ಹೊಸದಿಲ್ಲಿ: ಭಾರತ ಮತ್ತು ಅಫ್ಘಾನಿಸ್ಥಾನದ ಜನರ ನಡುವಿನ ಸಾಂಪ್ರದಾಯಿಕ ಮತ್ತು ಸ್ನೇಹಪರ ಸಂಬಂಧದಲ್ಲಿ ಒಡಕು ಸೃಷ್ಟಿಸುವ ಇಸ್ಲಾಮಾಬಾದ್ನ ಪ್ರಯತ್ನ ಎಂದಿಗೂ ಯಶಸ್ವಿಯಾಗದು ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ(ಎಂಇಎ)ವು ಪಾಕಿಸ್ಥಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.
ವಿಶ್ವ ಸಂಸ್ಥೆಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡ ಭಯೋತ್ಪಾದನೆ ಕುರಿತು ವರದಿಯನ್ನು ಭಾರತ ವಿರೂಪಗೊಳಿಸಿದೆ ಎಂದು ಪಾಕಿಸ್ಥಾನ ಆರೋಪಿಸಿದ ಹಿನ್ನೆಲೆ ಸಚಿವಾಲಯದಿಂದ ಈ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಫ್ಘನ್ ಶಾಂತಿ ಪ್ರಕ್ರಿಯೆಗಳಲ್ಲಿ ತೊಡಕು ಸೃಷ್ಟಿಸುವ ಉದ್ದೇಶವನ್ನು ಭಾರತ ಹೊಂದಿದೆ ಎಂದು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯ ಆರೋಪಿಸಿತ್ತು. ಕಳೆದ ವರ್ಷ ಪಾಕಿಸ್ಥಾನ ಇನ್ನೂ ೩೦,೦೦೦ ರಿಂದ ೪೦,೦೦೦ ಭಯೋತ್ಪಾದಕರನ್ನು ಪೋಷಿಸುತ್ತಿದೆ ಎಂದು ಸ್ವತಃ ಅದರ ಪ್ರಧಾನಿ ಇಮ್ರಾನ್ ಖಾನ್ ತಿಳಿಸಿದ್ದನ್ನು ಪಾಕ್ನ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪುನರ್ಮನನ ಮಾಡಿಕೊಳ್ಳಲಿ. ಇತರ ದೇಶಗಳ ಮೇಲೆ ಭಯೋತ್ಪಾದಕ ದಾಳಿ ನಡೆಸಲು ಭಯೋತ್ಪಾದಕರು ಪಾಕ್ನ್ನು ಬಳಸಿಕೊಂಡಿದ್ದನ್ನು ಆ ದೇಶದ ನಾಯಕತ್ವವೇ ಈ ಹಿಂದೆ ತಿಳಿಸಿರುವುದು ದಾಖಲೆಯಲ್ಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಅಧಿಕೃತ ವಕ್ತಾರ ಅನುರಾಗ್ ಶ್ರೀವಾಸ್ಥವ್ ತರಾಟೆ ತೆಗೆದುಕೊಂಡಿದ್ದಾರೆ. ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯ ವಿಶ್ಲೇಷಣಾತ್ಮಕ ಬೆಂಬಲ ಮತ್ತು ನಿರ್ಬಂಧಗಳ ಮೇಲ್ವಿಚಾರಣಾ ತಂಡವು ಖಾನ್ ಈಗಾಗಲೇ ಒಪ್ಪಿಕೊಂಡಿದ್ದನ್ನಷ್ಟೇ ಪುನರುಚ್ಚರಿಸಿದೆ. ಈ ವರದಿಯನ್ನು ಅಲ್ಲಗಳೆಯುವ ಬದಲಿಗೆ, ಪಾಕಿಸ್ಥಾನ ಇದನ್ನು ಒಪ್ಪಿಕೊಂಡು ಭಯೋತ್ಪಾದನೆಗೆ ಯಾವುದೇ ಬೆಂಬಲ ನೀಡುವುದಕ್ಕೆ ಅಂತ್ಯ ಹಾಡಬೇಕು ಎಂದರು.