spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Sunday, May 22, 2022

Latest Posts

ಭಾರೀ ಮುಸಲಧಾರೆಯಿಂದ ಮುಸುಕಿದ ರೈತರ ಬದುಕು: ನಾಶವಾಗಿ ನೆಲಕಚ್ಚಿದ ಮಟ್ಟುಗುಳ್ಳ ಬೆಳೆ

ಉಡುಪಿ: ಅನಿರೀಕ್ಷಿತವಾಗಿ ಸುರಿದ ಭಾರೀ ಮುಸಲಧಾರೆಯಿಂದ ಕೃಷಿಕರ ಬದುಕೇ ಮುಸುಕಿದೆ. ಇನ್ನೇನು ತಿಂಗಳೊಳಗೆ ಕೈಸೇರಲಿದ್ದ ಬೆಳೆಗಳೆಲ್ಲ ಕೊಳೆತು ನಾರುತ್ತಿದೆ. ಕೇವಲ ಒಂದು ಪ್ರದೇಶಕ್ಕಷ್ಟೇ ಸೀಮಿತವಾಗಿದ್ದ ಮಟ್ಟುಗುಳ್ಳ ಬೆಳೆ ನಾಶದಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
ಕಟಪಾಡಿ ಸಮೀಪದ ಮಟ್ಟು ಗ್ರಾಮದಲ್ಲಿ ಭತ್ತದ ಬೇಸಾಯ ಮಾಡದೇ ಗದ್ದೆಗಳನ್ನು ಹಡೀಲು ಬಿಟ್ಟು ಒಂದು-ಒಂದುವರೆ ತಿಂಗಳ ಹಿಂದೆ ಮಟ್ಟುಗುಳ್ಳದ ಸಸಿಗಳನ್ನು ನಾಟಿ ಮಾಡಲಾಗಿತ್ತು. ಮಟ್ಟು ಗ್ರಾಮದ 62 ರೈತರು 40 ಎಕರೆ ಪ್ರದೇಶದಲ್ಲಿ ಗುಳ್ಳದ ಗಿಡಗಳನ್ನು ಬೆಳೆಸಿದ್ದರು. ಗಿಡಗಳು ಹುಲುಸಾಗಿ ಬೆಳೆದು ಹೂವು ಬಿಡುವುದಕ್ಕೆ ತಯಾರಾಗಿದ್ದವು. ಆದರೆ ಗ್ರಾಮದಲ್ಲಿ ಹರಿಯುವ ಪಿನಾಕಿನಿ ಹೊಳೆಯ ಭೀಕರ ನೆರೆಯಿಂದಾಗಿ ಗದ್ದೆಗಳಲ್ಲಿ ನೀರು ನಿಂತು ಗಿಡಗಳೇ ಕೊಳೆತುಹೋಗಿವೆ.
15ಲಕ್ಷ ರೂ.ಗಳಿಗೂ ಅಧಿಕ ವೆಚ್ಚ :
ಸಾಮಾನ್ಯವಾಗಿ ಆಗಸ್ಟ್‌ನಲ್ಲಿ ಮಟ್ಟು ಗುಳ್ಳದ ಸಸಿಗಳನ್ನು ನಾಟಿ ಮಾಡಿದರೆ, ಅಕ್ಟೋಬರ್ ಎರಡನೇ ವಾರದಲ್ಲಿ ಗುಳ್ಳ ಕೊಯ್ಲಿಗೆ ಬರುತ್ತಿತ್ತು. ಈ ಬಾರಿ ಗುಳ್ಳದ ಗಿಡಗಳು ಹೂವು ಬಿಟ್ಟು, ಕಾಯಿ ಕಚ್ಚಿ, ಕೊಯ್ಲಿಗೆ ಬರಲು ಇನ್ನು 3-4 ವಾರಗಳಿರುವಾಗಲೇ ನೆರೆಗೆ ತುತ್ತಾಗಿವೆ. ಮಲ್ಚಿಂಗ್ ಮಾಡಿ ಸಸಿಗಳನ್ನು ನೆಡುವುದರಿಂದ ಎಕರೆಗೆ ಕನಿಷ್ಠ 40ಸಾವಿರ ರೂ.ವರೆಗೆ ವೆಚ್ಚ ಮಾಡಲಾಗಿದೆ. ಗ್ರಾಮದಲ್ಲಿ 15 ಲಕ್ಷ ರೂ.ಗಳಿಗೂ ಅಧಿಕ ವೆಚ್ಚ ಮಾಡಿ ಬೆಳೆಸಿದ ಮಟ್ಟುಗುಳ್ಳಬೆಳೆಯೀಗ ನೀರುಪಾಲಾಗಿದೆ.
ಇನ್ನೂ ಮೂರು ತಿಂಗಳು ವಿಳಂಬ:
ಸದ್ಯ ಗದ್ದೆಗಳಲ್ಲಿ ನೀರು ನಿಂತು ಬೆಳೆದಿರುವ ಗಿಡಗಳ ಬೇರುಗಳೆಲ್ಲ ಕೊಳೆತು ಹೋಗಿವೆ. ಇದರಿಂದ ಗಿಡಗಳೂ ಕೊಳೆತರೆ, ಇನ್ನು ಕೆಲವೆಡೆ ಬಾಡಿವೆ. ಇವುಗಳನ್ನೆಲ್ಲ ಕಿತ್ತು ತೆಗೆದು, ಹೊಸ ಸಸಿಗಳನ್ನು ನಾಟಿ ಮಾಡಬೇಕು. ಆದರೆ ಎಲ್ಲ ರೈತರು ನಾಟಿ ಕೆಲಸ ಮುಗಿಸಿದ್ದರಿಂದ ಯಾರಲ್ಲಿಯೂ ಸಸಿಗಳು ತಯಾರಿಲ್ಲ. ಹೊಸ ಸಸಿಗಳ ತಯಾರಿಗೆ ಇನ್ನೂ ಒಂದು ತಿಂಗಳು ಹಿಡಿಯುತ್ತದೆ. ಬಳಿಕ ಅವುಗಳನ್ನು ನಾಟಿ ಮಾಡಿ ಬೆಳೆ ಬರಲು ಇನ್ನೆರಡು ತಿಂಗಳು ಕಾಯಬೇಕು. ಆದ್ದರಿಂದ ಈ ಬಾರಿ ಮಾರುಕಟ್ಟೆಗೆ ಮಟ್ಟುಗುಳ್ಳ ಬರುವುದು ಇನ್ನೂ ಮೂರು ತಿಂಗಳು ವಿಳಂಬವಾಗಲಿದೆ.
ಫಸಲಿನ ನಿರೀಕ್ಷೆಯಲ್ಲಿತ್ತು, ಎಲ್ಲಾ ಹೋಯ್ತು:
ಮಟ್ಟು ಗ್ರಾಮದ ಅಳಿಂಜೆ ದೇವರಕುದ್ರುವಿನಲ್ಲಿ ಐದು ಮಂದಿ ಕೃಷಿಕರು ಗುಳ್ಳ ಬೆಳೆದಿದ್ದೆವು. ಎಲ್ಲ ಗದ್ದೆಗಳಲ್ಲಿನ ಗಿಡಗಳು ಹಾನಿಯಾಗಿವೆ. ನಾವು ಎಕರೆಗೆ 40-50 ಸಾವಿರ ರೂ. ಖರ್ಚು ಮಾಡಿದ್ದೇವೆ. ಎಲ್ಲವೂ ನಷ್ಟವಾಗಿದೆ. ಇನ್ನು ಸಸಿ ಮಾಡಿ, ನಾಟಿಯಾಗಿ ಫಸಲು ಬರಲು ಮೂರು ತಿಂಗಳು ಬೇಕು. ಈ ಸಲ ಕೊರೋನಾದಿಂದಾಗಿ ಪರವೂರಿನಲ್ಲಿರುವವರು ಕೂಡ ಊರಿಗೆ ಬಂದಿದ್ದರಿಂದ ಹೆಚ್ಚಿನ ಕೃಷಿಯಾಗಿತ್ತು. ಆದರೆ ಬೆಳೆದ ಬೆಳೆ ಕೈಗೆ ಬರುವ ಮೊದಲೇ ಎಲ್ಲ ನಾಶವಾಗಿದೆ ಎನ್ನುತ್ತಾರೆ ಮಟ್ಟುಗುಳ್ಳ ಬೆಳೆಗಾರ ಲಕ್ಷ್ಮಣ ಮಟ್ಟು.
ಉತ್ತಮ ಫಸಲಿನ ನಿರೀಕ್ಷೆಯಲ್ಲಿ ನೆಟ್ಟಿದ್ದ ಗಿಡಗಳು, ಫಸಲು ಬರುವುದಕ್ಕೆ ಮುನ್ನವೇ ಕಣ್ಣೆದುರು ನಾಶವಾಗಿರುವುದನ್ನು ಕಂಡು ರೈತ ಮರುಗುತ್ತಿದ್ದಾನೆ. ಮಟ್ಟುಗುಳ್ಳದ ಜೊತೆಯಲ್ಲಿ ಹರಿವೆ ಗಿಡಗಳನ್ನೂ ನಾಟಿ ಮಾಡಿದ್ದು, ಅವುಗಳೂ ನಾಶವಾಗಿವೆ. ಬೆಳೆ ಸಂಪೂರ್ಣ ನಾಶವಾಗಿ ಕಂಗಾಲಾಗಿರುವ ರೈತರು ಸರಕಾರದ ನೆರವಿನ ನಿರೀಕ್ಷೆಯಲ್ಲಿದ್ದಾರೆ.

- Advertisement -

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss

Sitemap