ಹೊಸ ದಿಗಂತ ವರದಿ, ಮಡಿಕೇರಿ:
ಭಾರತೀಯ ಭೂ ಸೇನೆಯಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಚೆನ್ನೀರ ಬನ್ಸಿ ಪೊನ್ನಪ್ಪ(ಎವಿಎಸ್ಎಂ, ವಿಎಸ್ಎಂ) ಅವರು ಜಲಂಧರ್ನಲ್ಲಿರುವ ಭಾರತೀಯ ಭೂ ಸೇನೆಯ 11 ಕಾರ್ಪ್ಸ್ ಕಮಾಂಡರ್ ಆಗಿ ನೇಮಕಗೊಂಡಿದ್ದಾರೆ.
ಜಮ್ಮುವಿನ ಉದಂಪುರದಲ್ಲಿ ಉತ್ತರ ವಲಯದ ಕಚೇರಿಯಲ್ಲಿ ಚೀಫ್ ಆಫ್ ಸ್ಟಾಫ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬನ್ಸಿ ಪೊನ್ನಪ್ಪ ಅವರು ಆ ಮೂಲಕ ತಮ್ಮ ಸಾಧನೆಯ ಹಾದಿಯಲ್ಲಿ ಮತ್ತೊಂದು ಮೈಲಿಗಲ್ಲು ಕ್ರಮಿಸಿದ್ದಾರೆ.
ಈಗಾಗಲೇ ಭಾರತೀಯ ಭೂ ಸೇನೆಯಲ್ಲಿ ಕೊಡಗು ಜಿಲ್ಲೆಯವರಾದ ಇಬ್ಬರು ಅಧಿಕಾರಿಗಳು ಲೆಫ್ಟಿನೆಂಟ್ ಜನರಲ್ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಲೆಫ್ಟಿನೆಂಟ್ ಜನರಲ್ ಕೋದಂಡ ಪೂವಯ್ಯ ಕಾರ್ಯಪ್ಪ (ಎವಿಎಸ್ಎಂ, ಎಸ್ಎಂ, ವಿಎಸ್ಎಂ) ಅವರು ಮಥುರಾದಲ್ಲಿರುವ ಭಾರತೀಯ ಭೂ ಸೇನೆಯ 1 ಕಾರ್ಪ್ಸ್ ಕಮಾಂಡರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಬ್ಬರ ಸೇನಾ ಸಾಧನೆಯಿಂದ ಕೊಡಗು ಜಿಲ್ಲೆಯ ವೀರ ಪರಂಪರೆ ಮತ್ತೊಂದು ಗರಿ ಮೂಡಿದಂತಾಗಿದೆ.