Sunday, June 26, 2022

Latest Posts

ಭೂಸುಧಾರಣೆ ತಿದ್ದುಪಡಿ ಕಾಯ್ದೆ ಜಾರಿ ವಿರುದ್ಧ ವಾಟಾಳ್ ನಾಗರಾಜ್ ಆಕ್ರೋಶ

ಮೈಸೂರು: ರಾಜ್ಯ ಸರ್ಕಾರ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ಮಾಡಿ ಜಾರಿಗೊಳಿಸುತ್ತಿರುವ ವಿರುದ್ಧ ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷರಾದ ಮಾಜಿ ಶಾಸಕ ವಾಟಾಳ್ ನಾಗರಾಜ್ ಭಾನುವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಸಿದರು.
ಟಾಂಗಾ ಗಾಡಿಯಲ್ಲಿ ನಗರದ ಕೆ.ಆರ್.ವೃತ್ತಕ್ಕೆ ಆಗಮಿಸಿದ ಅವರು, ಕೆಲಕಾಲ ಪ್ರತಿಭಟನೆ ನಡೆಸಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ದೇವರಾಜ ಅರಸು ಅವರು ಮುಖ್ಯಮಂತ್ರಿಯಾಗಿದ್ದಾಗ, ಉಳುವವನೇ ಭೂಮಿ ಒಡೆಯ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಇದರಿಂದಾಗಿ ಭೂಮಿಯ ಉಳಿಮೆ ಮಾಡುತ್ತಿದ್ದ ರೈತರೇ ಆ ಭೂಮಿಯ ಮಾಲೀಕರಾಗಿದ್ದರು. ಆದರೆ ಈಗ ಆ ಕಾಯ್ದೆಗೆ ತಿದ್ದುಪಡಿ ತರುತ್ತಿರುವುದು ರೈತರ ಪಾಲಿಗೆ ಕರಾಳವಾಗಿದೆ. ರೈತರ ಜಮೀನುಗಳನ್ನು ಹರಾಜು ಹಾಕಲಾಗುತ್ತಿದೆ. ಶ್ರೀಮಂತರು, ರಿಯಲ್ ಎಸ್ಟೇಟ್ ಉದ್ಯಮಿಗಳು ರೈತರ ಜಮೀನುಗಳನ್ನು ಖರೀದಿಸುತ್ತಿದ್ದಾರೆ. ಇದರಿಂದಾಗಿ ಜಮೀನು ಕಳೆದುಕೊಳ್ಳುವ ರೈತರ ಕುಟುಂಬಗಳು ಬೀದಿಗೆ ಬೀಳಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ರೈತರ ಜಮೀನು ಹರಾಜು ಮಾಡುತ್ತಿದ್ದಾರೆ. ಇದನ್ನು ಹೀಗೆಯೇ ಬಿಟ್ಟರೆ, ಮುಂದೊoದು ದಿನ ವಿಧಾನಸೌಧವನ್ನು ಮಾರಾಟ ಮಾಡಿಬಿಡುತ್ತಾರೆ ಎಂದು ಸರ್ಕಾರದ ನಿಲುವಿನ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ದಿನೇ ದಿನೇ ಕೊರೋನಾ ವೈರಾಣು ಸೋಂಕು ಬಹಳ ವೇಗವಾಗಿ ಹರಡುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ಸೋಂಕನ್ನು ನಿಯಂತ್ರಿಸುವುದಕ್ಕಾಗಿ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟದ ಕಾರಣ ಹೇಳಿ ಹಿಂದೇಟು ಹಾಕುತ್ತಿದೆ. ಹಾಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ತಕ್ಷಣವೇ ಗಮನಹರಿಸಬೇಕು, ರಾಜ್ಯದ ನೆರವಿಗೆಂದು ತಕ್ಷಣವೇ ೫ ಸಾವಿರ ಕೋಟಿರೂ ಪರಿಹಾರವನ್ನು ಬಿಡುಗಡೆ ಮಾಡಬೇಕು, ಕೊರೋನಾ ಸೋಂಕು ತಡೆಯುವುದಕ್ಕಾಗಿ ಅಗತ್ಯವಿರುವಂತಹ ಎಲ್ಲಾ ನೆರವನ್ನು ಕೂಡಲೇ ಒದಗಿಸಬೇಕು ಎಂದು ಆಗ್ರಹಿಸಿದರು. ಯಾವುದೇ ಕಾರ್ಯಕ್ರಮದಲ್ಲಿ ಯಾರೇ ಆಗಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳದಿದ್ದರೆ, ಮಾಸ್ಕ್ ಧರಿಸದಿದ್ದರೆ, ಅಂತಹವರನ್ನು ಜೈಲಿಗೆ ಹಾಕಬೇಕು ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss