ಚಿಕ್ಕಮಗಳೂರು: ಈ ಬಾರಿಯ ಕೇಂದ್ರ ಬಜೆಟ್ನಲ್ಲಿ ಘೋಷಿಸಿರುವ ಭಾರತೀಯ ಪರಂಪರೆ ಮತ್ತು ಸಂರಕ್ಷಣಾ ವಿಶ್ವವಿದ್ಯಾನಿಲಯವನ್ನು ಕರ್ನಾಟಕದ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಆರಂಭಿಸಬೇಕೆಂದು ಕನ್ನಡ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಮಂಗಳವಾರ ನವದೆಹಲಿಯಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ ಸಚಿವರು, ಮೈಸೂರಿನಲ್ಲಿ ಈ ವಿವಿಯನ್ನು ಆರಂಭಿಸಿದರೆ ರಾಜ್ಯ ಸರ್ಕಾರ ಜಾಗ ಸೇರಿದಂತೆ ಎಲ್ಲಾ ರೀತಿಯ ಮೂಲಭೂತ ಸೌಕರ್ಯಗಳನ್ನು ನೀಡಲಿದೆ ಎಂದು ಆಶ್ವಾಸನೆ ನೀಡಿದ್ದಾರೆ.
ಮೈಸೂರು ಸಾಂಸ್ಕೃತಿಕ ನಗರವಾಗಿದ್ದು, ವಿಶ್ವ ಪಾರಪಂರಿಕ ತಾಣಗಳಲ್ಲಿ ಒಂದಾಗಿದೆ. ಪ್ರತಿ ದಿನ ಇಲ್ಲಿನ ಅರಮನೆ, ಚಾಮುಂಡಿ ಬೆಟ್ಟ ಸೇರಿದಂತೆ ಸುತ್ತಮುತ್ತಲಿನ ತಾಣಗಳಿಗೆ ದೇಶ-ವಿದೇಶಗಳಿಂದ ಸಾವಿರಾರು ಜನರು ಆಗಮಿಸುತ್ತಾರೆ. ಈ ವಿಶ್ವವಿದ್ಯಾನಿಲಯವನ್ನು ತೆರೆಯುವುದರಿಂದ ಪ್ರವಾಸೋದ್ಯಮ ಕ್ಷೇತ್ರಕ್ಕೂ ಹೆಚ್ಚಿನ ಅನುಕೂಲವಾಗಲಿದೆ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.
ಮೈಸೂರು ವಿಶ್ವಪ್ರಸಿದ್ಧ ಮೈಸೂರು ದಾಸರಾವನ್ನು ಆಯೋಜಿಸುತ್ತದೆ, ಅದು ಭಾರತದ ಸಂಸ್ಕೃ ತಿ ಮತ್ತು ಚೈತನ್ಯವನ್ನು ಪ್ರತಿಬಿಂಬಿಸುತ್ತದೆ.ಇಲ್ಲಿನ ಪಾರಂಪರಿಕ ಕಟ್ಟಡಗಳು, ಪಾರಂಪರಿಕ ಸಂರಕ್ಷಣಾ ಪ್ರದೇಶಗಳಲ್ಲಿ ನಡೆಸಿರುವ ಸಂಶೋಧನೆಗಳು ಭಾರತದ ಪರಂಪರೆ ಮತ್ತು ಸಂಸ್ಕೃತಿಯನ್ನು ಪೋಷಿಸಿ ಬೆಳೆಸಲು ಕಾರಣವಾಗಿದೆ. ಈ ನಗರದಲ್ಲಿ ವಿವಿ ಸ್ಥಾಪನೆ ಮಾಡಲು ಸಾಕಷ್ಟು ಭೂಮಿ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.
ಈ ಸಂಬಂಧ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರೊಂದಿಗೆ ಚರ್ಚೆಸಿ ಸೂಕ್ತ ಕ್ರಮಕೈಗೊಳ್ಳಲಾಗುವುದು. ಕರ್ನಾಟಕದಲ್ಲಿ ವಿವಿಯನ್ನು ಪ್ರಾರಂಭಿಸುವ ಬಗ್ಗೆ ನಾನೂ ಕೂಡ ಸಕಾರಾತ್ಮಕವಾಗಿ ಇದ್ದೇನೆ ಎಂದು ನಿರ್ಮಲಾ ಸೀತಾರಾಮ್ ಆಶ್ವಾಸನೆ ನೀಡಿದ್ದಾರೆ ಎಂದು ಸಿ.ಟಿ.ರವಿ ತಿಳಿಸಿದ್ದಾರೆ.