Thursday, August 18, 2022

Latest Posts

ಮಂಗಳವಾರ ಉಡುಪಿಯಲ್ಲಿ ಐದು ಜನರಿಗೆ ಕೋವಿಡ್ ಸೋಂಕು ದೃಢ

ಉಡುಪಿ: ಕೋವಿಡ್-19 ಸೋಂಕು ಪರೀಕ್ಷೆ ನಡೆದು ಮಂಗಳವಾರ ಲಭಿಸಿದ ಉಡುಪಿ ಜಿಲ್ಲೆಯ 109 ವರದಿಗಳಲ್ಲಿ 5ಜನರಿಗೆ ಸೋಂಕು ತಗುಲಿರುವುದು ಖಚಿತವಾಗಿದೆ. ಗರ್ಭಿಣಿ, 8ರ ಹರೆಯದ ಬಾಲಕ, ಕ್ಯಾನ್ಸರ್ ಪೀಡಿತೆ ಹಾಗೂ ಇಬ್ಬರು ಯುವಕರಿಗೆ ಸೋಂಕು ಅಂಟಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.
ಮಂಗಳವಾರ ದೊರೆತ ಉಳಿದ 104 ಮಂದಿಯಲ್ಲಿ ಸೋಂಕು ಇಲ್ಲದಿರುವುದು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 16 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಇಬ್ಬರು ಗರ್ಭಿಣಿಯರಿದ್ದರೆ, ಚಿತ್ರದುರ್ಗದಿಂದ ಕ್ಯಾನ್ಸರ್ ಚಿಕಿತ್ಸೆಗಾಗಿ ಬಂದಿರುವ ಯುವತಿಯಲ್ಲೂ ಸೋಂಕು ಕಾಣಿಸಿಕೊಂಡಿದೆ. ಅವರು ಸಹಿತ 12 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ 46, ವಿವಿಧ ಹಾಟ್‌ಸ್ಪಾಟ್‌ಗಳಿಂದ ಆಗಮಿಸಿದ 171 ಜನ, ಒಬ್ಬರು ತೀವ್ರ ಉಸಿರಾಟದ ಸಮಸ್ಯೆ ಹಾಗೂ ನಾಲ್ವರು ಶೀತಜ್ವರ ಇರುವವರು ಒಟ್ಟು 222 ಮಂದಿಯ ಗಂಟಲ ದ್ರವ ಮಾದರಿಯನ್ನು ಮಂಗಳೂರು ಮತ್ತು ಮಣಿಪಾಲ ಪ್ರಯೋಗಾಲಯಗಳಿಗೆ ಕಳುಹಿಸಲಾಗಿದೆ. ಇವರದ್ದೂ ಸೇರಿದಂತೆ ಒಟ್ಟು 654 ಮಂದಿಯ ಪರೀಕ್ಷಾ ವರದಿಗಳನ್ನು ನಿರೀಕ್ಷಿಸಲಾಗುತ್ತಿದೆ. ಈವರೆಗೆ 2692 ಮಂದಿಯ ಗಂಟಲ ದ್ರವ ಮಾದರಿಯನ್ನು ಪರೀಕ್ಷೆಗಾಗಿ ಪಡೆಯಲಾಗಿದ್ದು, 2022 ಜನರಲ್ಲಿ ಸೋಂಕಿಲ್ಲದಿರುವುದು ಖಚಿತವಾಗಿದೆ.
ಏಳು ಮಂದಿ ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದವರು, ಇಬ್ಬರು ಶೀತಜ್ವರ ಮತ್ತು ಏಳು ಜನ ತೀವ್ರ ಉಸಿರಾಟದ ತೊಂದರೆಯಿಂದ ಒಟ್ಟು 16 ಜನ ಜಿಲ್ಲೆಯ ವಿವಿಧ ಆಸ್ಪತ್ರೆಗಳಲ್ಲಿರುವ ಪ್ರತ್ಯೇಕಿತ ವಾರ್ಡ್‌ಗಳಿಗೆ ಹೊಸದಾಗಿ ದಾಖಲಾಗಿದ್ದಾರೆ. ಪ್ರತ್ಯೇಕಿತ ವಾರ್ಡ್‌ಗಳಲ್ಲಿ ಒಟ್ಟು 87 ಮಂದಿ ನಿಗಾದಲ್ಲಿದ್ದಾರೆ. ಹೈರಿಸ್ಕ್ ಮತ್ತು ಲೋರಿಸ್ಕ್‌ನ 56 ಜನ ಆಸ್ಪತ್ರೆ ದಿಗ್ಬಂಧನದಲ್ಲಿ ನಿಗಾದಲ್ಲಿದ್ದಾರೆ.
ಹೊಸದಾಗಿ ತೀವ್ರ ಉಸಿರಾಟದ ಸಮಸ್ಯೆ, ಪ್ರಯಾಣಿಕರು ಮತ್ತು ಕೋವಿಡ್ ಸೋಂಕಿತರ ಸಂಪರ್ಕಕ್ಕೆ ಬಂದ 33 ಮಂದಿ ನೋಂದಣಿಯಾಗಿದ್ದು, 75 ಜನ 28 ದಿನಗಳ ಹಾಗೂ 106 ಮಂದಿ 14 ದಿನಗಳ ಗೃಹ ದಿಗ್ಬಂಧನ ಅವಧಿ ಪೂರೈಸಿದ್ದಾರೆ. ಪ್ರಸ್ತುತ 424 ಜನರು ಗೃಹ ದಿಗ್ಬಂಧನದಲ್ಲಿದ್ದಾರೆ ಎಂದು ಡಿಎಚ್‌ಒ ಡಾ. ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!