Saturday, June 25, 2022

Latest Posts

ಭಾರತದ ರಾಷ್ಟ್ರ ಧ್ವಜದ ಇತಿಹಾಸ, ಬೆಳವಣಿಗೆ, ಲಕ್ಷಣಗಳು ಹಾಗೂ ಪಾಲಿಸಬೇಕಾದ ನಿಯಮಗಳು..

ಕೇತನ, ಪತಾಕೆ, ನಿಶಾನೆ, ಎಂಬಿತ್ಯಾಯಾದಿ  ಪರ್ಯಾಯ ಪದಗಳಿರುವ ‘ಧ್ವಜ’ ವೆಂಬ ಶಬ್ದಕ್ಕೆ ಭಾಷಾಶಾಸ್ತ್ರದ ದೃಷ್ಟಿಯಿಂದ ಬಹು ವಿಸ್ತಾರ ವಾದ ಅರ್ಥವ್ಯಾಪ್ತಿ ಇದೆ. ಧ್ವಜವೆಂಬುದು ಒಂದು ದೇಶದ, ಪ್ರಾಂತ್ಯದ, ಸಾಮ್ರಾಜ್ಯದ ಅಥವಾ ಒಂದು ವಂಶದ ಅಭಿಮಾನದ ಹಾಗೂ ಗೌರವದ ಸಂಕೇತ. ‘ಧ್ವಜ’ ಎಂಬುದು ಒಂದು ದೇಶದ, ರಾಜ್ಯದ,  ವಂಶದ, ಅಥವಾ ಒಬ್ಬ ವ್ಯಕ್ತಿಯ ಕುರಿತಾದ ವಿಶೇಷ ಮಾಹಿತಿ ನೀಡುವ ಒಂದು ಸಾಂಕೇತಿಕ ಚಿತ್ರ ಆಗಿರುತ್ತದೆ. ಅದು ಸ್ವಾತಂತ್ರ್ಯದ ದ್ಯೋತಕ. ಹಿಂದೆ ರಾಜ ಮಹಾರಾಜರುಗಳು ತಮ್ಮದೇ ಆದ ಧ್ವಜಗಳನ್ನು ಹೊಂದಿದ್ದರು. ಭೀಷ್ಮನು ತಾಳ ಧ್ವಜನು, ಅರ್ಜುನನು ಕಪಿ ಧ್ವಜನು. ದುರ್ಯೋಧನನು ಉರಗ ಪತಾಕನು.
ಭಾರತವು ಇಂದು ತ್ರಿವರ್ಣರಂಜಿತ ಧ್ವಜವನ್ನು ಅಧಿಕ್ರತವಾಗಿ ಉಪಯೋಗಿಸುತ್ತಿದೆ. ಈ ಧ್ವಜವು ಒಮ್ಮಿಂದೊಮ್ಮೆ ತಯಾರಾದುದಲ್ಲ. ಭಾರತದ ರಾಷ್ಟ್ರಧ್ವಜಕ್ಕೆ ತನ್ನದೇ ಆದ ಸುಮಾರು 90 ವರ್ಷಗಳ ಇತಿಹಾಸವಿದೆ. ಸುಮಾರು 1857 ರಿಂದ 1947 ರ ವರೆಗೆ ಅನೇಕ ಹಂತಗಳಲ್ಲಿ ಈ ರಾಷ್ಟ್ರ ಧ್ವಜವು ಪರಿವರ್ತನೆಗಳನ್ನು ಹೊಂದುತ್ತಾ ಇಂದಿನ ರಾಷ್ಟ್ರ ಧ್ವಜದ ರೂಪದಕ್ಕೆ ಬಂದಿದೆ.
ಭಾರತಕ್ಕೊಂದು ಸ್ವತಂತ್ರವಾದ ರಾಷ್ಟ್ರ ಧ್ವಜ ಬೇಕೆಂದು ಸ್ವಾತಂತ್ರ್ಯ ಪೂರ್ವದಲ್ಲೇ ಭಾರತೀಯರಿಗೆ ಅನಿಸಿತ್ತು. ನಮ್ಮನ್ನು ಆಳುತ್ತಿದ್ದ ಬ್ರಿಟಿಷರ ಧ್ವಜಕ್ಕೆ ಗೌರವ ಸಲ್ಲಿಸುವುದು ನಮ್ಮ ದೇಶಾಭಿಮಾನಿಗಳಿಗೆ ಒಗ್ಗುತ್ತಿರಲಿಲ್ಲ. ಅದಕ್ಕಾಗಿ  ಸ್ವಾತಂತ್ರ್ಯ  ಹೋರಾಟಗಾರರು ಅಲ್ಲಲ್ಲಿ ಸೇರಿ ತಮ್ಮದೇ ಆದ ಧ್ವಜವನ್ನು ತಯಾರಿಸುವ ಪ್ರಯತ್ನ ಮಾಡುತ್ತಿದ್ದರು. ತಮಗೆ ಸರಿಕಂಡ ರೀತಿಯಲ್ಲಿ ಧ್ವಜಗಳನ್ನು ತಯಾರಿಸಿ ಧ್ವಜಾರೋಹಣ ಮಾಡಿ ತಮ್ಮ ದೇಶಭಕ್ತಿಯನ್ನು ವ್ಯಕ್ತಪಡಿಸುತ್ತಿದ್ದರು. ಇದು ಬ್ರಿಟಿಷರಿಗೆ ನುಂಗಲಾರದ ತುತ್ತಾಗಿತ್ತು. ಅದಕ್ಕಾಗಿ ಬ್ರಿಟಿಷರು ಭಾರತಕ್ಕಾಗಿಯೇ ಒಂದು ಧ್ವಜವನ್ನು ರಚಿಸಿದರು. ಇದು ಕಡು ನೀಲಿ ಬಣ್ಣದಲ್ಲಿ ಆಯತಾಕಾರದಲ್ಲಿದ್ದು ಧ್ವಜದ  ಮೇಲ್ಭಾಗದಲ್ಲಿ ಎಡ ಮೂಲೆಯಲ್ಲಿ ಬ್ರಿಟಿಷರ ಯೂನಿಯನ್ ಜಾಕ್ , ಕೆಳ ಭಾಗದಲ್ಲಿ ಬಲ ಮೂಲೆಯಲ್ಲಿ ಒಂದು ಕಮಲದ ಹೂವಿನಂತಹ ಚಿತ್ರವಿತ್ತು. ಇದನ್ನು 1857 ರಲ್ಲಿ ಭಾರತಕ್ಕೆ ತರಲಾಯಿತು. ದೇಶಾಭಿಮಾನಿಗಳಾದ ಭಾರತೀಯರು ಇದನ್ನು ಒಪ್ಪಲೂ ಇಲ್ಲ, ಸ್ವೀಕರಿಸಲೂ ಇಲ್ಲ. ಭಾರತದ ರಾಷ್ಟ್ರ ಧ್ವಜದ ಇತಿಹಾಸದಲ್ಲಿ ಇದು ಸಾಮಾನ್ಯವಾಗಿ ದಾಖಲಾಗಲೂ ಇಲ್ಲ.
ಮುಂದೆ ಭಾರತೀಯರಿಗೆ ತಾವೇ ತಯಾರಿಸಿದ ಧ್ವಜವೊಂದು ತಮಗೆ ಬೇಕೆಂಬ ಆಸೆ ಬಲವಾಯಿತು. 1904 ರಲ್ಲಿ ಭಾರತದ ಯುಗಪುರುಷ ಸ್ವಾಮೀ ವಿವೇಕಾನಂದರ ಶಿಷ್ಯರೊಬ್ಬರು ಒಂದು ಧ್ವಜವನ್ನು ತಯಾರಿಸಿದರು. ಇದು ಕೆಂಪು ಬಣ್ಣದ ಚೌಕ ವಾಗಿದ್ದು ಮಧ್ಯದಲ್ಲಿ ಬೌದ್ಧ ಧರ್ಮದ ಒಂದು ನಿಶಾನೆ ಇತ್ತು ಅದರ ಮೇಲೆ ‘ವಂದೇ ಮಾತರಂ’ ಎಂದು ಬಂಗಾಳಿ ಭಾಷೆಯಲ್ಲಿ ಬರೆದಿತ್ತು. ಧ್ವಜದ ನಾಲ್ಕೂ ಅಂಚುಗಳಲ್ಲಿ 101 ಪ್ರಜ್ವಲಿಸುತ್ತಿರುವ ದೀಪಗಳನ್ನೂ ಚಿತ್ರಿಸಲಾಗಿತ್ತು
ಈ ಧ್ವಜವು ಸ್ವಲ್ಪ ಕಾಲದಲ್ಲಿಯೇ ಬದಲಾವಣೆಯನ್ನು ಹೊಂದಿ ಆಯತಾಕಾರದ ತ್ರಿವರ್ಣದ ಧ್ವಜವೊಂದು ರೂಪಿತವಾಯ್ತು. ಇದರಲ್ಲಿ ಮೇಲಕ್ಕೆ ಹಸಿರು ಬಣ್ಣದಲ್ಲಿ ಸಪ್ತ ಕಮಲಗಳು, ಮಧ್ಯದಲ್ಲಿ ಹಳದಿ ಬಣ್ಣದಲ್ಲಿ ಬಂಗಾಳಿ ಭಾಷೆಯಲ್ಲಿ ಬರೆದ ‘ವಂದೇ ಮಾತರಂ’ ವಾಕ್ಯ , ಕೆಳಗೆ ಕೆಂಪು ಪಟ್ಟಿಯಲ್ಲಿ ಎಡಗಡೆಗೆ ಚಂದ್ರ ಮತ್ತು ಬಲಗಡೆಗೆ ಸೂರ್ಯ, ಇದ್ದವು. ಇದನ್ನು ಈಗಿನ ಕೋಲಕೊತ್ತ ನಗರದ ಗ್ರೀನ್ ಪಾರ್ಕ್ ನಲ್ಲಿ  1906 ರಲ್ಲಿ ಆಗೋಸ್ತು ತಿಂಗಳ ಏಳನೇ ತಾರಿಕಿನಂದು  ಹಾರಿಸಲಾಯ್ತು.
ನಂತರ ಮಾನ್ಯ ಭಿಕಾಜಿ ಕಾಮಾ ರವರ ನೇತ್ರತ್ವದಲ್ಲಿ ಕೆಲವು ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರು ಸೇರಿ 1907 ರಲ್ಲಿ ಈ ಧ್ವಜದಲ್ಲಿ ಅಲ್ಪ ಸ್ವಲ್ಪ ಬದಲಾವಣೆಗಳನ್ನು ಮಾಡಿ ಇನ್ನೊಂದು ಧ್ವಜವನ್ನು ರೂಪಿಸಿದರು.  ಅದೂ ತ್ರಿವರ್ಣ ಧ್ವಜವಾಗಿದ್ದು ಮೇಲ್ಗಡೆ ಹಸಿರಿನ ಬದಲಿಗೆ ಕೇಸರಿ ಬಣ್ಣವನ್ನೂ ಕಮಲಗಳ ಬದಲಿಗೆ ನಕ್ಷತ್ರಗಳನ್ನೂ ಚಿತ್ರಿಸಲಾಗಿತ್ತು. ಮಧ್ಯ ಭಾಗದಲ್ಲಿ ಯಾವುದೇ ಬದಲಾವಣೆ ಇಲ್ಲದೆ ಹಾಗೆಯೇ ಬಿಟ್ಟು ಕೆಳಗಿನ ಭಾಗದಲ್ಲಿ ಕೆಂಪಿನ ಬದಲಿಗೆ ಹಸಿರು ಬಣ್ಣದಲ್ಲಿ ಸೂರ್ಯ ಚಂದ್ರರ ಜೊತೆಗೆ ಒಂದು ನಕ್ಷತ್ರವನ್ನೂ ಚಿತ್ರಿಸಲಾಗಿತ್ತು.  ಸೂರ್ಯ ಚಂದ್ರರ ಚಿತ್ರದ ಸ್ಥಾನವನ್ನೂ ಬದಲಾಯಿಸಲಾಯ್ತು. ಇದನ್ನು ಬರ್ಲಿನ್ ನಲ್ಲಿ ಪ್ರಥಮವಾಗಿ ಹಾರಿಸಲಾಯ್ತು.
ಮುಂದೆ ಹೋಂ ರೂಲ್ ಚಳುವಳಿಯ ಸಂದರ್ಭದಲ್ಲಿ ನಿಷ್ಟಾವಂತ ಸ್ವಾತಂತ್ರ್ಯ ಹೋರಾಟಗಾರ ಶ್ರೀ ಲೋಕಮಾನ್ಯ ತಿಲಕ್ ಮತ್ತು ಶ್ರೀಮತಿ ಅನ್ನಿ ಬೆಸೆಂಟ್ ರವರ ನೇತ್ರತ್ವದಲ್ಲಿ ಇದುವರೆಗಿನ ಎಲ್ಲ ಧ್ವಜಗಳಿಗಿಂತ ಭಿನ್ನವಾದ ಒಂದು ಧ್ವಜದ ನಿರ್ಮಾಣವಾಯ್ತು . ಇದು ಆಯತಕಾರವಾಗಿದ್ದು ಹಾರಾಡುವ ಭಾಗದಲ್ಲಿ ತ್ರಿಕೋಣಕಾರದಲ್ಲಿ ಕತ್ತರಿಸಿ ತೆಗೆದಂತಿತ್ತು. ಇದರಲ್ಲಿ ಐದು ಕೆಂಪು ಪಟ್ಟಿಗಳು  ಮತ್ತು ನಾಲ್ಕು ಬಿಳಿ ಪಟ್ಟಿಗಳು ಒಂದರ ನಂತರ ಒಂದರಂತೆ ಇದ್ದವು. ಧ್ವಜ ಮೇಲ್ಭಾಗದಲ್ಲಿ ಎಡ ಮೂಲೆಯಲ್ಲಿ ಯೂನಿಯನ್ ಜಾಕ್ ಮತ್ತು ಬಲ ಮೂಲೆಯಲ್ಲಿ ಚಂದ್ರ ಮತ್ತು ನಕ್ಷತ್ರ ಇದ್ದುವು. ಆಕಾಶದಲ್ಲಿ ಕಾಣಿಸುವ ಸಪ್ತರ್ಷಿ ಮಂಡಲದ ಆಕಾರದಲ್ಲಿ ಈ ಧ್ವಜ ದಲ್ಲಿಯೂ ಮೇಲಿನಿಂದ ಕೆಳಗೆ ಸಪ್ತರ್ಷಿ ಮಂಡಲವನ್ನೂ ಚಿತ್ರಿಸಲಾಗಿತ್ತು.
ಅನಂತರದ ದಿನಗಳಲ್ಲಿ ಮತ್ತೆ ಹಲವಾರು ಬದಲಾವಣೆಗಳನ್ನು ಹೊಂದಿ ಕೊನೆಗೆ ಪಿಂಗಳೆ ವೆಂಕಯ್ಯನವರು ತಯಾರಿಸಿದ ಧ್ವಜ ಒಪ್ಪಿತವಾಯ್ತು. ಇದನ್ನು ಮಹಾತ್ಮ ಗಾಂಧೀಜಿಯವರ ಇಚ್ಛೆಯಂತೆ ಅಂದಿನ ಕಾಂಗ್ರೆಸ್ ಪಕ್ಷಕ್ಕಾಗಿ ತಯಾರಿಸಿದ್ದರು. ಅಂದು ಕಾಂಗ್ರೆಸ್ ಪಕ್ಷವೇ ಸ್ವಾತಂತ್ರ್ಯ  ಹೋರಾಟದಲ್ಲಿ ಮುಂಚೂಣಿಯಲ್ಲಿತ್ತು. ಪಿಂಗಳೆ ವೆಂಕಯ್ಯನವರುಆಂಧ್ರಪ್ರದೇಶದ ಮಚಲೀ ಪಟ್ಟಣದ ಸಮೀಪದ ಒಂದು ಹಳ್ಳಿಯ ಕೃಷಿಕರು. ಅವರು 1916 ರಿಂದ 1921 ರವರೆಗೆ 5 ವರ್ಷಗಳ ಕಾಲ ವಿವಿಧ ದೇಶಗಳ ರಾಷ್ಟ್ರ ಧ್ವಜಗಳ ಅಧ್ಯಯನ ಮಾಡಿದರು. ಕೊನೆಗೆ ಕೆಂಪು ಮತ್ತು ಹಸಿರು ಬಣ್ಣಗಳಿರುವ, ಗಾಂಧೀಜಿಯವರು ನೂಲಲು ಉಪಯೋಗಿಸುತಿದ್ದ ಚರಕವನ್ನುಳ್ಳ ಧ್ವಜವೊಂದನ್ನು ತಯಾರಿಸಿದರು. ಅದರಲ್ಲಿ ಕೆಂಪು ಬಣ್ಣದಲ್ಲಿ ಹಿಂದೂ ಧರ್ಮವನ್ನೂ ಹಸಿರು ಬಣ್ಣದಲ್ಲಿ ಇಸ್ಲಾಂ ಧರ್ಮವನ್ನೂ ಪ್ರತಿನಿಧಿಸಿದರು. ಮಾನ್ಯ ಗಾಂಧೀಜಿಯವರ ಸಲಹೆಯಂತೆ ಭಾರತದಲ್ಲಿನ ಇತರ ಧರ್ಮಗಳನ್ನು ಪ್ರತಿನಿಧಿಸುವ ಸಲುವಾಗಿ ಬಿಳಿ ಬಣ್ಣಬನ್ನು ಈ ಧ್ವಜದಲ್ಲಿ ಮತ್ತೆ ಸೇರಿಸಲಾಯ್ತು .
ಮುಂದೆ ಇದರಲ್ಲಿ ಕೆಂಪಿನ ಬದಲಾಗಿ ಕೇಸರಿ ಬಣ್ಣವನ್ನು ಸೇರಿಸಿ ಕೇಸರಿ ಬಿಳಿ ಹಸಿರು ಬಣ್ಣಗಳನ್ನು ಕ್ರಮಾಗತವಾಗಿ ಅಳವಡಿಸಲಾಯ್ತು.
