Wednesday, June 29, 2022

Latest Posts

ಭಾರತಕ್ಕೆ ಭಾರಿ ಕೋರೋನಾ ಆರ್ಥಿಕ ಹೊಡೆತ: ವಿಶ್ವಬ್ಯಾಂಕ್ ಕಳವಳ

ವಾಷಿಂಗ್‌ಟನ್ : ಕೋರೋನಾ ಮಹಾಮಾರಿಯಿಂದ ಭಾರತದ ಆರ್ಥಿಕ ವಲಯಕ್ಕೆ ಭಾರಿ ಹೊಡೆತವಿದೆ ಎಂದು ವಿಶ್ವ ಬ್ಯಾಂಕ್ಕಳವಳ ವ್ಯಕ್ತಪಡಿಸಿದೆ.
ದೇಶದ ಆರ್ಥಿಕತೆಯ ಒಟ್ಟು ಬೆಳವಣಿಗೆಯಾದ ಶೇ ೫ ರಲ್ಲಿ ಈ ಹಣಕಾಸು ವರ್ಷದಲ್ಲಿ ಶೇ ೨.೮ ರಷ್ಟು ಇಳಿಮುಖವಾಗಲಿದೆ . ಇದು ದೇಶದ ಎಲ್ಲ ವಲಯಗಳ ಮೇಲೆ ಪ್ರತಿಕೂಲಕರ ಪರಿಣಾಮ ಬೀರಲಿದೆ ಎಂದು ವಿಶ್ವಬ್ಯಾಂಕ್ ದಕ್ಷಿಣ ಏಷ್ಯಾ ಭಾಗದ ಮುಖ್ಯಸ್ಥ ಹನ್ಸ್ ಟಿಮ್ಮರ್ ಹೇಳಿದ್ದಾರೆ.
ಪ್ರಸಕ್ತ ಹಣಕಾಸು ಸಾಲಿನ ಕೊನೆ ವೇಳೆಗೆ ಭಾರತದ ಆರ್ಥಿಕ ವಲಯದಲ್ಲಿ ಹಿನ್ನಡೆ ಕಂಡು ಬರಲಿದೆ. ಆದರೆ ಈ ಆರ್ಥಿಕ ಹಿಂಜರಿತದಿಂದ ದೇಶ ಚೇತರಿಸಿಕೊಳ್ಳಬೇಕಾದರೆ ಕೆಲವೊಂದು ತುರ್ತು ಆರ್ಥಿಕ ಸುಧಾರಣೆಗಳೂ ಅತಿ ಮುಖ್ಯ ಎಂದು ಅವರು ಸಲಹೆಗಳನ್ನೂ ಮುಂದಿಟ್ಟಿದ್ದಾರೆ.
ಮೊದಲನೆಯದಾಗಿ ಕೋರೋನಾ ಸೋಂಕು ದೇಶದಲ್ಲಿ ವ್ಯಾಪಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಎರಡನೆಯದಾಗಿ ದೇಶದಲ್ಲಿ ಆಹಾರಧಾನ್ಯಗಳ ಕೊರತೆಯಾಗದಂತೆ ಸರ್ಕಾರ ಎಚ್ಚರ ವಹಿಸಬೇಕು. ಮೂರನೆಯದಾಗಿ ಸ್ಥಳೀಯ ಮಟ್ಟದಲ್ಲಿ ಯುವಕ, ಯುವತಿಯರಿಗೆ ಕೆಲವೊಂದು ಉದ್ಯೋಗಗಳನ್ನೂ ಸರ್ಕಾರ ಸೃಷ್ಟಿಸಬೇಕು. ಸಣ್ಣ ಹಾಗೂ ಮಧ್ಯಮ ಪ್ರಮಾಣದ ಉದ್ಯೋಗದಲ್ಲಿ ಯುವಕರು ತೊಡಗುವುದರಿಂದ ಆರ್ಥಿಕತೆಯಲ್ಲಿ ಚೇತರಿಕೆ ಕಂಡು ಬರಲು ಸಾಧ್ಯ ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ. ಅಮೆರಿಕ ಸೇರಿದಂತೆ ಪ್ರಪಂಚದ ಬಹುತೇಕ ಮುಂದುವರಿದ ದೇಶಗಳ ಆರ್ಥಿಕತೆಯೇ ಇಂದು ನೆಲಕಚ್ಚಿದೆ. ಈ ದೇಶಗಳು ಚೇತರಿಸಿಕೊಳ್ಳಬೇಕಾದರೆ ಕನಿಷ್ಟ ಒಂದು ವರ್ಷವಾದರೂ ಬೇಕು. ಅಲ್ಲಿಯವರೆಗೂ ಭಾರತದ ವಿಜ್ಞಾನ, ತಂತ್ರಜ್ಞರು ಕೈ ಕಟ್ಟಿ ಕುಳಿತುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದೂ ವಿಶ್ವ ಬ್ಯಾಂಕ್ ಕಿವಿಮಾತು ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss