ರಾಮನಗರ: ಭ್ರಷ್ಟಾಚಾರ ಎಂಬುದು ಮಹಾಪಿಡುಗಾಗಿದ್ದು, ಭ್ರಷ್ಟಚಾರವನ್ನು ಹೋಗಲಾಡಿಸಲು ಸಮಾಜದ ನೆರವು ಬಹಳ ಅಗತ್ಯವಾಗಿದೆ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಜೆಎಂಎಫ್ಸಿ ಮಹೇಂದ್ರ.ಎ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ನಗರದ ನ್ಯಾಯಾಲಯದ ಆವರಣದಲ್ಲಿ ಆಯೋಜಿಸಲಾಗಿದ್ದ ಕೇಂದ್ರ ವಿಚಕ್ಷಣ ಆಯೋಗ, ಕರ್ನಾಟಕ ಸರ್ಕಾರ, ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಮನಗರ, ತಾಲ್ಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ, ತಾಲ್ಲೂಕು ಪಂಚಾಯ್ತಿ ಹಾಗೂ ನಗರಸಭೆ ಇವರ ಸಂಯುಕ್ತಾಶ್ರಯದ ಭ್ರಷ್ಟಾಚಾರ ಜಾಗೃತಿ ಅರಿವು ಸಪ್ತಾಹದಲ್ಲಿ ಆಟೋ ಪ್ರಚಾರಕ್ಕೆ ಹಸಿರು ಬಾವುಟ ಹಾರಿಸುವುದರ ಮುಖಾಂತರ ಚಾಲನೆ ನೀಡಿ ಮಾತನಾಡಿದರು. ಸಮಾಜದಲ್ಲಿ ಬೇರು ಬಿಟ್ಟಿರುವ ಭ್ರಷ್ಟಾಚಾರಕ್ಕೆ ಸಮಾಜವೇ ಒಂದಲ್ಲಾ ಒಂದು ರೀತಿಯ ಕಾರಣವಾಗಿದ್ದು, ಭ್ರಷ್ಟಾಚಾರ ಮಾಡುವುದಕ್ಕಿಂತ ಭ್ರಷ್ಟಾಚಾರಕ್ಕೆ ಬೆಂಬಲ ನೀಡುವುದು ಬಹಳ ಅಪರಾಧವಾಗಿದೆ ಎಂದು ಎಚ್ಚರಿಸಿದರು. ಕೇವಲ ಭ್ರಷ್ಟಾಚಾರದ ಆಂದೋಲನ ಮಾಡಿದರೆ ಸಾಲದು. ಭ್ರಷ್ಟಾಚಾರವನ್ನು ಬೇರು ಸಹಿತ ಕಿತ್ತು ಹಾಕಲು ನಾವು ನೀವು ಎಲ್ಲಾ ಪ್ರತಿಜ್ಞೆ ಮಾಡಬೇಕು. ಭ್ರಷ್ಟಾಚಾರ ಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರೂ ಬದ್ದರಾಗಬೇಕೆಂದರು. ನಗರಸಭೆ ಪೌರಾಯುಕ್ತ ಶಿವನಂಕರಿಗೌಡ ಮಾತನಾಡಿ, ಭ್ರಷ್ಟಚಾರ ಎಂಬುದು ಸಮಾಜದಲ್ಲಿ ಕಲುಷಿತ ವಾತಾವರಣವನ್ನು ಸೃಷ್ಠಿ ಮಾಂಡಿ ಭ್ರಷ್ಟಾಚಾರವನ್ನು ಹೋಗಲಾಡಿಸಲು ಒಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರ ಸಹಕಾರ ಅತಿ ಅಗತ್ಯವಾಗಿದೆ ಎಂದರು. ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಚಂದ್ರ, ಸಹಾಯಕ ಸರ್ಕಾರಿ ಅಭಿಯೋಜಕ ವೀರಭದ್ರಯ್ಯ ಹಾಗೂ ಹಲವಾರು ಮಂದಿ ವಕೀಲರು ಹಾಜರಿದ್ದರು.