ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಭಾರತದಾದ್ಯಂತ ಬಳಕೆದಾರರ ಗೌಪ್ಯತೆ ಮತ್ತು ಸುರಕ್ಷತೆಗೆ ವಾಟ್ಸಾಪ್ ಬದ್ಧವಾಗಿದೆ ಎಂದು ವಾಟ್ಸಾಪ್ ಹೆಡ್ ವಿಲ್ ಕ್ಯಾಥ್ಕಾರ್ಟ್ ಹೇಳಿದ್ದಾರೆ.
ಪಿಟಿಐಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಗೌಪ್ಯತೆ ನೀತಿ ನವೀಕರಣದ ಬಗ್ಗೆ ವಾಟ್ಸಾಪ್ ಸರ್ಕಾರದಿಂದ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲು ಮುಕ್ತವಾಗಿದೆ. ಇಂದು ಸಿಗ್ನಲ್ನಂತಹ ಪ್ರತಿಸ್ಪರ್ಧಿಗಳೊಂದಿಗೆ ಬಳಕೆದಾರರ ನಂಬಿಕೆಗಾಗಿ ಕಂಪನಿಯು ಸ್ಪರ್ಧಿಸಬೇಕಾಗುತ್ತದೆ. ಆದರೆ ವಾಟ್ಸಾಪ್ ನಲ್ಲಿ ಬಳಕೆದಾರರಿಗೆ ಅವರ ಸಂದೇಶಗಳು ಕೊನೆಯವರೆಗೆ ಎನ್ಕ್ರಿಪ್ಟ್ ಇರುತ್ತವೆ ಎಂದು ಭರವಸೆ ನೀಡಿದ್ದಾರೆ.
ಈಗಾಗಲೇ ಸಿಗ್ನಲ್ ಮತ್ತು ಟೆಲಿಗ್ರಾಂನಂತಹ ಪ್ರತಿಸ್ಪರ್ಧಿ ಮೆಸೇಜಿಂಗ್ ಪ್ಲಾಟ್ಫಾರ್ಮ್ಗಳು ಡೌನ್ಲೋಡ್ಗಳಲ್ಲಿ ಏರಿಕೆಯಾಗುತ್ತಿದ್ದು, ಈ ಮದ್ಯೆ ವಾಟ್ಸ್ಆ್ಯಪ್ ಬಳಕೆದಾರರಿಂದ ಒಪ್ಪಿಗೆ ಕೋರಿದೆ. ಗೌಪ್ಯತೆಗೆ ವಿಚಾರದಲ್ಲಿ ನಾವು ಬಳಕೆದಾರರ ನಂಬಿಕೆಗಾಗಿ ಸ್ಪರ್ಧಿಸಬೇಕಾಗಿದೆ ಎಂಬುದು ನಮಗೆ ತಿಳಿದಿದೆ. ಅದು ಜಗತ್ತಿಗೆ ತುಂಬಾ ಒಳ್ಳೆಯದು. ಜನರು ಹೇಗೆ ಸಂವಹನ ನಡೆಸುತ್ತಾರೆ ಎಂಬುದರ ಬಗ್ಗೆ ಆಯ್ಕೆಗಳನ್ನು ಹೊಂದಿರಬೇಕು. ಅವರ ಚಾಟ್ಗಳನ್ನು ಬೇರೆ ಯಾರೂ ನೋಡುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಕ್ಯಾಥ್ಕಾರ್ಟ್ ಹೇಳಿದರು.
ಜನರು ಸಂವಹನ ನಡೆಸಲು ವಾಟ್ಸಾಪ್ ಅನ್ನು ಬಳಸುವುದನ್ನು ಮತ್ತು ನಂಬುವುದನ್ನು ಮುಂದುವರಿಸಿದ್ದಕ್ಕಾಗಿ ನಾವು ಕೃತಜ್ಞರಾಗಿ ಇರುತ್ತೇವೆ. ಗೌಪ್ಯತೆಯ ಮೇಲಿನ ಸ್ಪರ್ಧೆಯು ಉತ್ತಮವಾಗಿದೆ ಎಂದು ನಾವು ಭಾವಿಸುತ್ತೇವೆ. ಏಕೆಂದರೆ ಇದು ಭವಿಷ್ಯದಲ್ಲಿ ಅಪ್ಲಿಕೇಷನ್ಗಳನ್ನು ಇನ್ನಷ್ಟು ಖಾಸಗಿ ಮತ್ತು ಸುರಕ್ಷಿತವಾಗಿಸಲು ನೆರವಾಗುತ್ತದೆ ಎಂದು ಹೇಳಿದರು.
ಮೂಲಗಳ ಪ್ರಕಾರ, ವಾಟ್ಸಾಪ್ ಘೋಷಿಸಿದ ಇತ್ತೀಚಿನ ಗೌಪ್ಯತೆ ನೀತಿ ನವೀಕರಣವನ್ನು ಸರ್ಕಾರ ಪರಿಶೀಲಿಸುತ್ತಿದೆ ಮತ್ತು ಮೌಲ್ಯಮಾಪನ ಮಾಡುತ್ತಿದೆ. ಮೆಸೇಜಿಂಗ್ ಪ್ಲಾಟ್ಫಾರ್ಮ್ನ ಇತ್ತೀಚಿನ ನಡೆಯ ಪರಿಣಾಮಗಳ ಕುರಿತು ಐಟಿ ಸಚಿವಾಲಯದೊಳಗೆ ಚರ್ಚೆಗಳು ನಡೆಯುತ್ತಿವೆ.