ಭಾರತ -ಚೀನಾ ಗಡಿ ಬಿಕ್ಕಟ್ಟಿನಲ್ಲಿದೆ ಕ್ಸಿ ಜಿನ್‌ಪಿಂಗ್ ಅಳಿವು ಉಳಿವಿನ ಸಮರ!

0
269

ಸುದ್ದಿ ವಿಶ್ಲೇಷಣೆ

ಬೀಜಿಂಗ್:ಪ್ರಕೃತ ಲಡಾಖಿನಲ್ಲಿ ಉಂಟಾಗಿರುವ ಚೀನಾ-ಭಾರತ ಗಡಿ ಬಿಕ್ಕಟ್ಟು ಒಂದು ರಾಜಕೀಯ , ಸೇನಾ ಅಥವಾ ಆರ್ಥಿಕ ಸಮರವಲ್ಲ, ಬದಲಿಗೆ ಇದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಅಳಿವು ಉಳಿವಿನ ಸಮರವೆನಿಸಿದೆ.ಈ ಕಾರಣಕ್ಕಾಗಿಯೇ ಇಲ್ಲಿ ಯಾವುದೇ ನಿಯಮಗಳು ಅಥವಾ ಒಪ್ಪಂದಗಳಿಗೆ ಬದ್ಧತೆ ನಿರೀಕ್ಷಿಸುವ ಸ್ಥಿತಿಯಿಲ್ಲ. ಕ್ಸಿ ತನ್ನ ಜನರು, ಉದ್ಯಮ, ಆರ್ಥಿಕತೆಯ ಬಗೆಗೇ ತಲೆಕೆಡಿಸಿಕೊಂಡವರಲ್ಲ.ಅವರಿನ್ನು ಜಾಗತಿಕ ಒಪ್ಪಂದಗಳನ್ನು ಗೌರವಿಸುವುದನ್ನು ನಿರೀಕ್ಷಿಸುವುದಾದರೂ ಎಂತು?ಕೊರೋನಾದಲ್ಲಿ ಚೀನಾದಲ್ಲಿ ೮೦ಸಾವಿರ ಜನರು ಸತ್ತಿರುವುದಾಗಿ ಕ್ಸಿ ಸರಕಾರ ಆರಂಭದಲ್ಲಿ ಘೋಷಿಸಿತು.ಆದರೆ ಕೊರೋನಾ ಸಾಂಕ್ರಾಮಿಕ ಶುರುವಾದಂದಿನಿಂದ ೧೪ಮಿಲಿಯ ಸಿಮ್ ಕಾರ್ಡ್‌ಗಳು ಮಿಸ್ ಆಗಿರುವ ಬಗ್ಗೆ ಚೀನಾ ಕಡೆಯಿಂದ ಯಾವುದೇ ತೃಪ್ತಿಕರ ಉತ್ತರ ಲಭಿಸುತ್ತಿಲ್ಲ ಎಂಬುದು ಗಮನಾರ್ಹ.
ಇದಲ್ಲದೆ, ಚೀನಾದಲ್ಲಿ ೧೦೦ಮಿಲಿಯ ವಲಸೆ ಕಾರ್ಮಿಕರು ಸಾಕಷ್ಟು ಆಹಾರ ಪಡೆಯಲಾಗದೆ ತತ್ತರಿಸಿಹೋಗಿದ್ದಾರೆ. ಚೀನಾದ ನಿರುದ್ಯೋಗ ಸಮಸ್ಯೆ ಶೇ.೬ ಎಂಬುದಾಗಿ ಅತಿದೊಡ್ಡ ಹಸಿ ಸುಳ್ಳನ್ನು ಚೀನಾ ಹೇಳುತ್ತಿದೆ. ಆದರೆ ಚೀನಾದ ಚಿಂತನ ಚಿಲುಮೆ ಹೇಳುವಂತೆ ಅಲ್ಲಿ ನಿರುದ್ಯೋಗ ಪ್ರಮಾಣ ಶೇ.೨೦ಕ್ಕಿಂತಲೂ ಹೆಚ್ಚು ! ಈ ವರದಿ ತಯಾರಿಸಿದ ಚೀನೀ ತಜ್ಞರ ತಂಡವನ್ನು ತರಾಟೆಗೆತ್ತಿಕೊಂಡ ಕ್ಸಿ ಆಡಳಿತವು ಆ ವರದಿಯನ್ನೇ ಕಸದ ಬುಟ್ಟಿಗೆಸೆಯಿತು.ಉದ್ಯಮ ರಂಗದಲ್ಲಿ ಕ್ಸಿ ಅವರು ನೀಡಿದ್ದ ಗುರಿ ೯ಮಿಲಿಯ ಉದ್ಯೋಗ ಮತ್ತು ಶೇ.೪-೫ರ ಜಿಡಿಪಿ ಆಗಿತ್ತಾದರೂ ಚೀನಾದಲ್ಲಿ ಕೈಗಾರಿಕೆ ಮತ್ತು ಉದ್ಯಮರಂಗದ ಪತನ ಗಂಭೀರವಾಗಿದೆ.
ಕೊರೋನಾ ಬಿಕ್ಕಟ್ಟು-ಲಾಕ್‌ಡೌನ್‌ನಿಂದಾಗಿ ಬೀಜಿಂಗ್‌ಗೆ ಹೋಗುವ ಮತ್ತು ಬರುವ ೧೨೦೦ವಿಮಾನಗಳನ್ನು ರದ್ದುಪಡಿಸಲಾಗಿದೆ.ಚೀನೀ ಜನರಲ್ಲಿ ಅಸಂತೃಪ್ತಿ ಮತ್ತು ಹತಾಶೆ ಎಷ್ಟರ ಮಟ್ಟಿಗಿದೆ ಎಂದರೆ ಯಾವುದೇ ಕ್ಷಣದಲ್ಲಿ ಅದು ಸೋಟಿಸುವಷ್ಟು ಕುದಿಬಿಂದುವಿನಲ್ಲಿದೆ.ಸ್ವತಃ ಚೀನಾ ಕಮ್ಯುನಿಸ್ಟ್ ಪಾರ್ಟಿಯ ಶಕ್ತಿ ಕೇಂದ್ರದಲ್ಲೇ ಕೋವಿಡ್-೧೯ ನಿರ್ವಹಣೆ ಮತ್ತು ಜಾಗತಿಕ ವ್ಯವಹಾರಗಳಲ್ಲಿ ಕ್ಸಿಯ ಜಾಣ್ಮೆಯ ಕೊರತೆ ಮತ್ತು ನಿರ್ಲಕ್ಷ್ಯದ ಬಗ್ಗೆ ಅತೃಪ್ತಿ ಮಡುಗಟ್ಟಿದೆ.ಕ್ಸಿ ಅವರ ಆಪ್ತ ಮತ್ತು ಬೀಜಿಂಗ್‌ನ ಪಕ್ಷ ಕಾರ್ಯದರ್ಶಿ ಕೈ ಖಿ ಅವರನ್ನು ವಜಾಗೊಳಿಸಲು ಒತ್ತಡ ಹೆಚ್ಚುತ್ತಿರುವುದಾಗಿ ಮೂಲಗಳು ಹೇಳುತ್ತವೆ.
ಕ್ಸಿ ಅವರು ಅನೇಕ ಪ್ರಾಂತೀಯ ಸರಕಾರಗಳ ವಿರುದ್ಧ ಕೈಗೊಂಡ ಕ್ರಮಗಳು ಚೀನಾದಲ್ಲಿನ ಆಂತರಿಕ ಪರಿಸ್ಥಿತಿ ಹೊರಗಡೆಗೆ ಕಂಡಷ್ಟು ಸಹಜವಾಗಿಲ್ಲ ಎಂಬುದನ್ನು ಸೂಚಿಸಿವೆ.ಅಲ್ಲಿ ಕೇಂದ್ರೀಯ ಪ್ರಾಂತದ ಇಲಾಖೆಗಳ ನಡುವೆ ಮತ್ತು ಕೇಂದ್ರ ಮತ್ತು ಇತರ ಪ್ರಾಂತಗಳ ನಡುವೆ ತೀವ್ರ ತಿಕ್ಕಾಟಗಳು ಉಂಟಾಗಿದ್ದುದು ಇದಕ್ಕೆ ಕಾರಣವಾಗಿತ್ತು.ಹುಬೈ ಮತ್ತು ಜಿಯಾಂಕ್ಸಿ ಪ್ರಾಂತಗಳ ನಡುವಣ ಗಡಿ ಗಲಭೆ ಹಿಂದೆ ರಾಜಕೀಯ ಭಿನ್ನಮತೀಯರು, ಸ್ಥಳೀಯ ಅಕಾರಿಗಳ ತಿಕ್ಕಾಟ, ಆಹಾರ ಬಿಕ್ಕಟ್ಟು, ಕಾರ್ಮಿಕರ ವಿವಾದ, ಹೂಡಿಕೆ ವಂಚನೆಗಳು, ಪರಿಸರ ವಿವಾದಗಳಂತಹ ಸಂಕೀರ್ಣ ಆಯಾಮಗಳನ್ನು ಹೊಂದಿದ್ದು, ಇದು ಇತರ ಪ್ರಾಂತಗಳಿಗೂ ಹಬ್ಬುವ ಬಗ್ಗೆ ಕ್ಸಿ ಆಡಳಿತದಲ್ಲಿ ತೀವ್ರ ಚಿಂತೆ ವ್ಯಕ್ತವಾಗಿದ್ದುದು ಗಮನಾರ್ಹ.
ಈ ಹಿನ್ನೆಲೆಯಲ್ಲೇ ಅಲ್ಲಿನ ಆಡಳಿತ ಪಕ್ಷದ ಕೇಂದ್ರೀಯ ರಾಜಕೀಯ ಮತ್ತು ಕಾನೂನು ವ್ಯವಹಾರಗಳ ಆಯೋಗದ ಮುಖ್ಯಸ್ಥ ಗುವೋ ಷೆಂಗ್ಕುನ್ ಅವರು ಪಕ್ಷದ ಪ್ರಾಂತೀಯ ಘಟಕಗಳಿಗೆ ಅಸ್ಥಿರತೆಯ ಅಪಾಯದ ಬಗ್ಗೆ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ.ಪ್ರಾಂತೀಯ ತಿಕ್ಕಾಟಗಳು ಕ್ಸಿ ಅವರ ಸ್ಥಾನಕ್ಕೆ ನೇರ ಬೆದರಿಕೆ ಒಡ್ಡಲಾರದಾದರೂ ದೇಶದ ಏಕತೆಗೆ ಉತ್ತಮವಾಗಿಲ್ಲ ಎಂಬುದಾಗಿ ಹಾಂಕಾಂಗ್‌ನ ಚೀನೀ ವಿಶ್ವವಿದ್ಯಾಲಯದ ವಿಲ್ಲಿ ಲಾಮ್ ಅವರು ಬೊಟ್ಟು ಮಾಡುತ್ತಾರೆ.
ಕ್ಸಿ ಹತಾಶೆ ಇಷ್ಟಕ್ಕೇ ಮುಗಿಯುವುದಿಲ್ಲ. ಭಾರತವು ಮೋದಿ ನಾಯಕತ್ವದಡಿ ಪ್ರಾದೇಶಿಕ ಮತ್ತು ಜಾಗತಿಕ ಮಟ್ಟದಲ್ಲಿ ವಿವಾದಾತೀತ ನಾಯಕನಾಗಿ ಮೂಡಿಬರುತ್ತಿರುವುದು ಕ್ಸಿ ಪಾಲಿಗೆ ಬಹುದೊಡ್ಡ ಆಪತ್ತು.ಜಿ೭ಕ್ಕೆ ಸೇರುವಂತೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಧಾನಿ ಮೋದಿಯವರಿಗೆ ಸ್ವತಃ ಆಹ್ವಾನಿಸಿದ್ದು, ಜಿ-೭ನ್ನು ಭಾರತವನ್ನೊಳಗೊಂಡಂತೆ ಜಿ-೧೧ ಅಥವಾ ಜಿ-೧೨ಕ್ಕೆ ವಿಸ್ತರಿಸಬೇಕೆಂಬುದಾಗಿ ಟ್ರಂಪ್ ಪ್ರಸ್ತಾವಿಸಿರುವುದು, ಜಾಗತಿಕ ಪೂರೈಕೆ ವ್ಯವಸ್ಥೆಯ ಪುನಾರಚನೆ ಕುರಿತಂತೆ ಅಮೆರಿಕದ ರಾಜ್ಯಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೋ ಅವರು ಭಾರತೀಯ ವಿದೇಶಾಂಗ ಸಚಿವರ ಜೊತೆ ಚರ್ಚಿಸಿದ್ದು ಚೀನಾದ ಪಾಲಿಗೆ ನುಂಗಲಾರದ ತುತ್ತಾಗಿತ್ತು. ಯಾಕೆಂದರೆ ಜಾಗತಿಕ ಪೂರೈಕೆ ಜಾಲದ ಶೇ.೭೫ರಷ್ಟು ನಿಯಂತ್ರಣ ಚೀನಾದ ಹಿಡಿತದಲ್ಲಿರುವುದನ್ನು ಗಮನದಲ್ಲಿಟ್ಟುಕೊಂಡು ಟ್ರಂಪ್ ಆಡಳಿತ ಇಂತಹ ಒಂದು ಪ್ರಸ್ತಾವನೆ ಮಾಡಿದೆ ಎಂಬುದು ಚೀನಾಕ್ಕೆ ಸ್ಪಷ್ಟವಿದೆ. ಈ ನಿಟ್ಟಿನಲ್ಲೇ ಚೀನಾದ ಪೂರೈಕೆ ಜಾಲವನ್ನು ಶೇ.೪೦ಕ್ಕಿಂತ ಕೆಳಕ್ಕೆ ತರಬೇಕೆಂದು ಟ್ರಂಪ್ ಆಡಳಿತ ಬಯಸಿದೆ.ಮಾಲ್ಡೀವ್ಸ್‌ನಲ್ಲಿ ಭಾರತ ಮಿಲಿಯಾಂತರ ಡಾ.ವ್ಯಯಿಸುವ ಮೂಲಕ ಚೀನಾಕ್ಕೆ ಮಾಲ್ಡೀವ್ಸ್‌ನಲ್ಲಿ ರಾಜಕೀಯ ಹಸ್ತಕ್ಷೇಪ ಮಾಡಲು ಅಸಾಧ್ಯವಾಗಿರುವುದು ಚೀನಾದ ಆತಂಕವನ್ನು ಹೆಚ್ಚಿಸಿದೆ. ಇತ್ತೀಚೆಗೆ ನಡೆದ ಇಸ್ಲಾಮಿಕ್ ದೇಶಗಳ ಸಭೆಯಲ್ಲಿ ಪಾಕಿಸ್ಥಾನ ಭಾರತದ ವಿರುದ್ಧ ಧ್ವನಿ ಎತ್ತಿದರೂ ಮಾಲ್ಡೀವ್ಸ್ ಮತ್ತು ಇತರ ನೆರೆಯ ದೇಶಗಳು ಭಾರತವನ್ನೇ ಬೆಂಬಲಿಸಿದ್ದವು.
ಇದಕ್ಕಾಗಿಯೇ ಚೀನಾ , ಭಾರತ ನೆರೆಯ ದೇಶಗಳ ಪಾಲಿಗೆ ವಿಶ್ವಾಸಾರ್ಹ ಮಿತ್ರನಲ್ಲ ಎಂಬುದಾಗಿ ವಿವಿಧ ದೇಶಗಳ ತಲೆಕೆಡಿಸಲು ಹುನ್ನಾರ ನಡೆಸುತ್ತಿರುವುದು. ಇತ್ತೀಚೆಗೆ ನೇಪಾಳದ ಆಳುವ ಕಮ್ಯುನಿಸ್ಟ್ ನಾಯಕತ್ವವನ್ನು ತನ್ನ ಬಲೆಗೆ ಕೆಡವಿಕೊಂಡ ಚೀನಾ, ನೇಪಾಳ ಭಾರತೀಯ ಭೂಭಾಗವನ್ನು ತನ್ನದೆಂದು ಹೇಳಿಕೊಂಡು ಹೊಸ ನಕ್ಷೆ ರಚಿಸಿರುವುದು ಇದಕ್ಕೆ ಒಂದು ನಿದರ್ಶನ ಮಾತ್ರ. ನೇಪಾಳದಲ್ಲಿ ವಿವಿಧ ಕಮ್ಯುನಿಸ್ಟ್ ಪಕ್ಷಗಳನ್ನು ತನ್ನತ್ತ ಸೆಳೆದುಕೊಂಡು ಭಾರತದ ವಿರುದ್ಧ ಚೀನಾ ಎತ್ತಿಕಟ್ಟಲೆತ್ನಿಸಿದೆ.ಡೋಕ್ಲಾಂ ಬಿಕ್ಕಟ್ಟಿನ ವೇಳೆ ಭೂತಾನ್‌ನನ್ನು ಕೂಡಾ ದಾರಿತಪ್ಪಿಸಲು ಮತ್ತು ಶ್ರೀಲಂಕಾವನ್ನು ಭಾರತದ ವಿರುದ್ಧ ಎತ್ತಿಕಟ್ಟಲು ಚೀನಾ ಯತ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

LEAVE A REPLY

Please enter your comment!
Please enter your name here