Wednesday, August 10, 2022

Latest Posts

ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ವಿಧಿವಶ

ಹೊಸದಿಲ್ಲಿ: ಕಳೆದ ಸುಮಾರು 20 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸೋಮವಾರ ಸಂಜೆ ವಿಧಿವಶರಾಗಿದ್ದಾರೆ.
ಈ ಕುರಿತಂತೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಯವರ ಪುತ್ರ ಅಬಿಜಿತ್ ಮುಖರ್ಜಿ ಟ್ವಿಟ್ ಮಾಡಿದ್ದು, ನಮ್ಮ ತಂದೆಯವರು ಚಿಕಿತ್ಸೆಗೆ ಸ್ಪಂದಿಸದೇ ಇದೀಗ ದೆಹಲಿಯ ಸೇನಾ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂಬುದಾಗಿ ತಿಳಿಸಿದ್ದಾರೆ.

84 ವರ್ಷದ ಮುಖರ್ಜಿ ಅವರು ಕಳೆದ ಹಲವು ದಿನಗಳಿಂದ ಆಳವಾದ ಕೋಮಾದಲ್ಲಿದ್ದು, ವೆಂಟಿಲೇಟರ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದರು .
ಮೆದುಳು ಶಸ್ತ್ರಚಿಕಿತ್ಸೆಗಾಗಿ ಆಗಸ್ಟ್ 10 ರಂದು ದೆಹಲಿ ಆರ್ಮಿ ಆಸ್ಪತ್ರೆಗೆ ದಾಖಲಿಸಲಾಗಿತ್ತು , ಶಸ್ತ್ರಚಿಕಿತ್ಸೆಯ ನಂತರ, ಅವರಿಗೆ ಶ್ವಾಸಕೋಶದ ಸೋಂಕು ಪತ್ತೆಯಾಗಿತ್ತು. ಮಿದುಳು ಶಸ್ತ್ರ ಚಿಕಿತ್ಸೆ ಮಾಡುವ ಮುನ್ನ ನಡೆಸಲಾಗಿದ್ದ ಕೊರೋನಾ ಪರೀಕ್ಷೆಯಲ್ಲಿ ಅವರಿಗೆ ಪಾಸಿಟಿವ್ ಬಂದಿತ್ತು.

1935 ಡಿಸೆಂಬರ್ 11 ರಂದು ಜನಿಸಿದ್ದ ಪ್ರಣಬ್ ಮುಖರ್ಜಿ ಭಾರತೀಯ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾಗಿದ್ದರು. ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯಲ್ಲಿ ಕಿಂಕರ ಮುಖರ್ಜಿ ರಾಜಲಕ್ಷ್ಮಿ ದಂಪತಿಯ ಜನಿಸಿದ ಅವರು ಕಲ್ಕತ್ತಾ ವಿಶ್ವವಿದ್ಯಾಲಯದಲ್ಲಿ ಬಿ, ಎಂಎ ಎಲ್.ಎಲ್.ಬಿ. ಪದವಿ ಪಡೆದಿದ್ದರು.1957 ರ ಜುಲೈ 3 ರಂದು ಸುವ್ರಾ ಅವರನ್ನು ಮದುವೆಯಾಗಿದ್ದ ಅವರಿಗೆ ಇಬ್ಬರು ಪುತ್ರರು ಓರ್ವ ಪುತ್ರಿ ಇದ್ದಾರೆ. 2018 ಆಗಸ್ಟ್ 18ರಂದು ಅವರ ಪತ್ನಿ ನಿಧನರಾಗಿದ್ದರು.

2012ರಿಂದ 2017ರವರೆಗೆ ಭಾರತದ 13ನೇ ರಾಷ್ಟ್ರಪತಿಯಾಗಿ ಅತ್ಯುನ್ನತ ಹುದ್ದೆ ಅಲಂಕರಿಸಿದ್ದಾರೆ. ರಾಷ್ಟ್ರಪತಿಗಳಾಗುವ ಮುನ್ನ ಅವರು ವಿದೇಶಾಂಗ ಸಚಿವ, ರಕ್ಷಣಾ ಸಚಿವ ಮತ್ತು ಹಣಕಾಸು ಸಚಿವರಾಗಿಯೂ ಕೆಲಸ ಮಾಡಿದ್ದಾರೆ. ಅಪಾರ ರಾಜಕೀಯ ಅನುಭವ ಹೊಂದಿರುವ ಅವರು ರಾಷ್ಟ್ರಪತಿ ಅಧಿಕಾರ ಪೂರ್ಣಗೊಂಡ ಬಳಿಕ ಸಕ್ರಿಯ ರಾಜಕಾರಣದಿಂದ ದೂರವೇ ಉಳಿದಿದ್ದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss