ಹೊಸ ದಿಗಂತ ವರದಿ, ಮಂಡ್ಯ :
ಕೈಗಾರಿಕಾಭಿವೃದ್ಧಿಗೆ ಭೂಮಿಯನ್ನು ಸ್ವಾಧೀನಕ್ಕೆ ಪಡೆಯುವ ಸಮಯದಲ್ಲಿ ರೈತರಿಂದ ಬಲವಂತವಾಗಿ ಭೂಮಿಯನ್ನು ವಶಕ್ಕೆ ಪಡೆಯದೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಭೂಮಿಯನ್ನು ಪಡೆದುಕೊಳ್ಳಬೇಕು ಎಂದು ಸಂಸದೆ ಸುಮಲತಾ ಅಂಬರೀಶ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ನಗರದ ಜಿಲ್ಲಾ ಪಂಚಾಯಿತಿಯ ಕಾವೇರಿ ಸಭಾಂಗಣದಲ್ಲಿ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ಹಾಗೂ ಕೇಂದ್ರ ವಲಯ, ಕೇಂದ್ರ ಪುರಸ್ಕøತ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಕಾಳಿಂಗನಹಳ್ಳಿ ವ್ಯಾಪ್ತಿ ಪ್ರದೇಶದಲ್ಲಿ ಭೂ ಸ್ವಾಧೀನಕ್ಕೆ ವಿರೋಧಗಳು ಮೇಲೆದ್ದಿರುವ ಬಗ್ಗೆ ಸಂಸದೆ ಸುಮಲತಾ ಪ್ರಶ್ನಿಸಿದಾಗ, ಈ ಪ್ರದೇಶದ 400 ಎಕರೆ ಭೂಮಿಯನ್ನು ಗುರುತಿಸಿದ್ದು ಅದರಲ್ಲಿ ಇಲ್ಲಿಯವರೆಗೆ 97 ಎಕರೆ 21 ಗುಂಟೆ ಜಮೀನನ್ನು ಮಾತ್ರ ಸ್ವಾಧೀನಪಡಿಸಿಕೊಳ್ಳಲಾಗಿದೆ. ಭೂ ಸ್ವಾಧೀನಕ್ಕೆ ಗುರುತಿಸಿರುವ 1277 ಎಕರೆ ಪ್ರದೇಶದಲ್ಲಿ 400 ಎಕರೆ ಸರ್ಕಾರಿ ಸರ್ವೆ ನಂಬರ್ನಲ್ಲೇ ಇದೆ ಎಂದು ಅಧಿಕಾರಿ ಉತ್ತರಿಸಿದರು.
ಆಗ ಮಧ್ಯಪ್ರವೇಶಿಸಿದ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರು, ಕಾಳಿಂಗನಹಳ್ಳಿ ವ್ಯಾಪ್ತಿಯಲ್ಲಿ ಬರುವ ಹಟ್ನ ಎಂಬ ಗ್ರಾಮದ 300 ಎಕರೆ ಜಮೀನಿನಲ್ಲಿ ರೈತರು ತೆಂಗು, ಅಡಕೆ, ಮಾವು ಬೆಳೆದಿದ್ದಾರೆ. ಅವರು ಜಮೀನನ್ನು ಬಿಟ್ಟುಕೊಡಲು ಒಪ್ಪುತ್ತಿಲ್ಲ. ಅದಕ್ಕಾಗಿ ಈ ಭಾಗದಲ್ಲಿ ಭೂ ಸ್ವಾಧೀನ ಕೈಬಿಟ್ಟು ಒಣ ಪ್ರದೇಶವಿರುವ ಕಡೆ 300 ಎಕರೆ ಸ್ವಾಧೀನಕ್ಕೆ ತೀರ್ಮಾನಿಸಲಾಗಿದೆ. 400 ಎಕರೆ ಸರ್ಕಾರಿ ಜಮೀನು ಸೇರಿ 700 ಎಕರೆ ಒಣಭೂಮಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಅನುಕೂಲವಾಗಲಿದೆ ಎಂದರು.