Wednesday, June 29, 2022

Latest Posts

ಭಾರತಮಾತೆಗೆ ಅವಮಾನಿಸಿದರೆ ಸಹಿಸಲಾರೆ

ದಾವಣಗೆರೆ: ಭಾರತಮಾತೆಗೆ ಅವಮಾನಿಸಿದವರ, ಪಾಕಿಸ್ಥಾನಕ್ಕೆ ಜಿಂದಾಬಾದ್ ಎನ್ನುವವರ ನರಗಳನ್ನು ಕತ್ತರಿಸಬೇಕಾದೀತು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹರಿಹಾಯ್ದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿ, ಪಾಕಿಸ್ಥಾನ ಜಿಂದಾಬಾದ್ ಎಂಬುದಾಗಿ ಜೈಕಾರ ಹಾಕುವುದನ್ನು, ಭಾರತ ಮಾತೆಗೆ ಅವಮಾನಿಸುವುದನ್ನು ಸಹಿಸಬೇಕಾ? ಇನ್ನು ಅಂತಹವರ ನರ ಕತ್ತರಿಸಬೇಕಾಗುತ್ತದೆ. ಹುಷಾರ್ ಅಂತಾ ಎಚ್ಚರಿಸುತ್ತಿದ್ದೇನೆ. ಪಾಕಿಸ್ತಾನ ಜಿಂದಾಬಾದ್ ಅನ್ನುವವರಿಗೆ ಕಂಡಲ್ಲಿ ಗುಂಡಿಡಬೇಕು, ಗಲ್ಲಿಗೇರಿಸಬೇಕು ಎಂಬುದೇ ನಮ್ಮ ವಾದ ಎಂದರು.

ಕುಮಾರಸ್ವಾಮಿ ಇರಬಹುದು ಅಥವಾ ಬೇರೆ ಯಾರೇ ಆಗಿರಬಹುದು. ಕೋಮುವಾದ ಬಿತ್ತುವವರು, ಓಟು ಬ್ಯಾಂಕ್ ರಾಜಕಾರಣ ಮಾಡುವವರೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳ ನಾಯಕರು. ಮುಸ್ಲಿಮರನ್ನು ದೇಶದಿಂದ ಓಡಿಸುತ್ತೇವೆಂದು ಹೇಳಿದ್ದೀವಾ? ಭಾರತ ಮಾತೆಗೆ ಅವಮಾನಿಸಿದರೆ ನಾವು ಸಹಿಸಿಕೊಳ್ಳಬೇಕಾ ಎಂದು ಅವರು ಪ್ರಶ್ನಿಸಿದರು.

ವಿಧಾನಸಭೆ ಅವೇಶನವನ್ನು ಮಾ.2ರಂದು ನಡೆಸುತ್ತೇವೆ. ಅದನ್ನು ಯಾರಿಂದಲೂ ತಡೆಯುವುದಕ್ಕೆ ಸಾಧ್ಯವಿಲ್ಲ. ಸ್ವಾತಂತ್ರ್ಯ ಹೋರಾಟಗಾರ ಹೆಚ್.ಎಸ್.ದೊರೆಸ್ವಾಮಿ ವಿಚಾರವನ್ನು ಮುಂದಿಟ್ಟುಕೊಂಡು ಅಧಿವೇಶನಕ್ಕೆ ಅಡ್ಡಿಪಡಿಸುವುದು ಸೂಕ್ತವಲ್ಲ. ಯಾರೇ ಬರಲಿ, ಬಿಡಲಿ ಅಧಿವೇಶನ ನಡೆಯುವುದಂತೂ ನಿಶ್ಚಿತ. ಅಧಿವೇಶನಕ್ಕೆ ವಿರೋಧಿಸುವ ಕಾಂಗ್ರೆಸ್, ಜೆಡಿಎಸ್‌ನವರು ರೈತ ವಿರೋಧಿ, ಜನ ವಿರೋಧಿಗಳಾಗುತ್ತಾರೆ ಎಂದರು.

ಪ್ಲೇಕಾರ್ಡ್ ಆಗಬೇಡಿ ಅಷ್ಟೇ: ದೊರೆಸ್ವಾಮಿ ಹಿರಿಯರು. ಆದರೆ, ಮಾತಾಡುವಾಗ ನಾಲಿಗೆ ಹಿಡಿತದಲ್ಲಿಟ್ಟುಕೊಳ್ಳಲಿ. ದೇಶದ ಬಗ್ಗೆ ದೊರೆಸ್ವಾಮಿಗೆ ಅಭಿಮಾನವಿದ್ದರೆ, ಭಾರತ ಮಾತೆ ಮಕ್ಕಳಾಗಿದ್ದರೆ ನೀವ್ಯಾಕೆ ಪಾಕ್ ಪರ ಘೋಷಣೆ ಕೂಗಿದ್ದನ್ನು, ಭಾರತ ಮಾತೆಗೆ ಅವಮಾನಿಸಿದ್ದನ್ನು ಖಂಡಿಸಲಿಲ್ಲ? ನೀವೂ ಒಂದು ರೀತಿ ದೇವೇಗೌಡರ ಕುಟುಂಬದ ಮುಖವಾಣಿಯಂತೆ ಕೆಲಸ ಮಾಡುತ್ತಿದ್ದೀರಿ. ನೀವು ನಿಜವಾದ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರೆ, ಆಗಿನ ಹೋರಾಟದಲ್ಲಿ ಭಾಗವಹಿಸಿದ್ದರೆ ಯಾವುದೇ ಪಕ್ಷವಾಗಿದ್ದರೂ ಮಾರ್ಗದರ್ಶನ ಮಾಡಿ. ನಿಮ್ಮ ಮಾರ್ಗದರ್ಶನವನ್ನು ನಾವು ತೆಗೆದುಕೊಳ್ಳುತ್ತೇವೆ. ಜೆಡಿಎಸ್ ಪಕ್ಷದ ಮುಖವಾಣಿಯ ಪ್ಲೇಕಾರ್ಡ್ ಆಗಬೇಡಿರಷ್ಟೇ ಎಂದು ಅವರು ದೊರೆಸ್ವಾಮಿಗೆ ಕಿವಿಮಾತು ಹೇಳಿದರು.

ಕೆಲವೇ ದಿನಗಳಲ್ಲಿ ಕಾಂಗ್ರೆಸ್, ಜೆಡಿಎಸ್ ಪಕ್ಷಗಳಿಂದ ಅನೇಕ ಶಾಸಕರು ಬಿಜೆಪಿಗೆ ಬರಲಿದ್ದಾರೆ. ಇದು ಆಪರೇಷನ್ ಕಮಲ ಅಲ್ಲ. ವಿಪಕ್ಷಗಳ ಶಾಸಕರು ತಾವಾಗಿಯೇ ತಮ್ಮ ಪಕ್ಷ ತೊರೆದು, ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ.
-ಎಂ.ಪಿ.ರೇಣುಕಾಚಾರ್ಯ, ಶಾಸಕ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss