Monday, August 8, 2022

Latest Posts

ಭಾರತವನ್ನು ಬೆಚ್ಚಿಬೀಳಿಸಿದೆ ಕೊರೋನಾ ರೌದ್ರ ನರ್ತನ: ವಿಶ್ವದ ಕಠಿಣ ಲಾಕ್‌ಡೌನ್ ದೇಶಕ್ಕೆ ಅಗತ್ಯವೇ?

  • ಸುದ್ದಿ ವಿಶ್ಲೇಷಣೆ: ಪ್ರಕಾಶ್ ಇಳಂತಿಲ

ದೇಶದಲ್ಲಿ ಭಾನುವಾರ ಒಂದೇ ದಿನ ಗರಿಷ್ಠ ಅಂದರೆ 5000 ಕೋವಿಡ್-19 ಸೋಂಕು ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟಾರೆ ನೊವಲ್ ಕೊರೋನಾ ವೈರಸ್ ಪ್ರಕರಣಗಳ ಒಟ್ಟಾರೆ ಸಂಖ್ಯೆ 90 ಸಾವಿರವನ್ನು ದಾಟಿತು. ಅಂದರೆ ಕಳೆದ ಒಂದೇ ವಾರದಲ್ಲಿ 30 ಸಾವಿರ ಹೊಸಪ್ರಕರಣಗಳು ವರದಿಯಾಗಿವೆ. ಸಾವಿನ ಸಂಖ್ಯೆ 2900 ಕ್ಕೇರಿದೆ. ಅಂದರೆ ಒಂದು ವಾರದಲ್ಲಿ 800 ಸಾವು ಸಂಭವಿಸಿದೆ. ಭಾನುವಾರ ಲಾಕ್‌ಡೌನ್ 3.0 ಅಂತ್ಯಗೊಳ್ಳುತ್ತಿದೆ. ಇನ್ನು ಮುಂದೇನು? ಲಾಕ್‌ಡೌನ್ 4.0 ಹೇಗಿರಬೇಕು? ಸೋಮವಾರದಿಂದ ಆರಂಭಗೊಳ್ಳುವ 4.0 ಲಾಕ್‌ಡೌನ್ ನಿರ್ಬಂಧಗಳಲ್ಲಿ ಇನ್ನಷ್ಟು ಸಡಿಲತೆಯನ್ನು ತರುವಂತೆ ಒಂದೆಡೆ ಒತ್ತಡ ಬರುತ್ತಿದ್ದರೆ, ಲಾಕ್‌ಡೌನ್ ಬಿಗಿ ಮಾಡಬೇಕಾದ ಅಗತ್ಯದ ಬಗೆಗೂ ಅಭಿಪ್ರಾಯಗಳು ಕೇಳಿಬರುತ್ತಿವೆ.
ಕೇಂದ್ರ ಸರಕಾರ ಮೊದಲ ಎರಡು ಲಾಕ್‌ಡೌನ್‌ಗಳನ್ನು ಬಿಗಿಯಾಗಿ ಇರುವಂತೆ ನೋಡಿಕೊಳ್ಳುವ ಮೂಲಕ ದೇಶದಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುವುದನ್ನು ತಡೆಗಟ್ಟುವಲ್ಲಿ ಸಾಕಷ್ಟು ಸಫಲವಾಗಿತ್ತು. ಆದರೆ ಅನಂತರ ಲಾಕ್‌ಡೌನ್ ನಿರ್ಬಂಧಗಳನ್ನು ಸಡಿಲಗೊಳಿಸಬೇಕೆಂಬ ಬಗ್ಗೆ ವಿವಿಧ ಹಿತಾಸಕ್ತಿಗಳಿಂದ, ರಾಜ್ಯಗಳಿಂದ ಒತ್ತಡ ಬರಲಾರಂಭಿಸಿತು. ಜನರು ಕೂಡಾ ಈ ಬಿಗಿ ಲಾಕ್‌ಡೌನ್ ಸಡಿಲತೆ ಬೇಕೆಂದು ಬಯಸಲಾರಂಭಿಸಿದರು.ಇದರ ಫಲವಾಗಿ ಲಾಕ್‌ಡೌನ್ 3.0 ನ್ನು ಕೇಂದ್ರ ಸರಕಾರ ರಾಜ್ಯಗಳಿಗೆ ಬಿಟ್ಟುಕೊಟ್ಟಿತು. ಆದರೆ ಈ ಅವಯಲ್ಲಿ ಒಂದೇ ಸವನೆ ಹೊಸ ಪ್ರಕರಣಗಳು ಸಾವಿರ ಸಾವಿರ ಸಂಖ್ಯೆಯಲ್ಲಿ ಹೆಚ್ಚಲಾರಂಭಿಸಿದವು.ಇದೀಗ ಮತ್ತೆ ಜನರೇ ಬಿಗಿ ಲಾಕ್‌ಡೌನ್ ಅಗತ್ಯವಿದೆ. ಇಲ್ಲವಾದರೆ ಅಪಾಯ ಕಾದಿದೆ ಎನ್ನಲಾರಂಭಿಸಿದ್ದರೂ, ದೇಶ ಲಾಕ್‌ಡೌನ್ ಸಡಿಲತೆಯಲ್ಲಿ ಸಾಕಷ್ಟು ಮುಂದೆ ಹೋಗಿ ಆಗಿದೆ.
