ಬೀಜಿಂಗ್: ಲಡಾಖ್ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಕಳೆದ ಒಂದು ತಿಂಗಳಿಂದ ಎದುರಾಗಿರುವ ಬಿಕ್ಕಟ್ಟು ಪರಿಹರಿಸಲು ಭಾರತ – ಚೀನಾ ನಡುವೆ ಮಿಲಿಟರಿ ಹಂತದ ಸಭೆ ನಡೆದ ಬೆನ್ನಲ್ಲೇ ಚೀನಾ ಭಾರತಕ್ಕೆ ಮಣಿದಿದ್ದು, ಗಡಿಯಲ್ಲಿ ನಿಯೋಜಿಸಿರುವ ತನ್ನ ಹೆಚ್ಚುವರಿ ಸೇನೆಯನ್ನು ಚೀನಾ ಹಿಂಪಡೆದಿದೆ. ಜತೆಗೆ ಭಾರತ ಸಹ ಒಪ್ಪಂದದಂತೆ ತನ್ನ ಸೇನೆಯನ್ನೂ ಹಿಂಪಡೆದಿದೆ.
ಸೋಮವಾರದಿಂದ ಚೀನಾ ಗಡಿಯಿಂದ ಹೆಚ್ಚುವರಿ ಸೇನೆಯನ್ನು ಹಿಂಪಡೆಯುತ್ತಿದೆ. ಅದರಂತೆ ನಾವು ಕೂಡ ನಮ್ಮ ಸೇನೆಯನ್ನು ಹಿಂಪಡೆದಿದ್ದೇವೆ ಎಂದು ಸರ್ಕಾರಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಬಿಕ್ಕಟ್ಟಿರುವ ಗಡಿ ಪ್ರದೇಶದಲ್ಲಿ ಶಾಂತಿ ಸ್ಥಾಪಿಸುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ. ಇದೇ ನಿಟ್ಟಿನಲ್ಲಿ ಮುಂದಿನ ಸಭೆಯಲ್ಲಿ ಹೆಚ್ಚಿನ ಕ್ರಮಗಳನ್ನು ಉಭಯ ರಾಷ್ಟ್ರಗಳು ಕೈಗೊಳ್ಳಲಿವೆ ಎಂದು ತಿಳಿಸಿದ್ದಾರೆ. ಉಭಯ ರಾಷ್ಟ್ರಗಳ ಮೇಜರ್ – ಜನರಲ್ ಹಂತದ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಲಿದ್ದಾರೆ.