ಮುಂದಿನ ಹಂತದಲ್ಲಿ 1931 ರಲ್ಲಿ ಚರಕದ ಬದಲಾಗಿ ಅಶೋಕ ಚಕ್ರವನ್ನು ಬಿಳಿ ಬಣ್ಣದಲ್ಲಿ ಚಿತ್ರಿಸಲಾಯ್ತು.  ಇದನ್ನು 1947 ರ ರಾಜ್ಯಾಂಗ ಸಭೆಯಲ್ಲಿಟ್ಟು ಸಾಕಷ್ಟು ವಿಕಾರ ವಿಮರ್ಶೆ ಮಾಡಿ ಒಪ್ಪಿಕೊಳ್ಳಲಾಯಿತು.   ಹಾಗೆ ಈಗ ಬಳಕೆಯಲ್ಲಿರುವ  ರಾಷ್ಟ್ರಧ್ವಜವು ರೂಪಿತವಾಯ್ತು. ಇದರಲ್ಲಿನ ಕೇಸರಿ ಬಣ್ಣವು ಭಾರತೀಯರ (ಕೇಸರಿಯಂತಹ ) ಶೌರ್ಯ ಮತ್ತು ಪರಾಕ್ರಮವನ್ನೂ ಭಾರತೀಯಸಂತ ಪರಂಪರೆಯ ತ್ಯಾಗವನ್ನೂ ಪ್ರತಿನಿಧಿಸುತ್ತದೆ. ಬಿಳಿ ಬಣ್ಣವು ಪರಿಶುದ್ಧತೆಯನ್ನೂ ಶಾಂತಿಯನ್ನೂ ಪ್ರತಿನಿಧಿಸುತ್ತದೆ. ಹಸಿರು ಬಣ್ಣವು ಸಮೃದ್ಧಿಯನ್ನೂ ಪ್ರತಿನಿಧಿಸುತ್ತದೆ. 24 ಅರೆಗಾಲುಗಳನ್ನುಳ್ಳ ಅಶೋಕ ಚಕ್ರವು ಭಾರತವು ದಿನದ 24 ಗಂಟೆಗಳಲ್ಲಿಯೂ ಪ್ರಗತಿಪಾಠದಲ್ಲಿ ಮುನ್ನಡೆಯುತಿರುವುದನ್ನೂ ಪ್ರತಿನಿಧಿಸುತ್ತದೆ.

ಭಾತರದ ಅಧಿಕೃತ ರಾಷ್ಟ್ರ ಧ್ವಜದ ಲಕ್ಷಣಗಳು;

 1. ರಾಷ್ಟ್ರ ಧ್ವಜದ ಉದ್ದಗಳಗಳ ಅಳತೆಯ ಪ್ರಮಾಣ 3:2 ರಂತೆ ಇರಬೇಕು.
 2. ರಾಷ್ಟ್ರ ಧ್ವಜವನ್ನು ಖಾದಿಬಟ್ಟೆಯಿಂದ ಅಥವಾ ರೇಶ್ಮೆಬಟ್ಟೆಯಿಂದ ಕೈ ಮಗ್ಗದಲ್ಲಿ ನೇಯ್ದು ತಯಾರಿಸಿರಬೇಕು.
 3. ಧ್ವಜದಲ್ಲಿ ನಿರ್ದಿಷ್ಟವಾದ ಬಣ್ಣದ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಪಟ್ಟಿಗಳು ಇರಬೇಕು. ಬಣ್ಣಗಳು ತೀರಾ ತಿಳಿಯಾಗಿಯೂ ತೀರಾ ಗಾಢವಾಗಿಯೂ ಇರಬಾರದು. ಮತ್ತು ಅವು ಸರಿಯಾದ ಅಳತೆಯಲ್ಲಿರಬೇಕು. ಅಶೋಕ ಚಕ್ರವು ನಿರ್ದಿಷ್ಟವಾದ ಕಡು ನೀಲಿ ಬಣ್ಣದಲ್ಲಿ ಇರಬೇಕು. ಚಕ್ರದಲ್ಲಿ 24 ಅರೆಗಾಲುಗಳಿರಬೇಕು. ಹೆಚ್ಚು ಅಥವಾ ಕಡಿಮೆ ಸಂಖ್ಯೆಯಲ್ಲಿರಬಾರದು.
 4. ಧ್ವಜದ ಎರಡೂ ಮೈಗಳೂ ಒಂದೇ ರೀತಿ ಇರಬೇಕು. ಇತರ ಬಟ್ಟೆಗಳಲ್ಲಿರುವಂತೆ ಒಳಮೈ, ಹೊರಮೈ ಎಂಬ ಎಂಬ ಭೇದ ಇರಬಾರದು.
 5. ಧ್ವಜವನ್ನು ಅಖಂಡ ಬಟ್ಟೆಯಿಂದ ತಯಾರಿಸಿರಬೇಕು. ಬೇರೆ ಬೇರೆ ಬಣ್ಣದ ಮೂರು ತುಂಡುಗಳನ್ನು ಹೊಲಿದು ಮಾಡಿರ ಬಾರದು.
 6. ಅದರ ನಾಲ್ಕೂ ಮೂಲೆಗಳನ್ನು ತ್ರಿಕೋಣಕಾರದಲ್ಲಿ ದಪ್ಪವಾಗಿ ಹೊಲಿದಿರಬೇಕು.
