ್ತಿದೆ. ಈವರೆಗೂ ಪರೀಕ್ಷೆಗೆ ಒಳಪಡಿಸಲಾದವರ ಪೈಕಿ ೨೫ ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇದು ಹೊಸ ತಳಿಯ ಗುಣಲಕ್ಷಣಗಳನ್ನು ಹೊಂದಿರುವ ಅನುಮಾನ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಆರ್ಟಿಪಿಸಿಆರ್ ಪರೀಕ್ಷೆ ಜೊತೆಗೆ ಹೊಸ ತಳಿಯ ಸಂಶೋಧನೆ ಕೂಡ ನಡೆಸಲಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ತಿಳಿಸಿದೆ.
ಇದಲ್ಲದೆ ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳಲ್ಲಿ ಕೋಡಾ ಇಂಗ್ಲೆಂಡ್ ಪ್ರವಾಸ ಮಾಡಿದವರು ಸೋಂಕಿತರಾಗಿರುವುದು ಪತ್ತೆಯಾಗಿದೆ. ಇನ್ನು ವಿದೇಶದಿಂದ ಬಂದವರನ್ನು ಮೇಘಾಲಯದಲ್ಲಿ ಸಂಪೂರ್ಣ ಕ್ವಾರಂಟೈನ್ನಲ್ಲಿ ಇಡಲಾಗಿದೆ. ತೆಲಂಗಾಣಕ್ಕೆ ಇಂಗ್ಲೆಂಡ್ನಿಂದ ಬಂದ ಏಳು ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಅವರ ಗಂಟಲದ್ರವ ಮಾದರಿಗಳನ್ನು ಸೆಲ್ಯೂಲಾರ್ ಮತ್ತು ಮೊಲೆಕ್ಲೂಲಾರ್ ಬಯೋಲಾಜಿಕಲ್ ಕೇಂದ್ರಕ್ಕೆ ಕಳುಹಿಸಲಾಗಿದೆ.
ಈಗಾಗಲೇ ಡೆನ್ಮಾರ್ಕ್, ಬೆಲ್ಜಿಯಂ, ನೆದರ್ ಲ್ಯಾಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ಸೇರಿದಂತೆ ವಿಶ್ವದ ನಾನಾ ದೇಶಗಳಲ್ಲಿ ಹೊಸ ತಳಿಯ ಕೊರೊನಾ ಅಬ್ಬರಿಸುತ್ತಿದೆ. ಆದರೆ ಈವರೆಗೂ ಭಾರತದಲ್ಲಿ ಅದರ ಪ್ರಭಾವ ಕಾಣಿಸಿಕೊಂಡಿಲ್ಲ. ಅಧಿಕೃತವಾಗಿ ಈವರೆಗೂ ಎಲ್ಲಿಯೂ ಹೊಸ ಸೋಂಕು ಕಾಣಿಸಿಕೊಂಡಿರುವ ವರದಿಯಾಗಿಲ್ಲ. ಆದರೂ ಇಂಗ್ಲೆಂಡ್ನಿಂದ ಬಂದವರನ್ನು ಕ್ವಾರಂಟೈನ್ನಲ್ಲಿಟ್ಟು ನಿಗಾ ವಹಿಸಲಾಗುತ್ತಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.