ಹೊಸ ದಿಗಂತ ವರದಿ ಶಿವಮೊಗ್ಗ:
ವಿರೋಧ ಪಕ್ಷದವರಿಗೆ ಬೇರೆ ವಿಚಾರ ಇಲ್ಲ. ಇದರಿಂದಾಗಿ ತಮ್ಮ ಮೇಲೆ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಸಂಸದ ಬಿ. ವೈ. ರಾಘವೇಂದ್ರ ಹೇಳಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರೈಲ್ವೆ ಟರ್ಮಿನಲ್ ಮಾಡಲು ಕೋಟೆ ಗಂಗೂರು ಸೂಕ್ತವೆಂದು ಇಲಾಖೆ ಅಧಿಕಾರಿಗಳೇ ಅಭಿಪ್ರಾಯ ಪಟ್ಟಿದ್ದಾರೆ. ಜಿಲ್ಲಾ ಕೇಂದ್ರದ ಸಮೀಪವಿರುವ ಜಾಗದಲ್ಲಿ ಟರ್ಮಿನಲ್ ಮಾಡಬೇಕೆಂದು ಸೂಚಿಸಲಾಗಿತ್ತು. ಹೀಗಾಗಿ ಇಲ್ಲಿ ಮಾಡಲಾಗಿದೆ ಎಂದರು.
ಭೂಮಾಫಿಯಾದಿಂದಾಗಿ ಕೋಟೆಗಂಗೂರಿನಲ್ಲಿ ರೈಲ್ವೆ ಟರ್ಮಿನಲ್ ಮಾಡಲಾಗುತ್ತಿದೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿರುವುದು ಸತ್ಯಕ್ಕೆ ದೂರವಾಗಿದೆ. ಭೂ ಮಾಫಿಯಾ ಇದರಲ್ಲಿದೆ ಎಂಬುದನ್ನು ದಾಖಲೆ ಸಮೇತ ಹೇಳಿದರೆ ಒಪ್ಪಿಕೊಳ್ಳಬಹುದು. ಅದು ಬಿಟ್ಟು ನಿರಾಧಾರ ಹೇಳಿಕೆ ಸರಿಯಲ್ಲ ಎಂದು ಹೇಳಿದರು.
ಮೀಟರ್ಗೇಜ್ ಮಾರ್ಗವನ್ನು ಬ್ರಾಡ್ಗೇಜ್ ಪರಿವರ್ತನೆಯಾಗಿದ್ದು ಬಿಜೆಪಿ ಅವಧಿಯಲ್ಲಿ. ಹೆಚ್ಚು ರೈಲುಗಳ ಸಂಚಾರಕ್ಕೆ ಕ್ರಮ ಕೈಗೊಂಡಿದ್ದು ತಮ್ಮ ಅವದೀಯಲ್ಲಿ ಎಂದ ವರು, ಒಟ್ಟಾರೆ ಜಿಲ್ಲೆಯ ಅಭಿವೃದ್ಧಿಯಿಂದ ಕೆಲಸ ಮಾಡಲಾಗುತ್ತಿದೆಯೇ ಹೊರತು ಯಾವುದೋ ಒಂದು ಊರಿನ ಅಭಿವೃದ್ಧಿಗೆ ಅಲ್ಲ. ಸಾಗರಕ್ಕೆ ರೈಲ್ವೆ ಪೊಲೀಸ್ ತರಬೇತಿ ಕೇಂದ್ರ ನೀಡಲಾಗಿದೆ. ಕಳಸವಳ್ಳಿ ಸೇತುವೆ ಆಗುತ್ತಿದೆ. ಇವುಗಳ ಬಗ್ಗೆ ಗಮನ ಹರಿಸಿ ಎಂದರು.
ರೈಲ್ವೆ ಟರ್ಮಿನಲ್ ಇಡೀ ದಕ್ಷಿಣ ಭಾರತ ರೈಲುಗಳಿಗೆ ಅನುಕೂಲವಾಗುವಂತೆ ನಿರ್ಮಾಣವಾಗುತ್ತಿದೆ. ಇದರಲ್ಲಿ ಸಾಗರ, ಶಿವಮೊಗ್ಗ ಎಂಬ ಪ್ರಶ್ನೆ ಇಲ್ಲ. ಮಂಕಿ ಪಾರ್ಕ್ಗೆ 5 ಕೋಟಿ ಬಿಡುಗಡೆಯಾಗಿದೆ. ಜಾಗ ಗುರುತಿಸುವ ಕೆಲಸ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಅದು ಆಗಲಿದೆ ಎಂದು ರಾಘವೇಂದ್ರ ಹೇಳಿದರು.