ಮಂಗಳೂರು: ಸೋಮವಾರ ಕೊರೋನಾ ಪತ್ತೆಯಾದ ಎಕ್ಕೂರು ನಿವಾಸಿ ೨೭ ವರ್ಷದ ಯುವಕನಿಗೆ ಸೋಂಕು ಇದೆ ಎಂಬುದು ಆರೋಗ್ಯ ಸೇತು ಆಪ್ ಮೂಲಕ ಬೆಳಕಿಗೆ ಬಂದಿದೆ ಎನ್ನಲಾಗಿದೆ.
27 ವರ್ಷದ ಯುವಕನಿಗೆ ಕೊರೋನಾ ಇದೆ ಎಂಬ ಮಾಹಿತಿ ಆರೋಗ್ಯ ಸೇತು ಆಪ್ ಮೂಲಕ ಆತನ ಪಕ್ಕದ ಮನೆಯವರಿಗೆ ಮಾಹಿತಿ ಲಭಿಸಿತ್ತು. ಕೋವಿಡ್ ಲಕ್ಷಣದ ವ್ಯಕ್ತಿ ಸಮೀಪವಿದ್ದ ಕಾರಣ ಆಪ್ ಎಚ್ಚರಿಕೆ ಸಂದೇಶವನ್ನು ಅವರಿಗೆ ರವಾನಿಸಿತ್ತು. ಈ ಹಿನ್ನೆಲೆಯಲ್ಲಿ ಊರಿನವರು ಯುವಕನನ್ನು ವಿಚಾರಿಸಿ, ಪರೀಕ್ಷೆಗೊಳಪಡಿಸಿದಾಗ ಪಾಸಿಟಿವ್ ವರದಿ ಬಂದಿದೆ.
ಈ ಯುವಕ ಮಂಗಳೂರಿನಲ್ಲಿ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದ್ದು, ಆತನಿಂದ ಮೀನು ಖರೀದಿಸಿದ ಜನರ ಸಹಿತ ನಗರದ ನಾಗರಿಕರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ. ಈತ ನಗರದ ಬಂದರಿಗೆ ತೆರಳಿ ಮೀನು ಖರೀದಿಸಿ ಮನೆ ಮನೆಗಳಿಗೆ ಮಾರಾಟ ಮಾಡುತ್ತಿದ್ದ. ಆತನ ಜೊತೆ ಸಂಪರ್ಕವಿದ್ದವರ ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ ನಿರತವಾಗಿದೆ. ಬಂದರು ದಕ್ಕೆ ಪ್ರದೇಶದಲ್ಲಿ ರಸ್ತೆಗಳಿಗೆ ಬ್ಯಾರಿಕೇಡ್ ಇರಿಸಿ ಪ್ರವೇಶ ನಿಯಂತ್ರಿಸಲಾಗಿದೆ.