 7. ಕೇಸರಿ ಬಣ್ಣದ ಹತ್ತಿರ ಧ್ವಜವನ್ನು ಕಂಬಕ್ಕೆ ಬಿಗಿಯಲು ಬೇಕಾದ ಒಂದು ವಿಶಿಷ್ಟ ಆಕಾರದ ಮರದ ಬೆಣೆ ಇದ್ದಿರಬೇಕು.ಹಸಿರು ಬಣ್ಣದ ಹತ್ತಿರ ದಾರದ ಒಂದು ನುಲಿ ಇರಬೇಕು. ಇವುಗಳನ್ನು ಉಪಯೋಗಿಸಿ ಧ್ವಜವನ್ನು ಕಂಬಕ್ಕೆ ಕಟ್ಟಲಾಗುತ್ತದೆ.
 8. ಧ್ವಜ ವಂದನೆಗೆ ಉಪಯೋಗಿಸುವ ಧ್ವಜವು ಬಣ್ಣಗುಂದಿ ಮಾಸಿರಬಾರದು, ಹರಿದಿರಬಾರದು. ಕೊಳೆಯಾಗಿರಬಾರದು. ಹಾಗೆಯೇ ಒದ್ದೆಯಾಗಿಯೂ, ಮುದ್ದೆಕಟ್ಟಿಯೂ ಇರಬಾರದು.
 9. ಧ್ವಜ ಒಳ ಅಂಚಿನಲ್ಲಿ I S I ಗುರುತು ಇರಬೇಕು. ಧ್ವಜದ ಬೆಲೆಯನ್ನೂ ಅದರಲ್ಲಿ ನಮೂದಿಸಿರಬೇಕು.
 10. ಧ್ವಜದ ಅಳತೆಗೆ ತಕ್ಕಂತೆ ಕಂಬದ ಅಳತೆಯೂ ಇರ ಬೇಕು.ಸಾಮಾನ್ಯವಾಗಿ ಶಾಲಾಕಾಲೇಜುಗಳಲ್ಲಿ ಹಾಗೂ ಸರಕಾರಿ ಕಛೇರಿಗಳಲ್ಲಿ ಹಾರಿಸುವ 3’*2’ ಅಳತೆಯ ಧ್ವಜಕ್ಕೆ 20 ಅಡಿ ಅಳತೆಯ ಕಂಬ ನೆಲದಿಂದ ಮೇಲೆ ಇರಬೇಕು. ಹೂಳುವ ಮಣ್ಣಿನ ಗಡಸುತನವನ್ನು ಹೊಂದಿಕೊಂಡು ಕನಿಷ್ಟ 2’ ಯಷ್ಟು ಕಂಬವನ್ನು ನೆಲದೊಳಗೆ ಹೂಳ ಬೇಕು.
 11. ಸರ್ಕಾರಿ ಕಛೇರಿಗಳ ಮಟ್ಟಕ್ಕೆ ತಕ್ಕಂತೆ 3’* 2 ’, 41/2 *3 ಅಥವಾ 6’*4’ ಅಳತೆಯ ಧ್ವಜಗಳನ್ನು ಉಪಯೋಗಿಸ ಬೇಕು.
 12. ರಾಷ್ಟ್ರ ಧ್ವಜದ ವಾಣಿಜ್ಯೀಕರಣ ಸಲ್ಲದು. ಅನವಶ್ಯಕವಾಗಿ ರಾಷ್ಟ್ರಧ್ವಜವನ್ನು ಜಾಹೀರಾತಿಗಾಗಿ ಬಳಸ ಬಾರದು.ತಮ್ಮ ಉಡುಪುಗಳಲ್ಲಿ ಆಭರಣಗಳಲ್ಲಿ, ಕಟ್ಟಡಗಳ ಗೋಡೆ, ಮಾಡುಗಳಲ್ಲಿ ಧ್ವಜದ ಬಣ್ಣಗಳನ್ನು ಅದೇ ಕ್ರಮಾಗತವಾಗಿ ಬಳಸ ಬಾರದು.
 13. ಪ್ಲಾಸ್ಟಿಕ್ ನ ರಾಷ್ಟ್ರ ಧ್ವಜ ಗಳನ್ನು ಪ್ರದರ್ಶನಕ್ಕಾಗಲೀ ಅಲಂಕಾರಕ್ಕಾಗಲೀ ಉಪಯೋಗಿಸಬಾರದು.
 14. ಉಪಯೋಗಿಸಿ ಹಳತಾದ ರಾಷ್ಟ್ರ ಧ್ವಜ ಗಳನ್ನು ಇತರ ಹಳೆ ಬಟ್ಟೆಗಳನ್ನು ಉಪಯೋಗಿಸುವಂತೆ ಅನ್ಯಕಾರ್ಯಗಳಿಗೆ ಉಪಯೋಗಿಸಬಾರದು. ಎಲ್ಲೆಂದರಲ್ಲಿ ಎಸೆಯ ಬಾರದು. ಉಪಯೋಗಕ್ಕೆ ಬಾರದ ಧ್ವಜಗಳನ್ನು ಸಕಲ ಗೌರವಗಳೊಂದಿಗೆ ಖಾಸಗಿಯಾಗಿ ಸುಡಬೇಕು.

  ಧ್ವಜಾರೋಹಣ ಧ್ವಜಾರೋಹಣ ವಿಧಿಯಲ್ಲಿ ಪಾಲಿಸಬೇಕಾದ ನಿಯಮಗಳು:

  1. ಸೂರ್ಯೋದಯ ಆದ ತಕ್ಷಣ ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಧ್ವಜಾರೋಹಣ ಮಾಡಬೇಕು. ಉರಿಬಿಸಿಲಿನಲ್ಲಿ ಮಾಡಬಾರದು.
  2. ಸೂರ್ಯಾಸ್ತದ ಹೊತ್ತಿಗೆ ಧ್ವಜಾವರೋಹಣ ಮಾಡಬೇಕು. ಕತ್ತಲಾದ ಮೇಲೆ ಮಾಡಬಾರದು.
  3. ಧ್ವಜವನ್ನು ಎಂದಿಗೂ ಉದ್ದೇಶ ಪೂರ್ವಕ ನೆಲಕ್ಕೆ ತಾಗಿಸಬಾರದು. ಒದ್ದೆಯಾಗಿಸ ಬಾರದು.
  4. ಧ್ವಜವನ್ನು ಹಾರಿಸುವಾಗ ಕೇಸರಿ ಬಣ್ಣವು ಮೇಲ್ಗಡೆ ಹಸಿರು ಬಣ್ಣವು ಕೆಳಗಡೆ ಬರುವಂತೆ ನೋಡಿಕೊಳ್ಳ ಬೇಕು. ಎಂದಿಗೂ ತಲೆಕೆಳಾಗದಂತೆ ಎಚ್ಚರಿಕೆ ವಹಿಸಬೇಕು.
  5. ಧ್ವಜವನ್ನು ಕಂಬದ ಮೇಲ್ತುದಿಯಲ್ಲೇ ಕಟ್ಟಿ ಹಾರಿಸಬೇಕು. ಕಟ್ಟಿದ್ದು ಸಡಿಲವಾಗಿ ಹಾರಾಡುವಾಗ ಮೇಲ್ತುದಿಯಿಂದ ಕೆಳಗೆ ಜಾರದಂತೆ ಬಿಗಿಯಾಗಿ ಕಟ್ಟಿರಬೇಕು.
  6. ಧ್ವಜವನ್ನು ಕಟ್ಟುವುದಕ್ಕೆ ನಿರ್ದಿಷ್ಟವಾದ ಖಾದಿಯ ಹಗ್ಗವನ್ನೇ ಉಪಯೋಗಿಸ ಬೇಕು. ನೈಲಾನು ಹಗ್ಗವನ್ನು ಉಪಯೋಗಿಸ ಬಾರದು
  7. ರಾಷ್ಟ್ರ ಧ್ವಜಾರೋಹಣ ಹಾಗೂ ಧ್ವಜಾವರೋಹಣ ಕಾರ್ಯಕ್ರಮದಲ್ಲಿ ಹಾಡಬೇಕಾದ ಹಾಡುಗಳನ್ನು ವಿಧಿವತ್ತಾಗಿ ನಿರ್ದಿಷ್ಟ ಸಂದರ್ಭಗಳಲ್ಲಿ ನಿರ್ದಿಷ್ಟ ಧಾಟಿಯಲ್ಲೇ ಹಾಡಬೇಕು.
  8. ರಾಷ್ಟ್ರ ಧ್ವಜಾರೋಹಣ ಹಾಗೂ ಧ್ವಜಾವರೋಹಣ ಕಾರ್ಯಕ್ರಮಗಳನ್ನು ಮೌನವಾಗಿ ಚುಟುಕಾಗಿ ನಡೆಸ ಬೇಕು. ಅನವಶ್ಯಕವಾಗಿ ದೀರ್ಘಗೊಳಿಸ ಬಾರದು. ಧ್ವಜಕ್ಷೇತ್ರದಲ್ಲಿ ಹೆಚ್ಚು ಜನ ಅತಿಥಿಗಳನ್ನು ಆಮಂತ್ರಿಸ ಬಾರದು. ಧ್ವಜ ಕ್ಷೇತ್ರದಲ್ಲಿ ದೀರ್ಘವಾದ ಭಾಷಣಗಳನ್ನು ಏರ್ಪಡಿಸ ಬಾರದು. ಕೆಲವೇ ನಿಮಿಷಗಳಲ್ಲಿ ಧ್ವಜವಂದನೆ ಮುಗಿಯಬೇಕು. ಧ್ವಜಕ್ಷೇತ್ರದಲ್ಲಿ ಸ್ವಾಗತ, ಧನ್ಯವಾದ ಇತ್ಯಾದಿ ಔಪಚಾರಿಕತೆ ಅವಶ್ಯವಿಲ್ಲ. ಇದ್ದರೂ ಚುಟುಕಾಗಿ ಮುಗಿಸಬೇಕು. ನಿರ್ದಿಷ್ಟ ಪಡಿಸಿದ ಒಂದೆರಡು ಘೋಷಣೆಗಳನ್ನು ಧ್ವಜಕ್ಷೇತ್ರ ದೊಳಗೆ ಹಾಕಬಹುದು.
  9. ರಾಷ್ಟ್ರ ಧ್ವಜಾರೋಹಣ ದಿಂದ ಧ್ವಜಾವರೋಹಣ ಮುಕ್ತಾಯವಾಗುವ ವರೆಗೂ ಧ್ವಜಕ್ಷೇತ್ರಕ್ಕೆ ಅಪಚಾರ ವಾಗದಂತೆ ಧ್ವಜರಕ್ಷಕನು ಧ್ವಜಕ್ಷೇತ್ರವನ್ನು ಕಾಯುತ್ತಿರಬೇಕು.

  ಭಾರತೀಯ ಧ್ವಜ ಸಂಹಿತೆ
  ಭಾರತ ಸರಕಾರವು ಭಾರತದ ರಾಷ್ಟ್ರ ಧ್ವಜಕ್ಕೆ ಅಪಮಾನ ಆಗುವುದನ್ನು ತಪ್ಪಿಸುವ ಹಾಗೂ ಸನ್ಮಾನ, ಗೌರವ ಕೊಡುವುದನ್ನು ಪ್ರೋತ್ಸಾಹಿಸುವ ಸಲುವಾಗಿ ಭಾರತೀಯ ಧ್ವಜಸಂಹಿತೆಯನ್ನು ಬಳಕೆಗೆ ತಂದಿದೆ. ಇದು ಭಾರತೀಯ ದಂಡ ಸಂಹಿತೆಯಷ್ಟೇ ಪ್ರಬಲವಾಗಿದೆ. ಇದರ ಪ್ರಕಾರ ಭಾರತೀಯ ರಾಷ್ಟ್ರ ಧ್ವಜಕ್ಕೆ ಅಗೌರವ ಸಲ್ಲಿಸುವುದು, ಅಪಮಾನ ಮಾಡುವುದು, ರಾಷ್ಟ್ರ ಧ್ವಜಕ್ಕೆ ಸಂಬಂಧಿಸಿದ ನಿಯಮಗಳನ್ನು ಉಲ್ಲಂಘಿಸುವುದು ಕಾನೂನು ಪ್ರಕಾರ ಶಿಕ್ಷಾರ್ಹ ಅಪರಾಧವೆಂದು ಪರಿಗಣಿಸಲಾಗುತ್ತದೆ. ಇಂತಹ ಅಪರಾಧಗಳಿಗೆ ಹಣದ ರೂಪದ ದಂಡನೆ ಅಥವಾ ಗರಿಷ್ಟ ಮೂರು ವರ್ಷಗಳವರೆಗೆ ಸೆರೆಮನೆ ವಾಸ, ಅಥವಾ ಏಕ ಕಾಲದಲ್ಲಿ ಎರಡನ್ನೂ ಅನುಭವಿಸಬೇಕಾಗಬಹುದು.
  ನಾವೆಲ್ಲ ಅದೃಷ್ಟವಶಾತ್ ಪುಣ್ಯ ಭೂಮಿಯಾದ ಈ ಭರತಭೂಮಿ ಯಲ್ಲಿ ಜನಿಸಿದ್ದೇವೆ.ಇದರ ಪೂರ್ಣ ಉಪಯೋಗ ಮಾಡಿಕೊಳ್ಳೋಣ. ನಮ್ಮ ರಾಷ್ಟ್ರವನ್ನೂ ರಾಷ್ಟ್ರ ಧ್ವಜವನ್ನೂ ಗೌರವಿಸಿ ಸನ್ಮಾನಿಸೋಣ. ಆ ಮೂಲಕ ನಮ್ಮನ್ನು ನಾವೇ ಸನ್ಮಾನಿಸಿ ಕೊಳ್ಳೋಣ. ಭಾರತಾಂಬೆಗೆ ಜಯವಾಗಲಿ. ಜೈಹಿಂದ್.

  -ಡಾ. ವಾರಿಜಾ ಏನ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss