ಹೊಸ ದಿಗಂತ ವರದಿ, ವಿಜಯಪುರ:
ನಗರದ ದರಬಾರ ಹೈಸ್ಕೂಲ್ ಮೈದಾನದ ಬಳಿ ಭಿಕ್ಷೆ ಬೇಡುತ್ತಿದ್ದ ವೃದ್ಧನೊಬ್ಬನ ಹತ್ತಿರ ಕಂತೆ, ಕಂತೆಯಾಗಿ 81,310 ರೂ.ಗಳ ನೋಟುಗಳು ಪತ್ತೆಯಾಗಿದ್ದು, ಆತನ ಕುಟುಂಬಸ್ಥರಿಗೆ ಹಣ ಮರಳಿಸುವ ಮೂಲಕ ಇಲ್ಲಿನ ನಿರಾಶ್ರಿತರ ಕೇಂದ್ರದ ಅಧೀಕ್ಷಕಿ ಪದ್ಮಜಾ ಪಾಟೀಲ ಹಾಗೂ ಸಿಬ್ಬಂದಿ ಪ್ರಾಮಾಣಿಕತೆ ಮೆರೆದಿದ್ದಾರೆ.
ಇಲ್ಲಿನ ದರಬಾರ ಹೈಸ್ಕೂಲ್ ಮೈದಾನದ ಬಳಿ ಶುಕ್ರವಾರ ಭಿಕ್ಷೆ ಬೇಡುತ್ತ ನಿಂತಿದ್ದ ಭಿಕ್ಷುಕನ್ನು, ನಿರಾಶ್ರಿತರ ಕೇಂದ್ರದ ಸಿಬ್ಬಂದಿ ವಾಹನದಲ್ಲಿ ಕರೆತಂದು ತಪಾಸಣೆ ನಡೆಸಿದಾಗ, ಭಿಕ್ಷುಕನ ಜೋಳಿಗೆಯಲ್ಲಿ ಕಂತೆ ಕಂತೆ ಹಣ ಇರುವುದು ತಿಳಿದು ಬಂದಿದ್ದು, ಆಗ ಭಿಕ್ಷುಕನನ್ನು ವಿಚಾರಿಸಿದಾಗ, ಇಂಚಿಗೇರಿ ಗ್ರಾಮದ ಮುತ್ತಪ್ಪ ವಡೆಯರ ಎಂದು ತಿಳಿಸಿದ್ದು, ಕುರಿಗಳನ್ನು ಮೇಯಿಸಿದ್ದು ಹಾಗೂ ಕೂಲಿ ಕೆಲಸದಿಂದ ಸಂಪಾದಿಸಿದ ಹಣ ಎಂದು ತಿಳಿಸಿದ್ದಾನೆ. ಮನೆಯಲ್ಲಿ ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂಬ ಕಾರಣಕ್ಕೆ ಹಣದೊಂದಿಗೆ ಭಿಕ್ಷೆ ಬೇಡಿಕೊಂಡು ಬದುಕುತ್ತಿದ್ದೆ ಎಂದು ತಿಳಿಸಿದ್ದಾನೆ. ಅನಂತರ ಗ್ರಾಮಸ್ಥರ ಸಹಾಯದಿಂದ ಮುತ್ತಪ್ಪ ವಡೆಯರ ಈತನ ಮಗನನ್ನು ಕರೆಯಿಸಿ, ಮತ್ತೊಮ್ಮೆ ಭಿಕ್ಷೆ ಬೇಡದಂತೆ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು, ಹಣದ ಸಮೇತ ವೃದ್ಧನನ್ನು, ಆತನ ಮಗನೊಂದಿಗೆ, ಅವರ ಮನೆಗೆ ಕಳುಹಿಸಿಕೊಡಲಾಗಿದೆ ಎಂದು ನಿರಾಶ್ರಿತ ಕೇಂದ್ರದ ಅಧೀಕ್ಷಕಿ ಪದ್ಮಜಾ ಪಾಟೀಲ ಮಾಹಿತಿ ನೀಡಿದ್ದಾರೆ.