ಈಗ ದೇಶ ಕಠಿಣ ಲಾಕ್‌ಡೌನ್‌ನ ಅವಕಾಶದ ಆಯ್ಕೆಯನ್ನು ಹೊಂದಿದೆ. ಇದು ವಿಶ್ವದಲ್ಲೇ ಕಠಿಣ ಲಾಕ್‌ಡೌನ್ ಆಗಿರುತ್ತದೆ ಎಂದು ಕೆಲವರು ಬಣ್ಣಿಸುತ್ತಾರೆ. ಈ ಹಿಂದೆ ಕೆಲವು ವಲಯದಿಂದ ಕೆಲವು ದೇಶಗಳು ಕಟ್ಟುನಿಟ್ಟಿನ ನಿರ್ಬಂಧಗಳಿಲ್ಲದ ಲಾಕ್‌ಡೌನ್‌ನಿಂದ ಕೋವಿಡ್-19 ಸೋಂಕು ಪ್ರಕರಣಗಳನ್ನು ನಿಯಂತ್ರಿಸಲು ಶಕ್ತವಾಗಿವೆ ಎಂಬುದಾಗಿ ಕೇಳಿಬಂದಿತ್ತು. ಕಡಿಮೆ ಜನಸಂಖ್ಯೆ, ಹೆಚ್ಚಿನ ಆರೋಗ್ಯ ಮೂಲಸೌಕರ್ಯ ಹೊಂದಿರುವ ಚಿಕ್ಕಪುಟ್ಟ ಸಂಪನ್ನ ದೇಶಗಳನ್ನು ಮುಂದಿಟ್ಟುಕೊಂಡು ಇಂತಹ ವಾದ ಮಾಡಿದ್ದ ವಲಯಗಳೀಗ ಕೋವಿಡ್-19 ಹೆಚ್ಚಳವಾಗುತ್ತಿರುವಾಗ ಮತ್ತೆ ಲಾಕ್‌ಡೌನ್ ಬಿಗಿಯಾಗಿಲ್ಲದಿದ್ದುದೇ ಕಾರಣ ಎನ್ನಲಾರಂಭಿಸಿವೆ !
ಮಾ.25ರಂದು ಭಾರತ ಲಾಕ್‌ಡೌನ್ ಘೋಷಿಸಿದ ಸಂದರ್ಭzಲ್ಲೇ ನ್ಯೂಜಿಲ್ಯಾಂಡ್ ಕೂಡಾ ಲಾಕ್‌ಡೌನ್ ಘೋಷಿಸಿತ್ತಾದರೂ, ಮುಂಜಾನೆಯ ವಿಹಾರದಂತಹ ಜನರ ದೈನಂದಿನ ಚಟುವಟಿಕೆಗಳನ್ನು ಮುಂದುವರಿಸಲು ಅವಕಾಶ ನೀಡಿತ್ತು. ಆದರೆ ಸಾಮಾಜಿಕ ಅಂತರವನ್ನು ಕನಿಷ್ಠ 2 ಮೀ.ಅಂತರ ಕಾಯ್ದುಕೊಳ್ಳುವಿಕೆಯಂತಹ ಕ್ರಮಗಳನ್ನು ಕೈಗೊಂಡಿತು. ಹಾಗೆಯೇ ಸ್ವೀಡನ್ ಸಾಮಾಜಿಕ ಅಂತರವನ್ನು ಕಾಯ್ದುಕೊಂಡರೂ ಶಾಲೆಗಳು ಮತ್ತು ವ್ಯಾಪಾರ ಕ್ಷೇತ್ರಗಳು ತೆರೆಯಲು ಅವಕಾಶ ನೀಡಿತ್ತು ಎಂದು ಈ ವಲಯಗಳು ಬೊಟ್ಟು ಮಾಡಿದ್ದವು. ಆದರೆ ಈ ಮೇಲಿನ ದೇಶಗಳಲ್ಲಿನ ಸಾಮಾಜಿಕ , ಸಾರ್ವಜನಿಕ ಬದುಕಿನ ರೀತಿ ನೀತಿ ಹಾಗೂ ದೇಶದಲ್ಲಿನ ಬದುಕಿನ ಶಿಸ್ತು -ವ್ಯವಸ್ಥೆಗೂ ಭಾರತಕ್ಕೂ ವ್ಯತ್ಯಾಸವಿದೆ ಎಂಬುದನ್ನು ಈ ವಲಯಗಳು ಮರೆತವು. ಭಾರತದಲ್ಲಿ ಸ್ವಾತಂತ್ರ್ಯದ ಹೆಸರಿನಲ್ಲಿ ಜನ ಸ್ವೇಚ್ಛೆಯಾಗಿ ಬದುಕುತ್ತಿದ್ದರೆ, ಭೌಗೋಳಿಕ, ಜನಸಂಖ್ಯೆ, ಸಾಮಾಜಿಕ ವ್ಯವಸ್ಥೆ, ಸಾರ್ವಜನಿಕ ನಿಯಮಗಳ ಕಟ್ಟುನಿಟ್ಟಿನಂತಹ ವಿಷಯಗಳಲ್ಲಿ ಭಾರತಕ್ಕೂ ಈ ದೇಶಗಳಿಗೂ ಹೋಲಿಸಲು ಆಗ ಸ್ಥಿತಿ. ಅತ್ತ ಅಮೆರಿಕದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ಹೋದ ಕಾರಣ ಸೋಂಕಿನ ಪ್ರಕರಣಗಳು 35 ಪಟ್ಟು ಹೆಚ್ಚಾಗಲು ಕಾರಣವಾಯಿತು ಎಂಬುದನ್ನು ನಾವು ನೆನಪಿನಲ್ಲಿಡಬೇಕು.
ಆದರೀಗ ದೇಶದಲ್ಲಿ ಸೋಂಕು ಪ್ರಕರಣಗಳು ಮತ್ತು ಸಾವಿನ ಸಂಖ್ಯೆ ಹಚ್ಚಳ ಬಗ್ಗೆ ಕಳವಳ ವ್ಯಕ್ತವಾಗಲಾರಂಭಿಸಿದೆ. ಜೊತೆಗೆ ವಲಸಿಗ ಕಾರ್ಮಿಕರು ದೇಶದ ವಿವಿಧ ರಾಜ್ಯಗಳಲ್ಲಿ ಹಂಚಿಹೋಗಿರುವ ಬಹುದೊಡ್ಡ ಸವಾಲು ಕೂಡಾ ಭಾರತದ ಪಾಲಿಗೆ ಇದೆ ಎಂಬುದನ್ನು ಈ ವಲಯಗಳು ಮರೆತಿದ್ದವು. ಇದೀಗ ವಲಸೆ ಕಾರ್ಮಿಕರ ಕೆಲವು ವಾಹನ ಅವಘಡ ಪ್ರಕರಣಗಳನ್ನು ಕೋವಿಡ್-19 ರ ಬಿಕ್ಕಟ್ಟಿಗೆ ಜೋಡಿಸುವ ಯತ್ನಗಳೂ ನಡೆಯುತ್ತಿವೆ. ಭಾರತದಂತಹ ಬಹುವಿಶಾಲ, ಲಕ್ಷಾಂತರ ವಲಸೆ ಕಾರ್ಮಿಕರನ್ನು ಹೊಂದಿರುವ ದೇಶದಲ್ಲಿ ಹಸಿವಿನಿಂದ ಸಾವು ಸಂಭವಿಸಿದ ಪ್ರಕರಣಗಳು ಅತಿಕನಿಷ್ಠವಾಗಿದ್ದರೂ , ವಲಸೆ ಕಾರ್ಮಿಕರಿಗೆ ತಮ್ಮ ತಮ್ಮ ಊರು ಸೇರಲು ವಿಶೇಷ ಶ್ರಮಿಕ್ ರೈಲು ವ್ಯವಸ್ಥೆಗಳನ್ನು ಮಾಡಿದ್ದರೂ ಹಿತಾಸಕ್ತಿಗಳು ಗೊಂದಲ ಸೃಷ್ಟಿಸಲು ಯತ್ನಿಸುತ್ತಿವೆ.ರಾಜಕೀಯ ಶಕ್ತಿಗಳ ಹಿತಾಸಕ್ತಿ ಈ ವಲಸಿಗ ಕಾರ್ಮಿಕರನ್ನು ಗೊಂದಲಕ್ಕೀಡು ಮಾಡುತ್ತಿರುವ ವಿದ್ಯಮಾನಗಳು , ತಬ್ಲಿಘಿಗಳು ಸೇರಿದಂತೆ ಮತೀಯ ಹಿತಾಸಕ್ತಿಗಳ ವಿಕೃತಿಗಳು ಇವೆಲ್ಲದರ ನಡುವೆ ಕೋವಿಡ್-೧೯ರ ವಿರುದ್ಧ ಯಾವುದೇ ತಾರತಮ್ಯ ಇಲ್ಲದೆ, ಭಾರತ ಅತ್ಯಂತ ಸಂಯಮದೊಂದಿಗೆ ಸವಾಲನ್ನು ನಿಭಾಯಿಸುತ್ತಿರುವ ಬೆಳವಣಿಗೆ ಜಗತ್ತನ್ನು ನಿಬ್ಬೆರಗಾಗುವಂತೆ ಮಾಡುತ್ತಿದೆ.
ಈ ಸ್ಥಿತಿಯಲ್ಲಿ ದೇಶಕ್ಕೆ ಇನ್ನು ಕಠಿಣ ಲಾಕ್‌ಡೌನ್ ಅಗತ್ಯವಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದ್ದರೂ ಅದೀಗ ಕಾರ್ಯಸಾಧ್ಯವೇ ಎಂಬ ಪ್ರಶ್ನೆ ಉದ್ಭವವಾಗಿದೆ.ಪಟ್ಟಭದ್ರ ಹಿತಾಸಕ್ತಿಗಳು, ಗೊಂದಲ ಸೃಷ್ಟಿಸುತ್ತಿರುವ ರಾಜಕೀಯ ಹಿತಾಸಕ್ತಿಗಳ ನಡುವೆ ಈಗ ದೇಶದಲ್ಲಿ ಸಾಮಾಜಿಕ ಶಿಸ್ತು ಪಾಲನೆಯ ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ. ಸಾರ್ವಜನಿಕ ಉಗುಳುವಿಕೆಗೆ ತಡೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಮಾಸ್ಕ್ ಕಡ್ಡಾಯ , ಸಾರ್ವಜನಿಕ ಗುಂಪು ಸೇರುವುದಕ್ಕೆ ನಿರ್ಬಂಧದಂತಹ ಕ್ರಮಗಳ ಬಗ್ಗೆ ಅರಿವು ಮೂಡಿಸುವಲ್ಲಿ ಸರಕಾರಕ್ಕಿಂತ ರಾಜಕೀಯ ಪಕ್ಷಗಳು, ಖಾಸಗಿ ಸಂಘಸಂಸ್ಥೆಗಳು, ಜನರ ಸ್ವಂತ ಕರ್ತವ್ಯ ಪ್ರಜ್ಞೆ -ಹೊಣೆಗಾರಿಕೆ, ಸಂಯಮ ತುಂಬ ಪರಿಣಾಮಕಾರಿ.
ಆದರೆ ಇದರ ಆರಂಭ ಎಲ್ಲಿಂದ ಎಂಬುದೇ ಈಗ ಪ್ರಶ್ನೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss